ಕೆಲವರಿಗೆ ಪದೆ ಪದೆ ಬಾಯಿ ಹುಣ್ಣು ಆಗುವ ಸಮಸ್ಯೆ. ಆಹಾರ ಸೇವನೆ ಮಾಡಲು ಕಷ್ಟ. ಬಿಸಿ, ಖಾರ ಆಹಾರ ಸೇವಿಸಿದರೆ ಉರಿ ಜಾಸ್ತಿ. ಬಾಯಿ ಹುಣ್ಣು ಯಾಕೆ,ಯಾರಿಗೆ, ಅದನ್ನು ತಡೆಯುವ ಕ್ರಮ ಹಾಗೂ ಮನೆಮದ್ದನ್ನು ತಿಳಿದುಕೊಳ್ಳೋಣ .
ಬಾಯಿ ಹುಣ್ಣನ್ನು ಆಯುರ್ವೇದದಲ್ಲಿ ಮುಖಪಾಕ ಎಂದು ಕರೆಯುತ್ತಾರೆ. ಇದು ಚಿಕ್ಕದು ಅಥವಾ ದೊಡ್ಡ ಗಾತ್ರದಲ್ಲಿ ಇರಬಹುದು.
ಬಾಯಿ ಹುಣ್ಣು ಏಕೆ ಆಗುತ್ತದೆ?
ಪಿತ್ತ ಪ್ರಕೃತಿಯ ವ್ಯಕ್ತಿಗಳಲ್ಲಿ ಇದು ಆಗುವುದು ಸಾಮಾನ್ಯ. ಜಾಸ್ತಿ ಪಿತ್ತವನ್ನು ಹೆಚ್ಚಿಸುವ ಆಹಾರ ಸೇವನೆ. ರೂಕ್ಷ, ಲಘು, ತೀಕ್ಷ್ಣ ಆಹಾರ ಸೇವನೆ. ಖಾರ ಆಹಾರ ಸೇವನೆ. ಕರಿದ ಪದಾರ್ಥದ ಅಧಿಕ ಸೇವನೆ. ನಿದ್ರಾ ಹೀನತೆ, ಮಾನಸಿಕ ಒತ್ತಡ, ತಿಂಗಳುಗಟ್ಟಲೆ ಟೂತ್ ಬ್ರಷ್ ಅನ್ನು ಬದಲಾಯಿಸದೆ ಇರುವುದು ಕೂಡ ಒಂದು ಕಾರಣ. ದೀರ್ಘಕಾಲದ ಮಲಬದ್ಧತೆ, ಫಂಗಲ್ ಇನ್ಫೆಕ್ಷನ್, ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು. ಆಂಟಿ ಬಯೋಟಿಕ್ಗಳ ಅಧಿಕ ಸೇವನೆ ಕೂಡ ಕಾರಣವಾಗಬಹುದು.

ಬಾಯಿ ಹುಣ್ಣಿನ ಲಕ್ಷಣಗಳು-
ಬಾಯಿ ಹುಣ್ಣು ಆಗಿದ್ದ ಜಾಗದಲ್ಲಿ ನೋವು ಹಾಗು ಉರಿಯುವುದು. ಬಾಯಿರುಚಿ ಇಲ್ಲದಿರುವುದು. ಆಹಾರ ಸೇವನೆಯಲ್ಲಿ ಕಷ್ಟವಾಗುವುದು. ನುಂಗಲು ಕಷ್ಟವಾಗುವುದು. ಕೆಲವರಿಗೆ ತಲೆನೋವು ಕೂಡ ಕಾಣಿಸಬಹುದು.
ಚಿಕಿತ್ಸಾಕ್ರಮ –
ಕಾರಣಗಳನ್ನು ದೂರ ಮಾಡುವುದು ಮುಖ್ಯ. ಇದನ್ನು ನಿಧಾನ ಪರಿವರ್ಜನೆ ಎಂದು ಆಯುರ್ವೇದದಲ್ಲಿ ಹೇಳಿದೆ. ಇನ್ಫೆಕ್ಷನ್ ಇದ್ದಲ್ಲಿ ಅದರ ಚಿಕಿತ್ಸೆ ನೀಡುವುದು. ರೋಗ ನಿರೋಧಕ ಶಕ್ತಿ ಕಮ್ಮಿ ಇದ್ದಲ್ಲಿ ಅದನ್ನು ಹೆಚ್ಚಿಸುವುದು. ಮೊದಲು ಕಾರಣವನ್ನು ತಿಳಿಯಬೇಕು ನಂತರ ಅದಕ್ಕೆ ಬೇಕಾದ ಚಿಕಿತ್ಸೆ ವೈದ್ಯರು ನೀಡುತ್ತಾರೆ. ಆಯುರ್ವೇದದಲ್ಲಿ ಶೀತಲ ದ್ರವ್ಯಗಳ ಉಪಯೋಗವನ್ನು ಮಾಡುತ್ತಾರೆ. ಗಂಡೂಷ ಔಷಧ ದ್ರವ್ಯಗಳನ್ನು ಉಪಯೋಗಿಸಿ ಬಾಯಿ ಮುಕ್ಕಳಿಸುವುದು.
ಸಾಮಾನ್ಯ ಬಾಯಿ ಹುಣ್ಣಿಗೆ ಮನೆಮದ್ದು–
ತುಪ್ಪ ಅಥವಾ ತೆಂಗಿನೆಣ್ಣೆಯನ್ನು ಸವರುವುದರಿಂದ ಶೀಘ್ರವಾಗಿ ಗುಣವಾಗುವುದು. ತಣ್ಣಗಿರುವ ಹಾಲಿನ ಸೇವನೆ ಮಾಡಿ . ಮಧುರ ಆಹಾರ ಅಂದರೆ ಸಿಹಿ ಆಹಾರದ ಸೇವನೆ ಮಾಡಿ. ಬಿಸಿ ,ಖಾರ ಆಹಾರ ಸೇವನೆ ಬೇಡ. ಒಂದು ಚಮಚ ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿಗೆ ಹಾಕಿ ನೆನೆಸಿಡಿ . ಮರುದಿನ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಿರಿ ಇದು ಪಿತ್ತವನ್ನು ಕಡಿಮೆ ಮಾಡುತ್ತದೆ. 10 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದನ್ನು ಸೇವಿಸಿ. ದಿನಾಲು ಎಳೆ ನೀರನ್ನು ಸೇವಿಸಿ. ಕುಡಿಯುವ ನೀರಿನಲ್ಲಿ ಲಾವಂಚ ಬೇರನ್ನು ಹಾಕಿಡಿರಿ ಈ ನೀರನ್ನು ಕುಡಿಯಲು ಉಪಯೋಗಿಸಿ. ಬಸಳೆಸೊಪ್ಪಿನ ರಸವನ್ನು ಬಾಯಿಹುಣ್ಣಿಗೆ ಹಚ್ಚಿ.
ಆಯುರ್ವೇದ ಮದ್ದುಗಳು-
ಖದಿರಾದಿವಟಿ,ದ್ರಾಕ್ಷಾಸವ,ತ್ರಿಫಲಾಚೂರ್ಣ, ಚಂದನಾಸವ, ಉಶೀರಾಸವ ಮುಂತಾದವುಗಳು.
ಡಾ.ಹರ್ಷಾ ಕಾಮತ್
































































