ಮಾರುಕಟ್ಟೆ ದರವನ್ನೇ ನೀಡಬೇಕೆಂದು ಒತ್ತಾಯಿಸಿದ ಬೊಮ್ಮಾಯಿ
ಬೆಂಗಳೂರು : ಚುನಾವಣೆ ಗೆಲ್ಲಲು ನೀಡಿರುವ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ತಲಾ 10 ಕೆ.ಜಿ. ಅಕ್ಕಿ ನೀಡಬೇಕು ಅಥವಾ ಅದಕ್ಕೆ ಸಮನಾಗಿ ಮಾರುಕಟ್ಟೆ ದರದಲ್ಲಿ ಹಣ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ. ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದ ನಂತರ ಕೇವಲ ಐದು ಕೆ.ಜಿ.ಗೆ ಪರ್ಯಾಯವಾಗಿ ಹಣ ನೀಡುವ ನಿರ್ಧಾರ ಕೈಗೊಳ್ಳುವ ಮೂಲಕ ವಚನ ಭ್ರಷ್ಟವಾಗಿದೆ ಎಂದೂ ಬಿಜೆಪಿ ಆಪಾದಿಸಿದೆ.
ಸರ್ಕಾರದ ಅನ್ನಭಾಗ್ಯ ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಬಂದಿದೆ. ಕಾಂಗ್ರೆಸ್ನವರು ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಐದು ಕೆಜಿ ಅಕ್ಕಿ ನೀಡಲಾಗುವುದು, ಆ ಅಕ್ಕಿಗೆ ಬದಲು ಕೆಜಿಗೆ 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 50ರಿಂದ 60 ರು. ಬೆಲೆ ಇದೆ. ಆದರೆ, ಇವರು ಕೊಡುವ ಹಣಕ್ಕೆ ಮಾರುಕಟ್ಟೆಯಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುವಲ್ಲಿ ಜನರಿಗೆ ಮೋಸ ಮಾಡುವುದನ್ನು ಮುಂದುವರಿಸಿದೆ. ಚುನಾವಣೆಯಲ್ಲಿ ಕೊಟ್ಟಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ. ಇಲ್ಲವೇ ಮಾರುಕಟ್ಟೆದರದಲ್ಲಿ ಕೆಜಿಗೆ 60 ರೂ. ಪ್ರಕಾರ ಹತ್ತು ಕೆಜಿಗೆ ತಗುಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟಆಗಿದೆ. ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಈಗ ಐದು ಕೆಜಿ ನೀಡಲಾಗುವುದು. ಅಕ್ಕಿ ಬದಲು ಹಣ ನೀಡಲಾಗುವುದು ಎನ್ನುತ್ತಿದೆ. ಇದು ವಚನಭ್ರಷ್ಟ ಸರ್ಕಾರ. ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ನೀಡುತ್ತಿದೆ. ಇವರು ಹತ್ತು ಕೆಜಿ ನೀಡಬೇಕು. ಒಟ್ಟು 15 ಕೆಜಿ ಆಗಲಿದೆ. ಅಕ್ಕಿ ಕೊಡೊಕೆ ಆಗದೆ ಇದ್ದರೆ ಹಣ ನೀಡಿ ಎಂದಾಗ ಅದಕ್ಕೆ ಸಿದ್ದರಾಮಯ್ಯ, ಹಣ ತಿನ್ನೋದಕ್ಕೆ ಆಗುತ್ತಾ? ನಾವು ಅಕ್ಕಿಯನ್ನೇ ಕೊಡುತ್ತೇವೆ ಎಂದಿದ್ದರು. ಈಗ ಅಕ್ಕಿಯನ್ನೇ ನೀಡಿ. ಹಣ ನೀಡುವ ನಿಮ್ಮ ಡೋಂಗಿ ನಿರ್ಣಯ ಕೈಬಿಡಿ. ಈ ಬಗ್ಗೆ ನಾವು ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.






























































