ಕಾರ್ಕಳ : ತುಳು ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಈಸ್ಟ್ ಆಫ್ರಿಕಾದ ನೈರೋಬಿ ಕೀನ್ಯಾದಲ್ಲಿ ಮಂಗಳೂರಿಯನ್ ಬ್ರದರ್ಹುಡ್ (Mangalorean Brotherhood ) ಪ್ರಾಯೋಜಕತ್ವದಲ್ಲಿ ಜು. 9 ರಂದು ವೆಸ್ಟ್ ಗೇಟ್ ಸಿನಿಮಾ ಮಾಲ್ ನಲ್ಲಿ ಸರ್ಕಸ್ ಚಿತ್ರದ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಚಿತ್ರಕಥೆ ಬರೆದು, ನಿರ್ದೇಶನ ಮತ್ತು ಅಭಿನಯಿಸಿರುವ ಸರ್ಕಸ್ ತುಳು ಸಿನೆಮಾವು ಜೂನ್ 23 ರಂದು ಸಿನಿಮಾ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ತುಳು ಚಿತ್ರರಂಗದ ಪ್ರಸಿದ್ದ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್ ಸಿನೆಮಾದಲ್ಲಿ ಅಭಿನಯಿಸಿದ್ದಾರೆ.
ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗಿದ್ದು, ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮತ್ತು ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕರಾವಳಿಯ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ, ರಾಹುಲ್ ವಶಿಷ್ಠ ಸಂಕಲನ ಮತ್ತು ಲೋಯ್ ಅವರ ಸಂಗೀತ ಈ ಚಿತ್ರಕ್ಕಿದೆ. ಗಿರಿಗಿಟ್ ಬಳಿಕ ರೂಪೇಶ್ ಶೆಟ್ಟಿ ನಿರ್ದೇಶಿಸಿದ ಎರಡನೇ ಸಿನಿಮಾ ಇದಾಗಿದೆ.








































