ಅವಲೋಕನ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹ
ಬೆಂಗಳೂರು: ಚುನಾವಣೆ ಮುಗಿದು ಒಂದು ತಿಂಗಳಾದರೂ ಬಿಜೆಪಿಗೆ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಚುನಾವಣೆ ಸೋಲಿನ ಆತ್ಮಾವಲೋಕನ ಸಭೆ ನಡೆಸಿರುವ ಬಿಜೆಪಿ, ಸೋಲಿಗೆ 3 ಕಾರಣಗಳನ್ನು ಕಂಡುಕೊಂಡಿದೆ. ಆದರೆ ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನೂ ಅಂತಿಮಗೊಂಡಿಲ್ಲ.
ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜತೆ ಸೋಲಿನ ಕುರಿತು ಆತ್ಮಾವಲೋಕನ ನಡೆಯಿತು. ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಲು ರಾಜ್ಯ ನಾಯಕರು, ಸಚಿವರು ಪ್ರಮುಖ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ತಿಳಿದುಬಂದಿದೆ.
ನಮ್ಮ ಮೇಲೆ ಇನ್ನೊಬ್ಬರನ್ನು ತಂದು ಕೂರಿಸಿದ್ದು ಸೋಲಿಗೆ ಕಾರಣವಾಯಿತು ಎಂದು ಸೋತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಪರಾಜಿತ ನಾಯಕರು ಸರ್ಕಾರ ಇದ್ದಾಗ ಸಚಿವರು ಸ್ಪಂದಿಸದೆ ಇದ್ದದ್ದು, ಕ್ಷೇತ್ರಗಳ ಸಮಸ್ಯೆಗಳಿಗೆ ಸೂಕ್ತ ಮತ್ತು ಅಗತ್ಯವಿದ್ದದಷ್ಟು ಅನುದಾನ ನೀಡದೆ ಇದ್ದದ್ದು ಸೋಲಿಗೆ ಕಾರಣವಾಗಿದೆ ಎಂದು ಸಭೆಯಲ್ಲಿ ನೋವನ್ನು ತೋಡಿಕೊಂಡಿದ್ದಾರೆ.
ಸೋತ ಅಭ್ಯರ್ಥಿಗಳ ಸಭೆಗೆ ಹಿರಿಯ ಮುಖಂಡರಾದ ವಿ.ಸೋಮಣ್ಣ, ಡಾ.ಕೆ.ಸುಧಾಕರ್, ಜೆ.ಸಿ.ಮಾಧುಸ್ವಾಮಿ ಗೈರು ಹಾಜರಾಗಿರುವುದು ಕುತೂಹಲ ಮೂಡುವಂತೆ ಮಾಡಿದೆ. ಸುಧಾಕರ್ ಉದ್ದೇಶಪೂರ್ವಕವಾಗಿ ವಿದೇಶ ಪ್ರವಾಸ ಕೈಗೊಂಡಿದ್ದರೆ, ನಾಯಕರ ಮೇಲಿನ ಸಿಟ್ಟಿನಿಂದ ವಿ.ಸೋಮಣ್ಣ ಸಭೆಯಲ್ಲಿ ಭಾಗವಹಿಸಿಲ್ಲ. ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ.ಸಿ. ನಾಗೇಶ್, ಬಿ.ಸಿ. ಪಾಟೀಲ್, ಶ್ರೀರಾಮುಲು ಮತ್ತು ಕೆ.ಸಿ. ನಾರಾಯಣ ಗೌಡ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ವಿರೋಧ ಪಕ್ಷದ ನಾಯಕ ಯಾರು ಎಂಬ ಬಗ್ಗೆ ಶಾಸಕರಿಂದ ಪ್ರತಿಕ್ರಿಯೆ ಸಂಗ್ರಹಿಸಿದ್ದಾರೆ. ಪರಿಶೀಲನಾ ಸಭೆಯ ನಂತರ ವಿಪಕ್ಷ ನಾಯಕರನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುವುದು. ಒಳ ಮೀಸಲಾತಿ, ಜನರು ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳು ಹಾಗೂ ಬಿಜೆಪಿ ಸರ್ಕಾರದ ಬಗೆಗಿನ ನಕಾರಾತ್ಮಕ ಪ್ರಚಾರದಿಂದ ಪಕ್ಷ ಸೋಲು ಕಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ರಾಜ್ಯದಲ್ಲಿ 1985ರ ಚುನಾವಣೆ ಹೊರತುಪಡಿಸಿ ಬಳಿಕ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಉದಾಹಣೆ ಇಲ್ಲ. ಬಿಜೆಪಿ ಎದೆಗುಂದುವ ಪಕ್ಷವಲ್ಲ. 1984ರ ಲೋಕಸಭಾ ಚನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿತ್ತು. ಎದೆಗುಂದದೆ ಪಕ್ಷ ಸಂಘಟನೆ ಮಾಡಲಾಯಿತು. ಈ ಚುನಾವಣೆಯಲ್ಲಿಯೂ ನಮ್ಮ ಪಕ್ಷದ ಮತ ಪ್ರಮಾಣ ಕಡಿಮೆಯಾಗಿಲ್ಲ. ಸ್ಥಾನಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ. ಸರ್ಕಾರದ ಒಳ್ಳೆಯ ಕಾರ್ಯಕ್ಕೆ ಸಹಕಾರ ನೀಡಲಾಗುವುದು. ಜನವಿರೋಧಿ ಕಾರ್ಯ ಮುಂದುವರಿಸಿದಾಗ ಮತ್ತು ಹಿಡನ್ ಅಜೆಂಡಾ ಜತೆ ಘಾತುಕ ನಿರ್ಣಯ ಕೈಗೊಂಡರೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.














































































