ಕಾರ್ಕಳ ಜವುಳಿ ಪಾರ್ಕ್‌ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ನಿರ್ಧಾರ

ಸರಕಾರಿ ಸಂಸ್ಥೆ ಮೂಲಕವೇ ಅನುಷ್ಠಾನಿಸಲು ಶಾಸಕ ಸುನಿಲ್‌ ಒತ್ತಾಯ

ಕಾರ್ಕಳ : ನಿಟ್ಟೆ ಬಳಿ ಮದನಾಡುವಿನಲ್ಲಿ ಸ್ಥಾಪಿಸಲುದ್ದೇಶಿರುವ ಜವುಳಿ ಪಾರ್ಕ್‌ ಕುರಿತಾಗಿ ಮಾಜಿ ಸಚಿವ, ಶಾಸಕ ವಿ. ಸುನಿಲ್‌ ಕುಮಾರ್‌ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಸರಕಾರ ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ಇಚ್ಚಿಸಿದೆ ಎಂದು ಜವುಳಿ, ಕಬ್ಬು, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಶಿಗ್ಗಾಂವ್‌ ಮತ್ತು ಕಾರ್ಕಳ ಜವುಳಿ ಪಾರ್ಕ್‌ ಒಂದೇ ಬಜೆಟ್‌ನಲ್ಲಿ ಮಂಜೂರಾಗಿ‌ ಒಂದೇ ಕ್ಯಾಬಿನೆಟ್‌ ಸಭೆಯಲ್ಲಿ ಅನುಮೋದನೆಯಾಗಿತ್ತು. ಸರಕಾರ ಶಿಗ್ಗಾವಿ ಜವುಳಿ ಪಾರ್ಕ್‌ ಯೋಜನೆಯನ್ನು ಮಾತ್ರ ಹಣ ಹಾಕಿ ಮುಂದುವರಿಸಲಿದೆ. ಇದಕ್ಕಾಗಿ 25 ಕೋ. ರೂ. ಖರ್ಚು ಮಾಡಲು ತಯಾರಿದೆ. ಈಗಾಗಲೇ ಅಲ್ಲಿ 51 ಎಕರೆ ಭೂಸ್ವಾಧೀನವಾಗಿ ಸುಮಾರು 15 ಎಕರೆಯನ್ನು ಅಭಿವೃದ್ದಿ ಮಾಡಿದೆ. ಕಾರ್ಕಳದ ಯೋಜನೆಗೆ ಹಣ ಮೀಸಲಿಟ್ಟಿಲ್ಲ ಎಂದು ಸಚಿವರು ಉತ್ತರಿಸಿದರು.
ಒಂದೇ ಬಜೆಟ್‌ನಲ್ಲಿ ಯೋಜನೆ ಮಂಜೂರಾಗಿದ್ದರೂ ಶಿಗ್ಗಾವಿಗೊಂದು ನೀತಿ ಕಾರ್ಕಳಕ್ಕೊಂದು ನೀತಿ ಸರಕಾರ ಅನುಸರಿಸುತ್ತಿರುವುದನ್ನು ಸುನಿಲ್‌ ಕುಮಾರ್‌ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಸಚಿವರು ಶಿಗ್ಗಾವಿಯ ಯೋಜನೆಗೆ ಮಾತ್ರ ಹಣ ಮಂಜೂರು ಮಾಡಲಾಗಿದೆ. ಕಾರ್ಕಳದ ಯೋಜನೆಗೆ ಹಣಕಾಸು ಲೆಕ್ಕಾಚಾರದಲ್ಲಿ ಇಲ್ಲ. ಹೀಗಾಗಿ ಸದ್ಯ ಪಿಪಿಪಿ ಮೋಡೆಲ್‌ ಮಾತ್ರವೇ ಸರಕಾರಕ್ಕಿರುವ ಆಯ್ಕೆ ಎಂದು ತಿಳಿಸಿದರು.
ಕಾರ್ಕಳದಲ್ಲಿ ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಇದ್ದ ಕಾರಣ ಯೋಜನೆಗೆ ಒಂದೇ ಕಡೆ 15 ಎಕ್ಕರೆ ಜಾಗ ಗುರುತಿಸಲು ಸಾಧ್ಯವಾಗಲಿಲ್ಲ. ಸ್ಥಳ ಗುರುತಿಸಲು ಎರಡು ವರ್ಷ ಬೇಕಾಯಿತು. ಕೊನೆಗೆ ನಿಟ್ಟೆ ಸಮೀಪ 15 ಎಕರೆ ಸ್ಥಳ ಗುರುತಿಸಿ ಭೂಮಿಪೂಜೆಯನ್ನೂ ನೆರವೇರಿಸಲಾಗಿದೆ. ಸರಕಾರಿ ಸಂಸ್ಥೆಯ ಮೂಲಕವೇ ಯೋಜನೆಯನ್ನು ಮುಂದುವರಿಸಬೇಕು. ಗ್ರಾಮೀಣ ಪ್ರದೇಶದ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಯೋಜನೆ ಇದು. ಏಕಾಏಕಿ ಯೋಜನೆಯನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡುವ ನಿರ್ಧಾರ ಕೈಗೊಂಡರೆ ಕಷ್ಟ ಎಂದು ಸುನೀಲ್‌ ಮನವರಿಕೆ ಮಾಡಿದರು. ಒಂದೇ ಸಲ ಆಗುವುದಿಲ್ಲ ಎನ್ನಬೇಡಿ. ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಯೋಜನೆಯನ್ನು ಅನುಷ್ಠಾನಿಸಲು ವಿನಂತಿಸಿದರು.

































































































error: Content is protected !!
Scroll to Top