ಕಲೆಕ್ಷನ್ ಲೆಕ್ಕ ಒಪ್ಪಿಸಲು ಇಡೀ ಸರಕಾರ ಹೈಕಮಾಂಡ್ ಎದುರು ಹಾಜರು ಎಂದು ಲೇವಡಿ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಹಲವಾರು ಸಚಿವರು ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ನಾಯಕರು ದಿಲ್ಲಿಯಲ್ಲಿ ಹೈಕಮಾಂಡ್ ಭೇಟಿಗೆ ತೆರಳಿರುವುದನ್ನು ಬಿಜೆಪಿ ಲೇವಡಿ ಮಾಡಿದ್ದು, ‘ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ವಯಲಿನ್ ಬಾರಿಸುತ್ತಾ ಕುಳಿತ ರೀತಿ ರಾಜ್ಯ ಪ್ರವಾಹ, ಬೆಲೆಯೇರಿಕೆಯಿಂದ ತತ್ತರಿಸುತ್ತಿರುವಾಗ ಸಿಎಂ, ಸಚಿವರು, ಶಾಸಕರು ಕರ್ನಾಟಕ ತೊರೆದು ದಿಲ್ಲಿಯಲ್ಲಿ ಯಲ್ಲಿ ಬೀಡು ಬಿಟ್ಟಿದ್ದಾರೆ ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆ ಗಲಾಟೆಯಲ್ಲಿ ಅಂತ್ಯವಾದ ಕಾರಣ, ಹೈಕಮಾಂಡ್ ಸಂಧಾನ ಮಾಡಲು ನಾಯಕರನ್ನು ದಿಲ್ಲಿಗೆ ಕರೆಸಿಕೊಂಡಿದೆ. ಈ ರಾಜಿ ಸಂಧಾನದ ಪ್ರಮುಖಾಂಶಗಳು’ ಎಂದು ಬಿಜೆಪಿ ಪಟ್ಟಿಯೊಂದನ್ನು ನೀಡಿದೆ.
- ಮುಖ್ಯಮಂತ್ರಿಗಳ ಪುತ್ರನ ದರ್ಬಾರ್..!
- ವರ್ಗಾವಣೆ ದಂಧೆಯಲ್ಲಿ ಆದ ಕಮಾಯಿ..!
- ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ವಸೂಲಿ..!
- ಪ್ರಿಯಾಂಕ್ ಖರ್ಗೆಯ ಮೂಗು ತೂರಿಸುವಿಕೆ..!
- ಜಿಹಾದಿಗಳ ರಕ್ಷಣೆಗೆ ಪ್ರಮುಖ ಆದ್ಯತೆ..!
- ಲೋಕಸಭಾ ಚುನಾವಣೆಗೂ ಮುನ್ನ ಹಿಂದೂಗಳನ್ನು ಹತ್ತಿಕ್ಕುವುದು.!
- ರಾಜ್ಯ ಸರಕಾರಕ್ಕೆ ಹತ್ತು ರಾಜ್ಯಗಳ ಎಲೆಕ್ಷನ್ ಜವಾಬ್ದಾರಿ..!
- ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಕೈವಾಡ..!
- ಗ್ಯಾರಂಟಿ ಹೆಸರಲ್ಲಿ ಮತ್ತಷ್ಟೂ ತೆರಿಗೆ ಏರಿಕೆ..!
- ಲೋಕಸಭಾ ಚುನಾವಣೆ ನಂತರ ಗ್ಯಾರಂಟಿಗಳನ್ನು ಕೈ ಬಿಡುವುದು..! ಎಂದು ಕಾಂಗ್ರೆಸ್ ಹೈಕಮಾಂಡ್ ಸಭೆಯ ಬಗ್ಗೆ ಬಿಜೆಪಿ ಟ್ವೀಟ್‌ನಲ್ಲಿ ಕಾಲೆಳೆದಿದೆ.
ರಾಜ್ಯದಲ್ಲಿ ಕಲುಷಿತ ನೀರು, ಅನ್ನದಾತನ ಆತ್ಮಹತ್ಯೆ, ಬೆಲೆ ಏರಿಕೆಯಿಂದಾಗಿ ಜನರು ರೋಸಿ ಹೋಗಿದ್ದರೆ, ಇಡೀ ಸರ್ಕಾರ ದಿಲ್ಲಿಯಲ್ಲಿ ಕೂತು ಮಜಾ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಪ್ರಕೃತಿ ವಿಕೋಪದ ಪರಿಸ್ಥಿತಿ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಜನರ ಸಮಸ್ಯೆಗಳಿಗೆ ದನಿಯಾಗಿ, ಪರಿಹಾರ ಕಾರ್ಯದಲ್ಲಿ ಭಾಗಿಯಾಗಬೇಕು. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಮಾತ್ರ ದೊರೆಗಳ ಮುಂದೆ ತನ್ನ ಕೊಳಲು ಬಾರಿಸಲು ದೆಹಲಿಗೆ ಹೋಗಿದೆ ಎಂದು ವ್ಯಂಗ್ಯವಾಡಿದೆ. ಪ್ರವಾಹ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಸ್ಥಳೀಯ ಮಟ್ಟದಲ್ಲಿ ಲಭ್ಯವಿರಬೇಕಾಗಿದ್ದ ಶಾಸಕರನ್ನು ಒತ್ತಾಯಪೂರ್ವಕವಾಗಿ ಬೆಂಗಳೂರಿಗೆ ಕರೆಸಿ ಸಿದ್ದರಾಮಯ್ಯರವರು ಹೊತ್ತಲ್ಲದ ಹೊತ್ತಲ್ಲಿ ಶಾಸಕಾಂಗ ಸಭೆ ನಡೆಸಿದ್ದರು. ಈಗ ಪ್ರವಾಹ ಪೀಡಿತ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನ ನಡೆಸಿ, ಪರಿಹಾರ ಕಾರ್ಯಕ್ರಮಗಳನ್ನು ಘೋಷಿಸಬೇಕಾಗಿದ್ದ ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರ ಜೊತೆ ತಮ್ಮ ತಮ್ಮ ಇಲಾಖೆಯ ಕಲೆಕ್ಷನ್ ಲೆಕ್ಕ ಒಪ್ಪಿಸಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಕುಟುಕಿದೆ.
ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಪಟಾಲಂ ಅನ್ನು ಸಾಕಲು ಹೇರಳ ಧನ ಸಂಗ್ರಹದಲ್ಲಿ ತೊಡಗಿದೆ. ಪರಿಣಾಮವಾಗಿ ಇಲ್ಲಿನ ಮುಖ್ಯಮಂತ್ರಿಗಳು ಹಾಗೂ ವಿವಿಧ ಪ್ರಮುಖ ಇಲಾಖೆಗಳ ಸಚಿವರನ್ನು ಪದೇಪದೆ ಕರೆಸಿ ಕಲೆಕ್ಷನ್‌ನ ಹೊಸ ಟಾರ್ಗೆಟ್ ನೀಡುತ್ತಿದೆ. ತಮಗೆ ಮತ ನೀಡಿರುವ ಜನತೆಯನ್ನು ಸಂಕಷ್ಟದ ಸಮಯದಲ್ಲಿ ಭೇಟಿಯಾಗಬೇಕಿದ್ದ ಮುಖ್ಯಮಂತ್ರಿಗಳು ಮತ್ತು ಕಂಪನಿ ತಮ್ಮ ಜವಾಬ್ದಾರಿ ಮರೆತು ದಿಲ್ಲಿಯಲ್ಲಿ ಕೂತು ಸಮಯ ಕಳೆಯುತ್ತಿರುವುದು ಖಂಡನೀಯ. ಆದರೆ ಹಿಂದಿರುಗಿ ಬಂದ ನಂತರ ಮತ್ತಷ್ಟು ಕಲೆಕ್ಷನ್ ಹೆಚ್ಚು ಮಾಡಲಿರುವ ಅವರು ಮರಳಿ ಬಂದರೂ ರಾಜ್ಯಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಹೆಳಿದೆ.









































