ಹೆಬ್ರಿ : ಪಿ. ಆರ್. ಎನ್. ಅಮೃತಭಾರತಿ ವಿದ್ಯಾಲಯದಲ್ಲಿ ಜು. 26 ರಂದು ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಅವರು ಮಾತನಾಡಿ, ಕಾರ್ಗಿಲ್ ಜಿಲ್ಲೆ ನಮ್ಮ ದೇಶದ ಯೋಧರು ಪಾಕಿಸ್ತಾನದ ಯೋಧರೊಂದಿಗೆ ಹೋರಾಡಿ ಗೆಲ್ಲುವ ಮೂಲಕ ಮರಳಿ ಪಡೆದ ಭೂ ಭಾಗವಾಗಿದೆ. ದೇಶ ರಕ್ಷಣೆಗಾಗಿ ನಮ್ಮ ಸಹೋದ್ಯೋಗಿ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಹೋರಾಟದ ಪ್ರತಿಫಲವೇ ಇಂದಿನ ನಮ್ಮ ಭಾರತ. ದೇಶ ಭಕ್ತಿ ಎಂಬುದು ಪ್ರತಿಯೊಬ್ಬ ಪ್ರಜೆಯಲ್ಲೂ ಜಾಗೃತವಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ದೇಶ ಸೇವೆಗೆ ಸದಾ ಸಿದ್ಧರಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ ಮಾತನಾಡಿ, ಭಾರತೀಯ ಸೇನೆ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದೆ. ಯೋಧರು ಇಡೀ ದೇಶವನ್ನೇ ನಮ್ಮ ಮನೆಯೆಂಬ ಭಾವದಲ್ಲಿ ಕಾರ್ಯನಿರ್ವಹಿಸುತ್ತಾರೆ. ಇಂತಹ ದೇಶಪ್ರೇಮ ಭಾರತದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಜೀವನದ ಒಂದು ಭಾಗವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಲಯದ ಮುಖ್ಯಸ್ಥೆ ಅಪರ್ಣಾ ಆಚಾರ್ ಹಾಗೂ ಬೋಧಕ ವೃಂದ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಅನಿತಾ ಸ್ವಾಗತಿಸಿ, ರೇಖಾ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕಿ ಮೀನಾಕ್ಷಿ ವಂದಿಸಿದರು.







































