ಡಾ. ಕೆ. ಆರ್.‌ ಜೋಶಿ ಅವರಿಗೆ ಗೌರವ ಪುರಸ್ಕಾರ

ಕಾರ್ಕಳ : ಕನ್ನಡ ನಾಡು – ನುಡಿ, ಸಂಸ್ಕೃತಿ ಹಾಗೂ ವೈದ್ಯಕೀಯ ಸೇವೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ‌ ತಾಲೂಕು ಘಟಕ, ಮಲಬಾರ್‌ ಗೋಲ್ಡ್‌ ಆಂಡ್‌ ಡೈಮಂಡ್ಸ್‌ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವೈದ್ಯರ ದಿನಾಚರಣೆ ಪ್ರಯುಕ್ತ ಕೊಡ ಮಾಡುವ ಗೌರವ ಪುರಸ್ಕಾರಕ್ಕೆ ಕಾರ್ಕಳದ ಖ್ಯಾತ ವೈದ್ಯ ಡಾ. ಕೆ. ಆರ್‌. ಜೋಶಿ ಭಾಜನರಾಗಿದ್ದಾರೆ. ಇವರೊಂದಿಗೆ ಉಡುಪಿ ಜಿಲ್ಲೆಯ ಪ್ರಖ್ಯಾತ ವೈದ್ಯರಾದ ಡಾ. ಹಂಗ್ಳೂರು ರಾಘವೇಂದ್ರ ಹೆಬ್ಬಾರ್‌, ಡಾ. ಪುಷ್ಪಗಂಧಿನಿ, ಪ್ರೊ. ಎ. ರಾಜ, ಡಾ. ಎನ್.‌ಆರ್.‌ ರಾವ್‌, ಡಾ. ರಂಜಿತ್‌ ಕುಮಾರ್‌ ಶೆಟ್ಟಿ, ಡಾ. ಡೊನಾಲ್ಡ್‌ ಸೈಮನ್ಸ್‌ ಅವರು ಪುರಸ್ಕೃತಗೊಳ್ಳಲಿದ್ದಾರೆ.

ಜೂ. 30ರಂದು ಮಲಬಾರ್‌ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೈದ್ಯ ದಂಪತಿ ಡಾ. ಜೋಶಿ ಹಾಗೂ ಡಾ. ರೇಣುಕಾ ಆರ್.‌ ಜೋಶಿ ಪುರಸ್ಕಾರ ಸ್ವೀಕರಿಸಲಿರುವರು. ಉಡುಪಿ ಶಾಸಕ ಯಶ್‌ಪಾಲ್‌ ಎ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಐಎಂಎ ಅಧ್ಯಕ್ಷ ಡಾ.ವಿ.ಪಿ. ಭಂಡಾರಿ ಸನ್ಮಾನಿಸಲಿರುವರು. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ, ಅಧ್ಯಕ್ಷ ಶಂಕರ್‌, ಮಲಾಬಾರ್‌ ಗೋಲ್ಡ್ ಆ್ಯಂಡ್ ಡೈಮೆಂಡ್ಸ್‌ ಉಡುಪಿ ಶಾಖೆಯ ವ್ಯವಸ್ಥಾಪಕ ಹಫೀಸ್‌ ರೆಹಮಾನ್‌, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್‌ ಎಚ್.‌ ಪಿ. ಉಪಸ್ಥಿತರಿರುವರು ಎಂದು ಸಂಘಟಕರು ತಿಳಿಸಿದ್ದಾರೆ.

ಡಾ. ಕೆ. ಆರ್.‌ ಜೋಶಿ
1964 ರಲ್ಲಿ ಕಾರ್ಕಳದಲ್ಲಿ ಜನಿಸಿದ ಕೆ. ಆರ್.‌ ಜೋಶಿ ಅವರು ತಮ್ಮ ಶಾಲಾ ಕಾಲೇಜು ಶಿಕ್ಷಣವನ್ನು ಕಾರ್ಕಳದಲ್ಲೇ ಪಡೆದಿರುತ್ತಾರೆ. ಪ್ರತಿಭಾನಿತ್ವ ವಿದ್ಯಾರ್ಥಿಯಾಗಿದ್ದ ಜೋಶಿ ಅವರು ಗಣಿತ ವಿಷಯದಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮೆರೆದಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲೇ 10 ರ್‍ಯಾಂಕ್‌ ಗಳಿಸಿದ್ದರು. ಎಂಬಿಬಿಎಸ್‌ ಶಿಕ್ಷಣವನ್ನು ಸರಕಾರಿ ಕೋಟದಡಿ ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಎಂ.ಡಿ. ಪದವಿಯನ್ನು ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು.

ಸರಕಾರಿ ವೈದ್ಯರಾಗಿ ವೃತ್ತಿ ಜೀವನ ಆರಂಭಿಸಿದ ಡಾ. ಜೋಶಿ ಅವರು ಪುಂಜಾಲಕಟ್ಟೆ, ಇರ್ವತ್ತೂರು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸಿರುತ್ತಾರೆ. 35 ವರ್ಷಗಳಿಂದ ವೈದ್ಯರಾಗಿ ಜನಾನುರಾಗಿರುವ ಡಾ. ಜೋಶಿ 25 ವರ್ಷಗಳ ಕಾಲ ಸರಕಾರಿ ವೈದ್ಯರಾಗಿದ್ದರು. 10 ವರ್ಷ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸೀನಿಯರ್‌ ಸ್ಪೇಷಲಿಸ್ಟ್‌ ಆಗಿ ಸೇವೆ ಸಲ್ಲಿಸಿದ್ದರು.

ವೈದ್ಯಕೀಯ ಸೇವೆ ಮಾತ್ರವಲ್ಲದೇ ಡಾ. ಜೋಶಿ ಅವರು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. 3 ದಶಕಗಳ ಕಾಲ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಕ್ರಿಯ ಸದಸ್ಯರಾಗಿದ್ದು ಮೂರು ಬಾರಿ ಐಎಂಎ ಕಾರ್ಕಳ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ವೈದ್ಯಕೀಯ ಗೋಷ್ಠಿಗಳನ್ನು ನಡೆಸುವಲ್ಲಿ ವಿಶೇಷ ಆಸಕ್ತಿ ಹೊಂದಿರುವ ಡಾ. ಜೋಶಿ ಇತ್ತೀಚೆಗೆ ಆಳ್ವಾಸ್‌ ಕ್ಯಾಂಪಸ್‌ ನಲ್ಲಿ ನಡೆದ ಐಎಂಎ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸೈಂಟಿಫಿಕ್‌ ಕಮಿಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ‍ಪ್ರಶಂಸೆಗೀಡಾಗಿದ್ದರು. ಓರ್ವ ಉತ್ತಮ ಸಂಘಟಕರಾಗಿರುವ ಇವರು ಕಾರ್ಕಳ ರೆಡ್‌ ಕ್ರಾಸ್‌ ಘಟಕ ಸ್ಥಾಪಿಸಿ ಕಳೆದ 5 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಕ್ತದಾನ ಶಿಬಿರ ಹಾಗೂ ವೈದ್ಯಕೀಯ ಶಿಬಿರ ಸೇರಿದಂತೆ 100ಕ್ಕೂ ಅಧಿಕ ಕಾರ್ಯಕ್ರಮ ಇವರ ನೇತೃತ್ವದಲ್ಲೇ ಆಯೋಜನೆಗೊಂಡಿದೆ. ಶ್ರೀ ಭುವನೇಂದ್ರ ಮೆಡಿಕಲ್‌ ಮಿಷನ್‌ನ ವೈದ್ಯಕೀಯ ನಿರ್ದೇಶಕರಾಗಿ, ರೋಟರಿ, ಜೇಸಿ ಸಂಸ್ಥೆಗಳಲ್ಲಿ ಸದಸ್ಯರಾಗಿ ಗುರುತಿಸಿಕೊಂಡಿರುವ ಡಾ. ಜೋಶಿ ವೈದ್ಯಕೀಯ, ಸಾಮಾಜಿಕ ಸೇವೆ ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಹರಸಿದೆ. ಸರಕಾರದ ಆರೋಗ್ಯ ಇಲಾಖೆಯ ನ್ಯಾಷನಲ್‌ ರೂರಲ್‌ ಹೆಲ್ತ್‌ ವಿಷನ್‌ ಡಾ. ಜೋಶಿ ಅವರಿಗೆ ಉತ್ತಮ ತಜ್ಞ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಡಾ. ಜೋಶಿ ಪತ್ನಿ ಡಾ. ರೇಣುಕಾ ಆರ್‌. ಜೋಶಿ ಅವರು ಆಯುರ್ವೇದಿಕ್‌ ವೈದ್ಯರಾಗಿದ್ದು ಪತಿಯ ಎಲ್ಲ ಕಾರ್ಯಗಳಿಗೂ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ. ಹಿರಿಯ ಪುತ್ರ ಆಶೀಸ್‌ ಅಮೇರಿಕಾದಲ್ಲಿ ಇಂಜಿನಿಯರ್‌ ಆಗಿದ್ದಾರೆ. ಕಿರಿಯ ಪುತ್ರ ಅನೀಶ್‌ ಹೈದರಾಬಾದ್‌ನ ತ್ರಿಪಲ್‌ ಐಟಿ ಕಾಲೇಜಿನಲ್ಲಿ ಇಂಜಿನಿಯರ್‌ ವ್ಯಾಸಂಗ ಮಾಡುತ್ತಿದ್ದಾರೆ.





























































































































error: Content is protected !!
Scroll to Top