ಒಡಿಶಾ ರೈಲು ದುರಂತದ ಸಿಬಿಐ ತನಿಖೆ ಪ್ರಶ್ನಿಸಿದ್ದ ಖರ್ಗೆಯ ಎಲ್ಲ ಆರೋಪಗಳಿಗೆ ಉತ್ತರ
ಬೆಂಗಳೂರು: ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ್ದ ಭೀಕರ ರೈಲು ದುರಂತದ ಸಿಬಿಐ ತನಿಖೆ ಆಕ್ಷೇಪಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಇದೀಗ ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಪತ್ರದಲ್ಲೇ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಸದಾನಂದ ಗೌಡ ಹಾಗೂ ಎಸ್. ಮುನಿಸ್ವಾಮಿ ಪತ್ರ ಬರೆದಿದ್ದಾರೆ. ಖರ್ಗೆ ಅವರು ಮಾಡಿರುವ ಆರೋಪಗಳು ಮತ್ತು ಪತ್ರದಲ್ಲಿ ಉಲ್ಲೇಖಿಸಿದ್ದ ಪ್ರತಿಯೊಂದು ವಿಚಾರಗಳಿಗೂ ಬಿಜೆಪಿ ಸಂಸದರು ಆಧಾರ ಸಹಿತ ಉತ್ತರ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀವು ಇತ್ತೀಚೆಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಕೆಲವೊಂದು ವಿಚಾರಗಳನ್ನು ನಾವು ಹೇಳಲೇಬೇಕಿದೆ. ನಾವು ನಿಮ್ಮ ಪತ್ರದಲ್ಲಿ ವಾಕ್ಚಾತುರ್ಯ ಹೆಚ್ಚು ಮತ್ತು ಕಡಿಮೆ ವಾಸ್ತವ ಇರುವುದನ್ನು ಕಂಡುಕೊಂಡಿದ್ದೇವೆ. ಮಾಜಿ ರೈಲ್ವೆ ಸಚಿವರಾಗಿ ಪರಿಸ್ಥಿತಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯು ವಿವೇಚನೆ ಮತ್ತು ಆಳವಾದ ತಿಳಿವಳಿಕೆಯಿಂದ ತುಂಬಿರುತ್ತದೆ ಎಂದು ನಿರೀಕ್ಷಿಸಬಹುದಿತ್ತು. ಆದರೆ ನಿಮ್ಮ ಪತ್ರವು ವಾಸ್ತವಕ್ಕೆ ದೂರವಾಗಿತ್ತು. ಅದಕ್ಕಾಗಿ ನಾವು ನಿಮಗೆ ವಾಸ್ತವವನ್ನು ತಿಳಿಸಬೇಕಿದೆ ಎಂದು ಬಿಜೆಪಿಯ ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೊದಲನೆಯದಾಗಿ ನೇಮಕಾತಿಗೆ ಸಂಬಂಧಿಸಿದಂತೆ ಹೇಳುವುದಾದರೆ ಕಳೆದ 9 ವರ್ಷಗಳಲ್ಲಿ ರೈಲ್ವೆ 4.58 ಲಕ್ಷ ಹೊಸ ನೇಮಕಾತಿಗಳನ್ನು ಮಾಡಿದೆ. ಪ್ರಸ್ತುತ ಸುಮಾರು ಲಕ್ಷ ಅಭ್ಯರ್ಥಿಗಳನ್ನು ನೇಮಿಸಲು ಪ್ರಕ್ರಿಯೆಯು ನಡೆಯುತ್ತಿದೆ. ಹೀಗಾಗಿ ನಮ್ಮ ಅಧಿಕಾರಾವಧಿಯಲ್ಲಿ 8 ಲಕ್ಷಕ್ಕೂ ಹೆಚ್ಚು ನೇಮಕಾತಿ ಮಾಡಿಕೊಂಡಂತಾಗಲಿದೆ. ಇದು ಯುಪಿಎ ಅವಧಿಯಲ್ಲಿ ನೇಮಕಗೊಂಡ 4.50 ಲಕ್ಷ ಅಭ್ಯರ್ಥಿಗಳಿಗಿಂತ ಸುಮಾರು ಶೇ.50ರಷ್ಟು ಹೆಚ್ಚು.
ಎರಡನೆಯದಾಗಿ 5,518 ಸಹಾಯಕ ಲೋಕೊ ಪೈಲಟ್‌ಗಳು ಹೊಸದಾಗಿ ನೇಮಕಗೊಂಡಿದ್ದಾರೆ. ಈ ವಲಯವನ್ನು ನಿರ್ಲಕ್ಷಿಸುವ ನಿಮ್ಮ ಆರೋಪಗಳನ್ನು ಇದು ಅಲ್ಲಗಳೆಯುತ್ತದೆ.
ನೀವು ಹೇಳಿದ ಫೆಬ್ರವರಿ 2023ರ ಘಟನೆಯನ್ನು ರೈಲ್ವೆಯು ಕೂಲಂಕಷವಾಗಿ ತನಿಖೆ ಮಾಡಿದೆ. ಹೊಣೆಗಾರರ ವಿರುದ್ಧ ಕ್ರಮ ಜರುಗಿಸಲಾಗಿದೆ. ನಿರ್ವಹಣಾ ಪದ್ಧತಿಗಳ ಕಟ್ಟುನಿಟ್ಟಿನ ಅನುಷ್ಠಾನದ ಕುರಿತು ಎಲ್ಲ ರೈಲ್ವೆ ಸಿಬ್ಬಂದಿಗೆ ಸಲಹೆ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಿಮ್ಮ ಪತ್ರದಲ್ಲಿ ಹೇಳಿರುವಂತೆ ಮೈಸೂರಿನಲ್ಲಿ ಯಾವುದೇ ರೈಲು ಡಿಕ್ಕಿಯಾಗಿಲ್ಲ ಎಂಬುದೂ ವಾಸ್ತವ. ವಾಟ್ಸಾಪ್ ಯೂನಿವರ್ಸಿಟಿಯಿಂದ ಪಡೆದ ಸತ್ಯಗಳ ಆಧಾರದ ಮೇಲೆ ಪ್ರಧಾನಿಗೆ ಪತ್ರ ಬರೆಯುವುದು ನಿಮ್ಮಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕನಿಗೆ ಸರಿಹೊಂದುವುದಿಲ್ಲ. ಬಹುಶಃ ವಾಟ್ಸಾಪ್ ಯೂನಿವರ್ಸಿಟಿಯ ಉಪಕುಲಪತಿಯಾಗಿ, ನೀವು ನಕಲಿ ಸುದ್ದಿಗಳನ್ನು ಸತ್ಯವೆಂದು ಪ್ರತಿಪಾದಿಸಲು ಒತ್ತಾಯಿಸಲ್ಪಟ್ಟಿದ್ದೀರಿ ಎಂದು ಕಾಣುತ್ತದೆ ಎಂದು ಸಂಸದರ ಪತ್ರದಲ್ಲಿ ಕುಟುಕಲಾಗಿದೆ.
ಹೀಗೆ ಖರ್ಗೆ ಮಾಡಿರುವ ಪ್ರತಿಯೊಂದು ಆರೋಪಕ್ಕೂ ಸಂಸದರು ಪತ್ರದಲ್ಲಿ ಉತ್ತರ ನೀಡಿದ್ದಾರೆ.
ರೈಲು ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದ ಮಲ್ಲಿಕಾರ್ಜುನ ಖರ್ಗೆ, ಮೊದಲಾಗಿ ಸಿಬಿಐ ಇರುವುದು ಅಪರಾಧ ಪ್ರಕರಣಗಳ ತನಿಖೆ ನಡೆಸುವುದಕ್ಕೇ ಹೊರತು ರೈಲ್ವೆ ಅಪಘಾತಗಳ ತನಿಖೆ ನಡೆಸುವುದಕ್ಕಲ್ಲ. ನಿಮ್ಮ ಈ ನಡೆಯಿಂದ ರಾಜಕೀಯ ವೈಫಲ್ಯಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದರು ಎಂದಿದ್ದರು.














































































