ಖಾಸಗಿ ವ್ಯಕ್ತಿಗಳ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳ ಸಾಲದ ವ್ಯವಹಾರವನ್ನು ನಿಯಂತ್ರಿಸಲು ರಾಜ್ಯ ಸರಕಾರವು ಬಹಳ ವರ್ಷಗಳ ಹಿಂದೆಯೇ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಎಂಬ ಕಾನೂನನ್ನು ಬಹಳ ಹಿಂದೆಯೇ ಜಾರಿಗೆ ತಂದಿದ್ದು ಇದರಲ್ಲಿ ಮಿತಿಮೀರಿದ ಬಡ್ಡಿ ಎಂಬ ಶಬ್ಧದ ಅರ್ಥವನ್ನು ಉಲ್ಲೇಖಿಸಿದೆ. ಇದರನ್ವಯ ರಾಜ್ಯ ಸರಕಾರವು ಖಾಸಗಿ ಸಾಲದ ವ್ಯವಹಾರವನ್ನು ಮತ್ತು ಅದರ ಮೇಲಿನ ಬಡ್ಡಿಯ ದರವನ್ನು ನಿಯಂತ್ರಿಸಲು ವಿವಿಧ ಕ್ರಮವನ್ನು ಕೈಗೊಂಡು ಬಡ್ಡಿಯ ದರವನ್ನು ಸಹಾ ನಿಗದಿಸಿದೆ. ಅದಾಗ್ಯೂ ಅನೇಕ ಖಾಸಗಿ ವ್ಯಕ್ತಿಗಳು ಅಥವಾ ಖಾಸಗಿ ಹಣಕಾಸು ಸಂಸ್ಥೆಗಳು ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ತಾವು ನೀಡುವ ಸಾಲದ ಮೇಲೆ ಮಿತಿಮೀರಿದ ಬಡ್ಡಿ ದರವನ್ನು ತಮ್ಮ ಸಾಲಗಾರರಿಗೆ ವಿಧಿಸಿ ಮಿತಿಮೀರಿದ ಬಡ್ಡಿಯನ್ನು ಅಂದರೆ ಸರಕಾರವು ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ದರದ ಬಡ್ಡಿಯನ್ನು ಗಂಟೆಗಳ, ದಿನದ, ವಾರದ, ತಿಂಗಳ ಆಧಾರದಲ್ಲಿ ಸಾಲಗಾರರಿಂದ ವಸೂಲು ಮಾಡುತ್ತಿರುವ ಪರಿಣಾಮವಾಗಿ ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ರೈತರು, ಸಮಾಜದ ಬಡ ವರ್ಗದ ಜನರು ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಅನುಭವಿಸುತ್ತಿರುವ ತೊಂದರೆಗಳನ್ನು ನಾವು ನಿರಂತರವಾಗಿ ಕಾಣುತ್ತಿದ್ದೇವೆ.
ಈ ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರವು ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ ೨೦೦೪ ಎಂಬ ಕಾನೂನನ್ನು ಸೆ. 5, 2003 ರಿಂದ ಜಾರಿಗೆ ತಂದಿದ್ದು ಅದೀಗ ಪರಿಣಾಮಕಾರಿಯಾಗಿ ಜಾರಿಯಲ್ಲಿರುತ್ತದೆ. ಈ ಕಾನೂನು ಯಾವೊಬ್ಬ ವ್ಯಕ್ತಿಯು ತಾನು ಇತರರಿಗೆ ನೀಡುವ ಸಾಲದ ಮೇಲೆ ಮಿತಿಮೀರಿದ ಬಡ್ಡಿಯನ್ನು ವಿಧಿಸುವುದನ್ನು ಅಥವಾ ವಸೂಲು ಮಾಡುವುದನ್ನು ನಿ಼ಷೇಧಿಸಿದೆ. ಇದನ್ನು ಉಲ್ಲಂಘಿಸಿ ಯಾರಾದರೂ ತಾನು ನೀಡುವ ಸಾಲದ ವಸೂಲಾತಿಗಾಗಿ ಸಾಲಗಾರರನ್ನು ಪೀಡಿಸುವ, ಬೆದರಿಸುವ ಕೃತ್ಯವನ್ನು ನಡೆಸಿದಲ್ಲಿ ಅಥವಾ ಇಂತಹ ಕೃತ್ಯಕ್ಕೆ ಪ್ರೇರೇಪಣೆ ನೀಡಿದಲ್ಲಿ ಅವರು ಮೂರು ವರ್ಷಗಳ ಅವಧಿಯ ಜೈಲು ಶಿಕ್ಷೆ ಮತ್ತು ಮೂವತ್ತು ಸಾವಿರ ರೂಪಾಯಿಗಳ ವರೆಗಿನ ದಂಡನೆಯ ಶಿಕ್ಷೆಗೆ ಒಳಪಡಬೇಕಾಗುತ್ತದೆ.
ಮೇಲ್ಕಾಣಿಸಿದ ಕಾನೂನಿನ ಪ್ರಕಾರ ತಾನು ಯಾವುದೇ ವ್ಯಕ್ತಿಯಿಂದ ಪಡೆದ ಸಾಲದ ಬಾಕಿ ಇರುವ ಹಣವನ್ನು, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ 28ನೇ ಪ್ರಕರಣದ ಅಡಿಯಲ್ಲಿ ರಾಜ್ಯ ಸರ್ಕಾರವು ನಿಗದಿ ಮಾಡಿದ ದರದ ಬಡ್ಡಿಯೊಂದಿಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದಲ್ಲಿ, ಪೂರ್ಣವಾಗಿ ಅಥವಾ ಸಂದರ್ಭಾನುಸಾರ ಭಾಗಶ: ಸಾಲದ ತೀರಿಕೆಗಾಗಿ, ಸಾಲ ಮತ್ತು ಬಡ್ಡಿ ಹಣವನ್ನು ಠೇವಣಿ ಇಡಲಾಗಿದೆ ಎಂಬುದನ್ನು ದಾಖಲಿಸುವ ಅರ್ಜಿ ಸಹಿತ, ಠೇವಣಿ ಇಡಬಹುದು. ನ್ಯಾಯಾಲಯವು ಇಂತಹ ಅರ್ಜಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ, ಅರ್ಜಿಯಲ್ಲಿ ನಮೂದಿಸಿದ ಎದುರುದಾರ ವ್ಯಕ್ತಿಗೆ, ನ್ಯಾಯಾಲಯವು ನೀಡ ಬಹುದಾದಂತಹ, 15 ದಿನಗಳ ಅವಧಿಯ ಒಳಗೆ ತನ್ನ ಉತ್ತರಗಳನ್ನು ನೀಡುವಂತೆ ನಿರ್ದೇಶಿಸಿ ಅರ್ಜಿಯ ಒಂದು ಪ್ರತಿಯನ್ನು ಕಳುಹಿಸಬೇಕಾಗುತ್ತದೆ. ನ್ಯಾಯಾಲಯವು ವಿಚಾರಣೆಯ ತರುವಾಯ ಮತ್ತು ಉಭಯ ಪಕ್ಷಗಳ ಹೇಳಿಕೆಗಳನ್ನು ಪರಿಗಣಿಸಿದ ನಂತರ, ಸಾಲ ಮತ್ತು ಅದರ ಮೇಲಿನ ಬಡ್ಡಿಯ ಹಣ ಪೂರ್ಣವಾಗಿ ಅಥವಾ ಸಂದರ್ಭಾನುಸಾರ ಭಾಗಶ: ಸಂದಾಯವಾಗಿದೆ ಎಂದು ದಾಖಲು ಮಾಡಿ ಆದೇಶಗಳನ್ನು ಹೊರಡಿಸಬಹುದಾಗಿದೆ.

ನ್ಯಾಯಾಲಯವು, ಸಾಲಗಾರನು ಅರ್ಜಿಯನ್ನು ಸಲ್ಲಿಸಿದ ಮೇಲೆ, ನೀಡಿದ ಸಾಲದ ಅಥವಾ ಅದರ ಬಡ್ಡಿಯ ಮರುಪಾವತಿಗಾಗಿ ಸಾಲ ನೀಡಿದ ವ್ಯಕ್ತಿಯು ತನ್ನಿಂದ ಬಲವಂತವಾಗಿ ತೆಗೆದುಕೊಂಡು ತನ್ನ ವಶ ಇಟ್ಟುಕೊಂಡಿರುವ ಯಾವುದೇ ಚರ ಅಥವಾ ಸ್ಥಿರ ಸ್ವತ್ತುಗಳ ಸ್ವಾಧೀನತೆಯನ್ನು ತಾನು ವಾಪಾಸು ಪಡೆಯುವ ಬಗ್ಗೆ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಪಡೆಯಬಹುದಾಗಿದೆ. ನ್ಯಾಯಾಲಯವು, ಸಾಲದ ಮೇಲಿನ ಬಡ್ಡಿ ಸೇರಿದಂತೆ ಸಾಲದ ಮೊತ್ತದ ಇತ್ಯರ್ಥಕ್ಕಾಗಿ ಸಾಲಗಾರನು ದಾಖಲು ಮಾಡಿದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ 28ನೇ ಪ್ರಕರಣದ ಅಡಿಯಲ್ಲಿ ರಾಜ್ಯ ಸರ್ಕಾರವು ನಿಗದಿಪಡಿಸಿದ ಬಡ್ಡಿಯ ದರಕ್ಕಿಂತ ಹೆಚ್ಚಿನ ದರವನ್ನು ಸಾಲಗಾರನು ಸಂದಾಯ ಮಾಡಿದ್ದಲ್ಲಿ ಹೆಚ್ಚಿನ ಬಡ್ಡಿಯನ್ನು ಹೊಂದಾಣಿಕೆ ಮಾಡುವಂತೆ ಆದೇಶ ಹೊರಡಿಸಬಹುದು. ಮಿತಿಮೀರಿದ ಬಡ್ಡಿ ವಸೂಲಾತಿಯಿಂದ ಒಬ್ಬ ಸಾಲಗಾರ ಅಥವಾ ಅವನ ಕುಟುಂಬದ ಯಾವೊಬ್ಬ ಸದಸ್ಯನು ಆತ್ಮಹತ್ಯೆ ಮಾಡಿಕೊಂಡಲ್ಲಿ ಇದು ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಸರಕಾರವು ಇದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.










































