ಆರೋಗ್ಯ ಧಾರಾ : ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ

ಆಯುರ್ವೇದ ಸ್ವಾಸ್ಥ್ಯ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತದೆ. ಆರೋಗ್ಯದಿಂದಿರಲು ದಿನಚರ್ಯ ಹಾಗೂ ಋತುಚರ್ಯಗಳ ಪಾಲನೆ ಅಗತ್ಯ. ಶ್ರಾವಣ ಹಾಗೂ ಭಾದ್ರಪದ ಮಾಸ ವರ್ಷ ಋತುವಿನಲ್ಲಿ ಬರುತ್ತದೆ. ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳು ಈ ಕೆಳಗಿನಂತಿದೆ,

ಮಳೆಗಾಲದಲ್ಲಿ ವಾತ ದೋಷವು ವೃದ್ಧಿಯಾಗುತ್ತದೆ. ಜಠರಾಗ್ನಿಯು ಮಂದವಿರುವುದರಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದ್ದರಿಂದ ಬಿಸಿಯಾದ ಲಘು ಹಾಗು ಸ್ವಲ್ಪ ಜಿಡ್ಡಿನ ಅಂಶದಿಂದ ಕೂಡಿರುವಂತ ಆಹಾರ ಸೇವಿಸುವುದು ಒಳ್ಳೆಯದು. ಶುದ್ಧವಾದ ತಾಜಾ ಆಹಾರ ಸೇವಿಸಿ. ತುಪ್ಪ, ಅಕ್ಕಿ, ಗೋಧಿ, ಬೇಳೆ ಕಾಳು ಸೇವಿಸಿ. ತರಕಾರಿಗಳ ಸೂಪ್ ಒಳ್ಳೆಯದು. ತಾಜಾ ಹಣ್ಣುಗಳನ್ನು ಸೇವನೆ ಆರೋಗ್ಯಕ್ಕೆ ಹಿತಕರ. ಮಸಾಲೆ ಪದಾರ್ಥಗಳಾದ ಹಿಂಗು, ಜೀರಿಗೆ, ಕೊತ್ತಂಬರಿ, ಬೆಳ್ಳುಳ್ಳಿ, ಕರಿಮೆಣಸು ಆರೋಗ್ಯ ಕಾಪಾಡುವಲ್ಲಿ ಸಹಕಾರಿ. ಮಳೆಗಾಲದಲ್ಲಿ ಹಸಿ ಆಹಾರ ಮತ್ತು ಮೊಸರನ್ನು ಆದಷ್ಟು ಕಡಿಮೆ ಸೇವಿಸಿ. ಊಟವಾದ ನಂತರ ಶುಂಠಿ ಮತ್ತು ಉಪ್ಪನ್ನು ಸೇರಿಸಿ ಸೇವಿಸಿ ಅಥವಾ ಬಡೆಸೊಪ್ಪನ್ನು ಸೇವನೆ ಉತ್ತಮ. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಗಲು ನಿದ್ದೆ ಒಳ್ಳೆಯದಲ್ಲ. ಮಳೆಯಲ್ಲಿ ನೆನೆದರೆ ತಕ್ಷಣ ಒರೆಸಿ. ಇಲ್ಲವಾದಲ್ಲಿ ಫಂಗಲ್ ಇನ್ಫೆಕ್ಷನ್ ಆಗುವ ಸಂಭವವಿರುತ್ತದೆ. ವಾತ ವೃದ್ಧಿ ಆಗಿರುವುದರಿಂದ ಅಭ್ಯಂಗ ಸ್ನಾನ ಒಳ್ಳೆಯದು. ಸ್ನಾನದ ನೀರಿನಲ್ಲಿ ಕಹಿಬೇವಿನ ಕಷಾಯ ಹಾಕಿರಿ. ಒಂದು ಲೀಟರ್ ನೀರಿಗೆ ಅರ್ಧ ಮುಷ್ಟಿ ಕಹಿಬೇವಿನ ಎಲೆಯನ್ನು ಹಾಕಿ ಕುದಿಸಿ ಮತ್ತು ಅದನ್ನು ಸೊಸಿ ಒಂದು ಬಾಟಲಿನಲ್ಲಿ ತೆಗೆದು ಇಟ್ಟಿರಿ. ಪ್ರತಿನಿತ್ಯ ಸ್ನಾನದ ನೀರಿನಲ್ಲಿ ಸ್ವಲ್ಪ ಸ್ವಲ್ಪ ಇದನ್ನು ಹಾಕಿ ಸ್ನಾನ ಮಾಡಿ. ಇದರಿಂದ ತ್ವಚೆಯ ಇನ್ಫೆಕ್ಷನ್ ಗಳು ಆಗುವುದಿಲ್ಲ. ಹಾಗೆಯೇ ಸುಗಂಧಿತ ದ್ರವ್ಯಗಳ ಲೇಪನ ಮಾಡುವುದು ಒಳ್ಳೆಯದೆಂದು ಆಯುರ್ವೇದ ಹೇಳುತ್ತದೆ.

ನೀರನ್ನು ಬಿಸಿ ಮಾಡಿ ಕುಡಿಯಿರಿ. ಪಂಚಕರ್ಮದಲ್ಲಿ ವಮನ ವಿರೇಚನ ಹಾಗೂ ಬಸ್ತಿ ಪಂಚಕರ್ಮ ಮಾಡುವುದು ಒಳ್ಳೆಯದು. ರಾತ್ರಿ ಮಲಗುವ ಮುಂಚೆ ಅರಿಶಿನ ಹಾಲನ್ನು ಸೇವಿಸಿ. ಒಂದು ಲೋಟ ಬಿಸಿ ಹಾಲಿಗೆ ಕಾಲು ಚಮಚ ಅರಿಶಿನ ಹುಡಿ ಹಾಗೂ ಕಲ್ಲು ಸಕ್ಕರೆಯನ್ನು ಹಾಕಿ ಸೇವಿಸುವುದರಿಂದ ನೆಗಡಿ ಕೆಮ್ಮು ಕಮ್ಮಿಯಾಗುತ್ತದೆ. ಮಳೆಗಾಲದಲ್ಲಿ ತುಳಸಿಯ ಕಷಾಯ ಮಾಡಿ ಸೇವಿಸಿ. ಒಂದು ಲೋಟ ನೀರಿಗೆ ಸ್ವಲ್ಪ ಕರಿ ಮೆಣಸಿನ ಹುಡಿ, ಸ್ವಲ್ಪ ಶುಂಠಿ, ಸ್ವಲ್ಪ ತುಳಸಿನ ಎಲೆ, ಬೆಲ್ಲ ಹಾಕಿ ಅರ್ಧ ಲೋಟ ಬರುವವರೆಗೆ ಕುದಿಸಿ ಸೋಸಿ ಬಿಸಿ ಇರುವಾಗಲೇ ಸೇವಿಸಿ.

ಅಮೃತಬಳ್ಳಿಯ ಕಷಾಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಒಂದು ಲೋಟ ಅಮೃತಬಳ್ಳಿಯ 4 ತುಂಡುಗಳನ್ನು ಹಾಕಿ ಅರ್ಧ ಗ್ಲಾಸ್ ಬರುವವರೆಗೆ ಕುದಿಸಿ ಮತ್ತು ಅದನ್ನು ಸೋಸಿ ಸೇವಿಸಿ. ಸ್ವಲ್ಪ ಪ್ರಮಾಣದಲ್ಲಿ ಕೊತ್ತಂಬರಿ, ಜೀರಿಗೆ, ಕರಿಮೆಣಸಿನ ಹುಡಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಅರ್ಧ ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಅದನ್ನು ಸೇವಿಸಿ. ಯಾವುದಾದರೂ ಒಂದು ಕಷಾಯವನ್ನು ಸೇವಿಸಿ. ವಾರಕ್ಕೆ ಮೂರು ಅಥವಾ ನಾಲ್ಕು ಸಲ ಕಷಾಯ ಸೇವಿಸಿದರೆ ಸಾಕು. ಆರೋಗ್ಯ ವೃದ್ಧಿಗಾಗಿ ಪ್ರತಿನಿತ್ಯ ಧ್ಯಾನ, ಯೋಗಾಸನಗಳು ಪ್ರಾಣಾಯಾಮವನ್ನು ಮಾಡಿ.





























































































error: Content is protected !!
Scroll to Top