ಮೂಡುಬಿದಿರೆಯ ಯುವತಿ ಒಳಗೊಂಡ ಗ್ಯಾಂಗಿನಿಂದ ಸುಲಭವಾಗಿ ಹಣ ಸಂಪಾದಿಸಲು ಕೃತ್ಯ
ಮಂಗಳೂರು: ಕೇರಳದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ ಹಣ ಸುಲಿಗೆ ಮಾಡಿದ್ದ ಗ್ಯಾಂಗ್ನ ಯುವತಿ ಸೇರಿ ಎಂಟು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಹನಿಟ್ರ್ಯಾಪ್ ಮೋಹಕ್ಕೆ ಬಿದ್ದು 10 ಲಕ್ಷ ರೂ ಹಣ ಕಳೆದುಕೊಂಡಿದ್ದರು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಮಂಗಳೂರಿನ ಬೊಂದೇಲ್ ನಿವಾಸಿ ಪ್ರೀತಮ್, ಮೂಡುಶೆಡ್ಡೆ ಪರಿಸರ ನಿವಾಸಿಗಳಾದ ಮುರಳಿ, ಕಿಶೋರ್, ಸುಶಾಂತ್, ಅಭಿ ಮತ್ತು ಮೂಡುಬಿದಿರೆಯ ಯುವತಿ ಬಂಧಿತ ಆರೋಪಿಗಳು. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಈ ತಂಡ ಇದೀಗ ದೊಡ್ಡದೊಂದು ಕಾರ್ಯಾಚರಣೆ ಮಾಡಿ ಸಿಕ್ಕಿಬಿದ್ದಿದೆ.
ಕಳೆದ ಫೆಬ್ರವರಿ 16ರಂದು ವಾಮಂಜೂರು ಬಳಿಯ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಉದ್ಯಮಿ ಹನಿಟ್ರ್ಯಾಪ್ ಗೊಳಗಾಗಿದ್ದಾರೆ. ಕೇರಳದ ಇಬ್ಬರು ತಮ್ಮ ಸಂಪರ್ಕಕ್ಕೆ ಬಂದಿದ್ದ ಮೂಡುಬಿದಿರೆಯ ಯುವತಿಯೊಂದಿಗೆ ರೆಸಾರ್ಟ್ಗೆ ತೆರಳಿದ್ದರು. ರಾತ್ರಿ ವೇಳೆ ಅವರು ರೆಸಾರ್ಟ್ನಲ್ಲಿದ್ದಾಗ ತಂಡವೊಂದು ಕೊಠಡಿಗೆ ಏಕಾಏಕಿ ಪ್ರವೇಶಿ ದೃಶ್ಯಗಳನ್ನು ಫೋಟೋ, ವಿಡಿಯೋ ಮಾಡಿದ್ದರು. ಬಳಿಕ ಉದ್ಯಮಿಗೆ ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದಾರೆ. ಅಲ್ಲದೆ ಇಂತಿಷ್ಟು ಹಣ ಕೊಟ್ಟಲ್ಲಿ ಮಾತ್ರ ಬಿಡ್ತೀವಿ, ಇಲ್ಲಾಂದ್ರೆ ವಿಡಿಯೋವನ್ನು ವೈರಲ್ ಮಾಡುತ್ತೇವೆಂದು ಧಮಕಿ ಹಾಕಿದ್ದಾರೆ. ಬೆದರಿದ ಉದ್ಯಮಿ ತಮ್ಮಲ್ಲಿದ್ದ ಹಣವನ್ನು ಕೊಟ್ಟು ಅಲ್ಲಿಂದ ಪಾರಾಗಿ ಬಂದಿದ್ದರು.
ಯುವಕರ ತಂಡ ಪದೇಪದೆ ಅವರಿಗೆ ಕರೆ ಮಾಡಿ, ಹಣಕ್ಕಾಗಿ ಪೀಡಿಸಿದ್ದಾರೆ. ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಮೂರು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡ ಉದ್ಯಮಿ ತಂಡದ ಬೆದರಿಕೆಗೆ ಬೇಸತ್ತು ಇತ್ತೀಚೆಗೆ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನುಬಂಧಿಸಿದ್ದಾರೆ.






























































