ಕಾರ್ಕಳ : ಹುಟ್ಟು ಆಕಸ್ಮಿಕ, ಸಾವು ನಿಶ್ವಿತ. ಆದರೆ, ಆ ಸಾವು ಸಹಜವಾಗಿಯೇ ಇರಬೇಕೆ ಹೊರತು ಆತ್ಮಹತ್ಯೆಯಂತಹ ಹೇಡಿತನ ಕೃತದ ಮೂಲಕವಾಗಬಾರದು. ಆಧುನಿಕತೆಯ ಅಬ್ಬರ, ಅವೈಜ್ಞಾನಿಕ ಜೀವನ ಪದ್ಧತಿ ಪರಿಣಾಮ ಯುವ ಸಮುದಾಯದ ವಿಪರೀತ ಒತ್ತಡಕ್ಕೀಡಾಗುತ್ತಿದೆ. ಕೆಲವೊಂದು ಸಮಸ್ಯೆ, ನೋವು, ಹತಾಶೆಗಳನ್ನು ಎದುರಿಸಲು ಸಾಧ್ಯವಾಗದೇ ಕೆಲವರು ಆತ್ಮಹತ್ಯೆಯಂತಹ ನೀಚ ಕೃತ್ಯಕ್ಕೆ ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಜಗತ್ತಿನಲ್ಲಿ ಆತ್ಮಹತ್ಯೆಯಿಂದ ಒಂದು ವರ್ಷಕ್ಕೆ ಅಂದಾಜು ಒಂದು ಮಿಲಿಯನ್ ಸಾವುಗಳು ಸಂಭವಿಸುತ್ತದೆ. ಇದರ ಪ್ರಕಾರ ಪ್ರತಿ 40 ಸೆಕೆಂಡ್ಗೆ ಒಬ್ಬ ಆತ್ಮಹತ್ಯೆಗೆ ಒಳಗಾಗುತ್ತಾನೆ. ಆದರೆ, ಪ್ರತಿಯೊಂದು ಆತ್ಮಹತ್ಯೆಯ ನಿರ್ಧಾರದ ಹಿಂದೆ ವಿಭಿನ್ನ ಕಾರಣಗಳಿರುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಸೋಲಿನ ಹತಾಶೆ, ಕಡಿಮೆ ಅಂಕ ಗಳಿಕೆ, ಮಾನಸಿಕ ಖಿನ್ನತೆ, ಯುವಕರಲ್ಲಿ ನಿರುದ್ಯೋಗ, ಪ್ರೇಮ ವೈಫಲ್ಯ, ಇನ್ನು ಸಾಮಾನ್ಯವಾಗಿ ಕೌಟುಂಬಿಕ ಸಮಸ್ಯೆ, ಅನಾರೋಗ್ಯ, ಒಂಟಿತನ, ದುಶ್ಚಟಗಳು, ಆರ್ಥಿಕ ತೊಂದರೆ ಹೀಗೆ ಅನೇಕ ಕಾರಣಗಳನ್ನು ಗಮನಿಸಬಹುದಾಗಿದೆ. ಇವೆಲ್ಲವನ್ನು ಗಮನಿಸಿದಾಗ ಆತ್ಮಹತ್ಯೆ ಒಂದು ಮಾನಸಿಕ ತುರ್ತುಪರಿಸ್ಥಿತಿಯೆಂದು ಭಾಸವಾಗುತ್ತದೆ.
6 ತಿಂಗಳಲ್ಲಿ 58 ಆತ್ಮಹತ್ಯೆ
ಇತ್ತೀಚಿನ ದಿನಗಳಲ್ಲಿ ಕಾರ್ಕಳದಲ್ಲಿ ಆತ್ಮಹತ್ಯೆ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದೆ. ಪೊಲೀಸ್ ದಾಖಲೆಯ ಪ್ರಕಾರ 2022ರಲ್ಲಿ ಕಾರ್ಕಳ – ಹೆಬ್ರಿ ತಾಲೂಕಿನಲ್ಲಿ 96 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2023 ರ ಜನವರಿಯಿಂದ ಜೂನ್ ತಿಂಗಳವರೆಗೆ 58 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 24, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14, ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಹಾಗೂ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಪ್ರಕರಣ ಇಷ್ಟೊಂದು ಪ್ರಮಾಣದಲ್ಲಿ ಆಗುತ್ತಿರುವುದು ಆತಂಕಕಾರಿ ವಿಚಾರ.

ಈ ಪ್ರಕರಣದಲ್ಲಿ ಹೆಚ್ಚಿನವರು ನೇಣಿಗೆ ಶರಣಾದವರು. ಇನ್ನು ಕೆಲವರು ಕೆರೆ, ಬಾವಿಗೆ ಹಾರಿ ಅಸುನೀಗಿದವರು. ಕೆಲವರು ವಿಷ ಪದಾರ್ಥ ಸೇವಿಸಿ ಪ್ರಾಣ ಕಳೆದುಕೊಂಡವರು. ಆದರೆ, ಈ ಎಲ್ಲಾ ಪ್ರಕರಣಗಳನ್ನು ಗಮನಿಸಿದಾಗ, ಆರೋಗ್ಯ ಸಮಸ್ಯೆ ಮತ್ತು ಮದ್ಯ ವ್ಯಸನ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿ ಕಂಡುಬಂದಿದೆ. ಇದರೊಂದಿಗೆ ಮಾನಸಿಕ ಖಿನ್ನತೆ, ಕೌಟುಂಬಿಕ ಸಮಸ್ಯೆಯ ಕಾರಣವೂ ದಾಖಲಾಗಿದೆ. ಇನ್ನು ಡ್ರಗ್ಸ್ ಸೇವನೆಯಿಂದಲೂ ಆತ್ಮಹತ್ಯೆಗೆ ಶರಣಾದ ಪ್ರಕರಣಗಳೂ ಇವೆ.
ಎಚ್ಚರವಿರಲಿ
ಆತ್ಮಹತ್ಯೆಗೆ ಶರಣಾಗ ಬಯಸುವ ವ್ಯಕ್ತಿಗಳು ಹಲವು ರೀತಿಯಲ್ಲಿ ಮುನ್ಸೂಚನೆಗಳನ್ನು ನೀಡುತ್ತಿರುತ್ತಾರೆ. ಸಾವು, ಆತ್ಮಹತ್ಯೆ ಬಗ್ಗೆ ಮಾತನಾಡುವುದು, ಸಾವಿನ ಕುರಿತು ಇತರರೊಂದಿಗೆ ಚರ್ಚೆ ಮಾಡುವುದು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂಬಂಧಿಕರು, ಸ್ನೇಹಿತರಿಗೆ ಹೇಳುವುದು, ಸಾವೇ ಎಲ್ಲದಕ್ಕೂ ಪರಿಹಾರ ಎಂದು ಭಾವನಾತ್ಮಕವಾಗಿ ಮಾತನಾಡುವುದು. ಕೆಲವರು ಸಾಯುವ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸುವಾಗ ಅವರ ಜೊತೆಗಿದ್ದವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ.
ಬದುಕನ್ನು ಪ್ರೀತಿಸಿ
ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಎಡೆಮಾಡಿಕೊಡುತ್ತದೆ. ಕೆಲವೊಂದು ಮಾನಸಿಕ ಪ್ರಚೋದನೆಗಳು ಆತ್ಮಹತ್ಯೆಯ ನಿರ್ಧಾರವನ್ನು ಕೈಗೊಳ್ಳುವಂತೆ ಮಾಡುತ್ತದೆ. ಆದರೆ, ಜೀವನದಲ್ಲಿ ಎದುರಾಗುವ ಸುಖ ದುಖಗಳನ್ನು ಸಮಾನವಾಗಿ ಸ್ವೀಕರಿಸಿದಾಗ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಕೆಲವೊಮ್ಮೆ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲದೆ ಇರಬಹುದು, ಆದರೆ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಈ ಬದಲಾವಣೆ ಬದುಕಿನ ಅಸ್ತಿತ್ವವನ್ನು ಪ್ರತಿನಿಧಿಸುವಂತಿರಬೇಕು. ಬದುಕನ್ನು ಪ್ರೀತಿಸಲು ಕಲಿತಾಗ, ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯ ದೊರೆಯುವುದು.
ಟಿಲಿ ಮಾನಸ್ – ಸಹಾಯವಾಣಿ
ಮಾನಸಿಕ ಖಿನ್ನತೆ, ಒತ್ತಡ, ಆರೋಗ್ಯ ಸಮಸ್ಯೆ ಮತ್ತು ಆತ್ಮಹತ್ಯೆ ಆಲೋಚನೆ ಹೊಂದಿರುವವರ ಸಮಸ್ಯೆ ಪರಿಹಾರಕ್ಕಾಗಿ, ಗೊಂದಲಗಳ ನಿವಾರಣೆಗಾಗಿ ಟೆಲಿ ಮಾನಸ್ – 14416 ಸಂಖ್ಯೆಯ ಸಹಾಯವಾಣಿಯನ್ನು ಸರಕಾರ ಪ್ರಾರಂಭಿಸಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ಸಹಾಯವಾಣಿ ಲಭ್ಯವಿದೆ.
ಒತ್ತಡ ಮತ್ತು ಸಮಸ್ಯೆ ಎದರಿಸುವುದನ್ನು ಜೀವನದಲ್ಲಿ ಕಲಿಯದೆ ಇರುವುದೇ ಆತ್ಮಹತ್ಯೆಗೆ ಪ್ರಮುಖ ಕಾರಣ. ಸಣ್ಣ ವಯಸ್ಸಿನಿಂದಲೇ ಸಮಸ್ಯೆಯನ್ನು ಎದುರಿಸುವ ಗುಣ ಬೆಳೆಸಿಕೊಳ್ಳಬೇಕು. ಇನ್ನು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣ ನಿಯಂತ್ರಣದಲ್ಲಿರದೆ ಇರುವುದು ಆತ್ಮಹತ್ಯೆಗೆ ಎಡೆಮಾಡಿಕೊಡುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಡಿಪ್ರೆಶನ್ ಮತ್ತು ಸಿಝೋಪ್ರೀಮಿಯಾ ಕಾಯಿಲೆ ಹೊಂದಿರುವವರಲ್ಲಿ ಆತ್ಮಹತ್ಯೆಯ ಆತಂಕವಿದ್ದು, ಅವರು ಸರಿಯಾದ ಚಿಕಿತ್ಸೆ ಪಡೆದಲ್ಲಿ ಕಾಯಿಲೆ ಗುಣಮುಖವಾಗುತ್ತದೆ. ಮಾನಸಿಕ ಖಿನ್ನತೆ ಲಕ್ಷಣ ಕಂಡುಬಂದಲ್ಲಿ ಮನೋವೈದ್ಯರು ಅಥವಾ ಟೆಲಿಮಾನಸ್ ಸಹಾಯದಿಂದ ಸಮಸ್ಯೆ ಪರಿಹರಿಸಿಕೊಳ್ಳಬಹುದು.
-ಡಾ. ಮನು ಆನಂದ್
ಮನೋವೈದ್ಯರು
ಆತ್ಮಹತ್ಯೆಯ ಪ್ರಕರಣಗಳನ್ನು ಗಮನಿಸಿದಾಗ ಮಾನಸಿಕ ಖಿನ್ನತೆ, ಜೀವನ ಜಿಗುಪ್ಸೆ, ಮದ್ಯ ವ್ಯಸನ, ಹತಾಶ ಭಾವನೆ, ಆರೋಗ್ಯ ಸಮಸ್ಯೆ ಮತ್ತು ವಿದ್ಯಾರ್ಥಿಗಳಲ್ಲಿ ಕಡಿಮೆ ಅಂಕ ಗಳಿಕೆಯಂತಹ ಸೋಲಿನ ಭೀತಿ ಆತ್ಮಹತ್ಯೆಗೆ ಪ್ರಮುಖವಾಗಿ ಕಂಡು ಬಂದ ಕಾರಣಗಳಾಗಿವೆ. ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಎದುರಿಸುವ ಮನಸ್ಥಿತಿಯೊಂದಿಗೆ, ವ್ಯವಸ್ಥಿತ ಜೀವನ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಆತ್ಮಹತ್ಯೆಯ ಆತಂಕವನ್ನು ದೂರಮಾಡಿಕೊಳ್ಳಬಹುದು.
-ಟಿ. ಡಿ. ನಾಗರಾಜ್
ವೃತ್ತ ನಿರೀಕ್ಷರು ಕಾರ್ಕಳ
ವರದಿ : ನಳಿನಿ ಎಸ್. ಸುವರ್ಣ









































