10 ಮೈದಾನಗಳಲ್ಲಿ 48 ಪಂದ್ಯಗಳ ಕ್ರಿಕೆಟ್ ಹಬ್ಬ
ಮುಂಬಯಿ : ಭಾರತದ ಆತಿಥ್ಯದಲ್ಲಿ ಅಕ್ಟೋಬರ್ನಿಂದ ನಡೆಯಲಿರುವ 2023ರ ಏಕದಿನ ಕ್ರಿಕೆಟ್ ವಿಶ್ವಕಪ್ನ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ.
ಅಕ್ಟೋಬರ್ 5ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆದ ಆವೃತ್ತಿಯ ರನ್ನರ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂಬ ಹಿರಿಮೆಯಿರುವ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ಥಾನ ನಡುವಿನ ಪಂದ್ಯ ನಡೆಯಲಿದೆ. ಇದೇ ಕ್ರೀಡಾಂಗಣದಲ್ಲಿ ನವೆಂಬರ್ 19ರಂದು ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ನವೆಂಬರ್ 15 ಮತ್ತು 16ರಂದು ಎರಡು ಸೆಮಿಫೈನಲ್ ಪಂದ್ಯ ಕ್ರಮವಾಗಿ ಮುಂಬಯಿಯ ವಾಂಖೇಡೆ ಸ್ಟೇಡಿಯಂ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ.
ವಿಶ್ವಕಪ್ನ ಒಟ್ಟು 48 ಪಂದ್ಯಗಳು 10 ಮೈದಾನಗಳಲ್ಲಿ ನಡೆಯಲಿವೆ. ಏಕದಿನ ಕ್ರಿಕೆಟ್ನ ಪ್ರಮುಖ ಪಂದ್ಯಾವಳಿಗೆ ನಾಲ್ಕನೇ ಬಾರಿ ಭಾರತ ಆತಿಥ್ಯ ವಹಿಸುತ್ತಿದೆ. ಈ ಹಿಂದೆ ಕೊನೆಯದಾಗಿ ಟೀಮ್ ಇಂಡಿಯಾ ತವರಿನಲ್ಲಿ 2011ರ ವಿಶ್ವಕಪ್ ನಡೆದಿತ್ತು. ಭಾರತ ಚಾಂಪಿಯನ್ ಪಟ್ಟವನ್ನೂ ಗಳಿಸಿತ್ತು.
ಭಾರತದ ಪಂದ್ಯಗಳು
ಭಾರತ ಚೆನ್ನೈ, ದಿಲ್ಲಿ, ಅಹಮದಾಬಾದ್, ಪುಣೆ, ಧರ್ಮಶಾಲಾ, ಲಖನೌ, ಮುಂಬಯಿ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್ ಮೈದಾನಗಳಲ್ಲಿ ಪಂದ್ಯಗಳನ್ನು ಆಡಲಿದೆ. ಅಚ್ಚರಿ ಎಂಬಂತೆ 55 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಹೈದರಾಬಾದ್ನ ಪ್ರಸಿದ್ಧ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾರತ ಲೀಗ್ ಹಂತದ ಒಂದೂ ಪಂದ್ಯವನ್ನು ಆಡುತ್ತಿಲ್ಲ.










































