ಕಾರ್ಕಳ : ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ – ಕೇರಳದ ವತಿಯಿಂದ ತಾಲೂಕಿನ ಕೊರಗ ಸಮುದಾಯದವರು ನಮ್ಮ ಭೂಮಿ ನಮ್ಮ ಹಕ್ಕು ಧ್ಯೇಯದೊಂದಿಗೆ ಕೃಷಿ ಭೂಮಿಗಾಗಿ ಹಕ್ಕೊತ್ತಾಯಕ್ಕಾಗಿ ತಹಶೀಲ್ದಾರ್ ಅನಂತಶಂಕರ ಬಿ. ಅವರಿಗೆ ಜು. 15 ರಂದು ಮನವಿ ಸಲ್ಲಿಸಿದರು.
ಹಿಂದಿನ ಸರಕಾರ ಅರಣ್ಯ ಭೂಮಿಯನ್ನು ಮುಕ್ತಗೊಳಿಸಿತ್ತು. ಅಲ್ಲದೆ, ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಅವರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡ ಸಂದರ್ಭ ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ತೆರವು ಆದ ಭೂಮಿಯಿಂದ 1 ಸಾವಿರ ಎಕರೆ ಭೂಮಿಯನ್ನು ಕೊರಗ ಸಮುದಾಯದವರಿಗೆ ನೀಡುವುದಾಗಿ ಹೇಳಿದ್ದರು. ಆ ಪ್ರಯುಕ್ತ ಕೊರಗ ಸಮುದಾಯದ ಭೂ ರಹಿತರನ್ನು ಗುರುತಿಸಿ 2022 ರ ಡಿ. 14 ರಂದು 87 ಅರ್ಜಿಯನ್ನು ದರ್ಖಾಸು ನಮೂನೆಯಲ್ಲಿ ಸಲ್ಲಿಸಲಾಗಿತ್ತು. ಆದರೆ ಈ ತನಕ ಯಾವುದೇ ಪ್ರಗತಿ ಕಂಡಿಲ್ಲ. ಮುಂದಿನ ಒಂದು ತಿಂಗಳಲ್ಲಿ ಸರಕಾರ ನಮಗೆ ಭೂಮಿ ನೀಡಬೇಕು. ಇಲ್ಲದೆ ಇದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಂದರ್ಭ ಕೊರಗರ ಅಭಿವೃದ್ಧಿ ಬಜಗೋಳಿ ಸಂಘದ ಅಧ್ಯಕ್ಷ ಗೋಪಾಲ್, ಬೆಳ್ಮಣ್ ಸಂಘದ ಅಧ್ಯಕ್ಷೆ ಸೀತಾ, ಸಂಯೋಜಕ ಕೆ. ಪುತ್ರನ್, ಸಮುದಾಯ ಕಾರ್ಯಕರ್ತ ನರಸಿಂಹ, ಎಸ್‌ಜಿಎ ಅಶೋಕ್ ಹಾಗೂ ಸಮುದಾಯದವರು ಉಪಸ್ಥಿತರಿದ್ದರು.























