ಕಾಡಿನಲ್ಲಿ ವಿಮಾನ ಪತನಗೊಂಡು ನಾಪತ್ತೆಯಾಗಿದ್ದ 4 ಮಕ್ಕಳು 40 ದಿನದ ಬಳಿಕ ಪತ್ತೆ

ಎಳೆ ಪ್ರಾಯದ ಮಕ್ಕಳು ಇಷ್ಟು ದಿನ ಕ್ರೂರ ಮೃಗಳಿರುವ ಕಾಡಿನಲ್ಲಿ ಹೇಗೆ ಕಳೆದರು ಎನ್ನುವ ಸೋಜಿಗ

ಕೊಲಂಬಿಯ : ಅಮೆಜಾನ್‌ನ ದಟ್ಟ ಮಳೆಕಾಡಿನಲ್ಲಿ 40 ದಿನಗಳ ಹಿಂದೆ ವಿಮಾನ ಪತನಗೊಂಡು ನಾಪತ್ತೆಯಾಗಿದ್ದ ನಾಲ್ಕು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಕೊಲಂಬಿಯದ ಸೈನಿಕರು ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಎಳೆ ಪ್ರಾಯದ ಮಕ್ಕಳು 40 ದಿನ ಕ್ರೂರ ಮೃಗಗಳು ಮತ್ತು ಅವ್ಯಾಹತವಾಗಿ ಮಳೆ ಸುರಿಯುವ ಕಾಡಿನಲ್ಲಿ ಹೇಗೆ ಬದುಕಿ ಉಳಿದರು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕು. ಆದರೆ ಮಕ್ಕಳು ಇಷ್ಟು ದಿನಗಳ ಬಳಿಕ ಬದುಕುಳಿದಿರುವುದು ಮಾತ್ರ ಅದ್ಭುತ ಎಂದು ಇಡೀ ಜಗತ್ತು ಉದ್ಘರಿಸುತ್ತಿದೆ.
ಮಕ್ಕಳ ಶೋಧ ಕಾರ್ಯ ಕೊಲಂಬಿಯ ಮಾತ್ರವಲ್ಲದೆ ಇಡೀ ಜಗತ್ತಿನ ಕುತೂಹಲ ಕೆರಳಿಸಿತ್ತು.
ಮಕ್ಕಳು ಜೀವಂತ ಪತ್ತೆಯಾಗಿರುವುದನ್ನು ಕೊಲಂಬಿಯದ ಅಧ್ಯಕ್ಷ ಗುಸ್ತವೊ ಪೆರೊ ಇದು ಇತಿಹಾಸದಲ್ಲಿ ಚಿರಕಾಲ ಉಳಿಯುವ ಘಟನೆ ಮತ್ತು ಪ್ರತಿಕೂಲ ಹವಾಮಾನದಲ್ಲೂ ಮನುಷ್ಯ ಬದುಕುಳಿದ ಅಪರೂಪದ ವಿದ್ಯಮಾನ ಎಂದು ಬಣ್ಣಿಸಿದ್ದಾರೆ.
ಮೇ 1ರಂದು ಅಮೆಜಾನ್‌ ಕಾಡಿನ ಮಧ್ಯದಲ್ಲಿ ಸಿಸ್ನಾ ಸಿಂಗಲ್‌ ಇಂಜಿನ್‌ ಪ್ರೊಪೆಲ್ಲರ್‌ ಪ್ಲೇನ್‌ ಖಾಸಗಿ ವಿಮಾನವೊಂದು ಪತನಗೋಂಡಿತ್ತು. ವಿಮಾನದಲ್ಲಿದ್ದ ಮೂವರು ಹಿರಿಯರ ಮೃತದೇಹ ಎರಡು ವಾರಗಳ ಬಳಿಕ ಅವಢಡ ಸಂಭವಿಸಿದ ಸ್ಥಳದ ಸುತ್ತಮುತ್ತ ಪತ್ತೆಯಾಗಿತ್ತು. ಆದರೆ 13, 9 4 ವರ್ಷ ಮತ್ತು 11 ತಿಂಗಳು ಪ್ರಾಯದ ಮಕ್ಕಳು ಸಿಕ್ಕಿರಲಿಲ್ಲ. ಮೃತದೇಹಗಳು ಸಿಗದ ಹಿನ್ನೆಲೆಯಲ್ಲಿ ಕೊಲಂಬಿಯ ಸರಕಾರ ಅವರು ಬದುಕಿದ್ದಾರೆ ಎಂದು ತೀರ್ಮಾನಿಸಿ ಪತ್ತೆ ಕಾರ್ಯ ಪ್ರಾರಂಭಿಸಿತ್ತು. ಇದಕ್ಕಾಗಿ 150 ಸೈನಿಕರು ಮತ್ತು ಶ್ವಾನಪಡೆ ನಿಯೋಜಿಸಿತ್ತು.
ಕಾಡಿನಂಚಿನಲ್ಲಿರುವ ಜನರು ಮತ್ತು ಅನೇಕ ಸ್ವಯಂಸೇವಕರು ಪತ್ತೆ ಕಾರ್ಯದಲ್ಲಿ ಕೈಜೋಡಿಸಿದ್ದರು. ಶುಕ್ರವಾರ ಮಕ್ಕಳು ಸಿಕ್ಕಿದ್ದಾರೆಂದು ಸೇನೆ ಟ್ವೀಟ್‌ ಮಾಡಿ ತಿಳಿಸಿದಾಗ ಕೊಲಂಬಿಯದಲ್ಲಿ ಸಂಭ್ರಮದ ವಾತಾವರಣ ಮೂಡಿದೆ. ಮಕ್ಕಳು ಈಗ ಸೈನಿಕರ ಆರೈಕೆಯಲ್ಲಿದ್ದಾರೆ.

































































































































































error: Content is protected !!
Scroll to Top