ಜೇಸಿ ಗಣಪತಿ ಆಚಾರ್ಯ ಇನ್ನಿಲ್ಲ ಅನ್ನುವುದು ನಮಗೆಲ್ಲಾ ಆಘಾತಕಾರಿ ಸುದ್ದಿ

ಅಯ್ಯೋ ದೇವರೇ, ಈ ಸುದ್ದಿಯು ಸುಳ್ಳಾಗಿ ಹೋಗಲಿ ಎಂದು ಎಲ್ಲಾ ದೇವರಿಗೆ ಹರಕೆಯನ್ನು ಹೇಳಿತ್ತು ಮನಸು. ಆದರೆ ನಮ್ಮ ಮೊರೆಯು ಯಾವ ದೇವರಿಗೂ ಕೇಳಿಸದೆ ಹೋಯಿತು ಅನ್ನುವುದು ಸಮಾಜಕ್ಕಾದ ನಷ್ಟ. ಬೆಳ್ಮಣ್ಣು ಎಂಬ ಸುಗ್ರಾಮದ ಎಲ್ಲ ಸಂಘ ಸಂಸ್ಥೆಗಳಿಗೆ ಆದ ನಷ್ಟ ಅದು. ಆ ನಷ್ಟವನ್ನು ತುಂಬಿಕೊಡುವ ಇನ್ನೊಂದು ವ್ಯಕ್ತಿತ್ವವು ನಮ್ಮ ನಡುವೆ ಇಲ್ಲ ಅನ್ನೋದು ಶಾಶ್ವತವಾದ ನೋವಿನ ಸಂಗತಿ.

ನಮ್ಮ ಗೆಳೆತನಕ್ಕೆ ಕನಿಷ್ಠ ಪಕ್ಷ 30 ವರ್ಷ ಇತಿಹಾಸವು ಇದೆ. ಅದು ಅತ್ಯಂತ ಭಾವನಾತ್ಮಕವಾದ ಸಂಬಂಧ. ಅಂದಿನಿಂದ ನನ್ನ ಜೀವನದ ಪ್ರತೀಯೊಂದು ನಿರ್ಣಾಯಕ ತಿರುವಿನಲ್ಲಿ ನನ್ನ ಜೊತೆ ಗಣಪತಿ ಆಚಾರ್ಯ ಅವರು ಇದ್ದೇ ಇದ್ದರು. ನಮ್ಮಿಬ್ಬರ ಗೆಳೆತನಕ್ಕೆ ವೇದಿಕೆಯಾಗಿದ್ದು ಜೇಸಿಐ ಬೆಳ್ಮಣ್ ಸಂಸ್ಥೆ.

1998ರ ಇಸವಿಯಲ್ಲಿ ಜೇಸಿಐ ಬೆಳ್ಮಣ್ ಸಂಸ್ಥೆಯ ಘನ ಅಧ್ಯಕ್ಷರಾಗಿ ಅವರು ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಯ ಸಹಿತ ನಾಲ್ಕು ಪ್ರಶಸ್ತಿಗಳನ್ನು ಪಡೆದಿದ್ದರು. ಅಷ್ಟು ಪ್ರಶಸ್ತಿಗಳನ್ನು ಜೇಸಿಐ ಬೆಳ್ಮಣ್ ಯಾವತ್ತೂ ಪಡೆದಿದ್ದ ಉದಾಹರಣೆಯೇ ಇರಲಿಲ್ಲ. ಅದೇ ವರ್ಷದ ಕೊನೆಯಲ್ಲಿ ನಾನು ಜೇಸಿಐ ವಲಯ 15ರ ಅಧ್ಯಕ್ಷನಾಗಿ ಕಠಿಣ ಚುನಾವಣೆಯ ಮೂಲಕ ಆಯ್ಕೆ ಆಗುವಲ್ಲಿ ನನಗಿಂತ ಹೆಚ್ಚು ಆಸಕ್ತಿ ವಹಿಸಿದವರು ಗಣಪತಿ ಸರ್.

ಪ್ರಮಾಣ ಮಾಡಿ ನಾನು ಹೇಳುತ್ತೇನೆ – ಗಣಪತಿ ಸರ್ ಅವರು ಇಲ್ಲಾಂದ್ರೆ ನಾನು 1999ರ ಜೇಸಿಐ ವಲಯಾಧ್ಯಕ್ಷನ ಹುದ್ದೆಯನ್ನು ಏರುತ್ತಲೇ ಇರಲಿಲ್ಲ! ಇನ್ನೊಬ್ಬರ ಯಶಸ್ಸನ್ನು ತನ್ನದೆಂದು ಸಂಭ್ರಮಿಸುವ ಅವರ ಗುಣವು ಎಲ್ಲರಿಗೂ ಮಾದರಿ.

ಮುಂದಿನ ಎರಡು ವರ್ಷ ಅವರು ವಲಯ 15ರ ಆಡಳಿತ ಮಂಡಳಿಯ ಅಧಿಕಾರಿ ಹುದ್ದೆಗಳನ್ನು ಅಧಿಕಾರಯುತವಾಗಿ ಮುನ್ನಡೆಸಿದರು. ಒಳ್ಳೆಯ ವಿಕಸನದ ತರಬೇತುದಾರರು ಕೂಡ ಆದರು. ಅವರಿಗೆ ಆಡಳಿತದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಮುಂದೆ ಬಂದ ಹಲವು ವಲಯದ ನಾಯಕರಿಗೆ ಸಮರ್ಥವಾದ ಮಾರ್ಗದರ್ಶಕರಾಗಿ ನಿಂತರು. ತನಗೆ ಇರುವ ಜ್ಞಾನವನ್ನು ಸ್ವಾರ್ಥವಿಲ್ಲದೆ ಹಂಚುವುದು ಅವರ ದೊಡ್ಡ ಗುಣ.

ಆ ದಿನಗಳಲ್ಲಿ ಅವರ ದಿನಚರಿ ಹೇಗಿತ್ತು ಅಂದರೆ ನಿಮಗೆ ಅಚ್ಚರಿಯೇ ಆಗಬಹುದು. ಸಂಜೆ ಆರರಿಂದ ಮರುದಿನ ಬೆಳಿಗ್ಗೆ ಆರರವರೆಗೆ ಅವರದು ಮಂಗಳೂರಿನ ರೈಲ್ವೇ ಮೇಲ್ ಸರ್ವೀಸನಲ್ಲಿ ಅಧಿಕಾರಿಯಾಗಿ ನಿದ್ದೆಯೇ ಇಲ್ಲದೆ ದುಡಿಮೆ. ಬೆಳಿಗ್ಗೆ ಮನೆಗೆ ಬಂದು ಉಪಾಹಾರವನ್ನು ಮಾಡಿ ಅವರು ಕಲಿತಿದ್ದ ಬೆಳ್ಮಣ್ಣು ಜ್ಯೂನಿಯರ್ ಕಾಲೇಜಿಗೆ ಹೋಗಿ ಉಚಿತ ಅಕೌಂಟೆನ್ಸಿಯ ತರಗತಿ ಮಾಡುತ್ತಿದ್ದರು. ಮಧ್ಯಾಹ್ನದ ನಂತರ ನಮ್ಮ ಟ್ರೈನಿಂಗ್ ಸೆಂಟರನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಅಕೌಂಟೆನ್ಸಿಯ ಟ್ಯೂಷನ್. ಸಂಜೆ ಹೊತ್ತು ಪುನಃ ಮಂಗಳೂರು ಬಸ್ ಹತ್ತಿ ಪೋಸ್ಟಲ್ ಇಲಾಖೆಯ ಕೆಲಸಕ್ಕೆ ಹೊರಟೇ ಬಿಡುವುದು!

ಹಾಗಾದರೆ ಗಣಪತಿ ಸರ್ ಮಲಗುತ್ತಿದ್ದದ್ದು ಯಾವಾಗ?

ಅವರಿಗೆ ದೊರಕುತ್ತಿದ್ದ ಸಣ್ಣ ಬಿಡುವುನಲ್ಲಿಯೂ ಜೇಸಿಐ ಸಂಸ್ಥೆಯ ದುಡಿಮೆ, ಬೆಳ್ಮಣ್ ಸ್ಪೋರ್ಟ್ಸ್ ಕ್ಲಬ್ ಎಂಬ ಮಹಾಸಂಸ್ಥೆಯ ಕೆಲಸ, ಕೆದಿಂಜೆಯ ಶಿಲ್ಪಶ್ರೀ ಸಭಾಂಗಣದ ಉಸ್ತುವಾರಿ, ಅಲ್ಲಿಯ ವಿಶ್ವ ಬ್ರಾಹ್ಮಣ ಸಂಘಟನೆಯ ಎಲ್ಲ ಕಾರ್ಯಕ್ರಮಗಳ ಸಂಘಟನೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡುವ ಜೇಸಿಐ ಚೇರಿಟೆಬಲ್ ಟ್ರಸ್ಟನ ಅಧ್ಯಕ್ಷತೆ, ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಪೂರ್ವ ವಿದ್ಯಾರ್ಥಿಗಳ ಸಂಘದ ನಿರಂತರ ಚಟುವಟಿಕೆಗಳು, ಎಲ್ಲಿ ಕ್ರೀಡಾಕೂಟ, ಕ್ರಿಕೆಟ್ ಕೂಟಗಳು ನಡೆದರೂ ಇಡೀ ದಿನ ಕಾಮೆಂಟರಿ ಹೇಳುವ ಉತ್ಸಾಹ, ದೊಡ್ಡ ದೊಡ್ಡ ವೇದಿಕೆಯ ಕಾರ್ಯಕ್ರಮಗಳ ನಿರೂಪಣೆ, ನಂದಳಿಕೆ ಶಾಲೆಯ ಮೆಗಾ ಶತಮಾನೋತ್ಸವದ ಕಾರ್ಯಕ್ರಮದ ಹೊಣೆ, ಊರಿನ ಮಹೋತ್ಸವಗಳ ಹಿಂದೆ ದಣಿವು ಇರದೆ ಕೆಲಸ ಮಾಡುತ್ತ ಹೋಗುವುದು, ಮಹಾ ಸಮ್ಮೇಳನಗಳ ಆಯೋಜನೆ, ಯಾರು ಕರೆದರೂ ಇಗೋ ಇಲ್ಲದೆ ಹೋಗಿ ತರಬೇತಿ, ಭಾಷಣ ಇತ್ಯಾದಿ ಮಾಡಿ ಬರುವುದು, ಮಾನಪತ್ರ ಬರೆದು ಕೊಡುವುದು……..ಇವೆಲ್ಲವೂ ನಮ್ಮ ಗಣಪತಿ ಸರ್ ಅವರನ್ನು ತುಂಬಾನೇ ದಣಿಸಿದ್ದವು. ಅವರಿಗೆ ವೈಯಕ್ತಿಕ ಬದುಕು ಇರಲೇ ಇಲ್ಲ.

ಆರ್ಥಿಕವಾಗಿ ಹಿಂದುಳಿದ ಮಕ್ಕಳ ಮನೆಗಳಿಗೆ ಹೋಗಿ ಆ ವಿದ್ಯಾರ್ಥಿ ವೇತನ, ಈ ವಿದ್ಯಾರ್ಥಿ ವೇತನ ಎಂದು ಅರ್ಜಿ ತುಂಬಿಸಿ ಮಾರ್ಗದರ್ಶನ ಮಾಡುವುದು ಅವರಿಗೆ ತುಂಬಾ ಖುಷಿ ಕೊಡುವ ಕೆಲಸ. ಎಲ್ಲಿಯೂ ಪ್ರಚಾರದ ಉದ್ದೇಶವೇ ಇರಲಿಲ್ಲ. ಬಾಲ್ಯದಿಂದ ಬಡತನದಲ್ಲಿ ಬೆಳೆದು ಬಂದಿದ್ದ ನಮ್ಮ ಸರ್ ಅವರಿಗೆ ಬೇರೆಯವರ ಕಷ್ಟಗಳು ಬೇಗ ಅರ್ಥ ಆಗುತ್ತಿದ್ದವು ಮತ್ತು ಅವರು ಅಂತವರ ಸಹಾಯಕ್ಕೆ ಹಿಂದೆ ಮುಂದೆ ನೋಡದೆ ಧಾವಿಸುತ್ತಿದ್ದರು.

ವಿಶೇಷವಾಗಿ ಕಾರ್ಯಕ್ರಮ ನಿರೂಪಣೆಯ ಬಗ್ಗೆ ಅವರಿಗೆ ಇದ್ದ ಜ್ಞಾನ ತುಂಬ ಅದ್ಭುತವಾದದ್ದು. ಪ್ರೋಟೋಕಾಲ್ ಬಗ್ಗೆ ಅವರಿಗೆ ಸರಿಯಾಗಿ ಗೊತ್ತಿತ್ತು. ಅಜೆಂಡಾ, ಬ್ಯಾನರ್, ಸ್ಟೇಜ್ ಎಲ್ಲವನ್ನೂ ಅವರು ಸರಿಯಾಗಿ ತಿಳಿದಿದ್ದರು. ಯಾರನ್ನೂ ಖುಷಿ ಪಡಿಸುವ ದರ್ದು ಅವರಿಗೆ ಇರಲಿಲ್ಲ. ಎಳೆಯರಿಗೆ ಮಾರ್ಗದರ್ಶನ ಮಾಡಲು ಸದಾ ಸಿದ್ಧವಾಗಿ ನಮ್ಮ ಸರ್ ಇರುತ್ತಿದ್ದರು. ತಪ್ಪುಗಳನ್ನು ನೇರವಾಗಿ ಹೇಳುವ ಗಟ್ಸ್ ಅವರಿಗೆ ಕೊನೆಯವರೆಗೆ ಇತ್ತು. ಹಾಗೆಯೇ ಅವರ ಯಾವ ತಪ್ಪುಗಳನ್ನು ಶರ್ತವಿಲ್ಲದೆ ಒಪ್ಪಿಕೊಳ್ಳುವ ಗುಣ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿತು.

ಇತ್ತೀಚೆಗೆ ಜೇಸಿಐ ಬೆಳ್ಮಣ್ ಸಂಸ್ಥೆಯ ಚೆರಿಟೆಬಲ್ ಟ್ರಸ್ಟಿನ ಅಧ್ಯಕ್ಷರಾಗಿ ಅವರು ಆಯ್ಕೆ ಆಗಿದ್ದರು. ಅದನ್ನು ಹಾಗೆ ಬೆಳೆಸಬೇಕು ಸರ್, ಹೀಗೆ ಬೆಳೆಸಬೇಕು ಸರ್…ಪ್ರತೀ ಬಾರಿ ಭೇಟಿ ಆದಾಗಲೂ ಅದೇ ಮಾತು.

ಅವರ ಇಬ್ಬರು ಮಕ್ಕಳು ಗೌತಮ್ ಮತ್ತು ವಿನುತಾ ನನ್ನ ವಿದ್ಯಾರ್ಥಿಗಳು. ಅವರು ನನ್ನನ್ನು ಅವರ ಅಪ್ಪನ ಹಾಗೆ ಪ್ರೀತಿಸಿದವರು. ಪ್ರತೀ ಬಾರಿ ಮನೆಗೆ ಹೋದಾಗ ಅವರ ಪತ್ನಿ ಶರಾವತಿ ಅಕ್ಕ ಹೇಳುತ್ತಿದ್ದ ಮಾತು – ಅವರು ನಮ್ಮ ಮಾತು ಕೇಳುವುದೇ ಇಲ್ಲ. ನೀವಾದರೂ ಬುದ್ದಿ ಹೇಳಿ!

ಇಂತಹ ವಿಷಯದಲ್ಲಿ ಗಣಪತಿ ಸರ್ ನನ್ನ ಮಾತನ್ನೂ ಕೇಳುತ್ತಿರಲಿಲ್ಲ! ನಾನೇನು ಹೇಳಿದರೂ ಆಯ್ತು ಸರ್ ಎಂದು ಗಟ್ಟಿಯಾಗಿ ನಗು ಮಾತ್ರ ಅವರ ಉತ್ತರ.

ಮನೆಯವರು ಅವರ ಆರೋಗ್ಯದ ಬಗ್ಗೆ ನಿರಂತರವಾಗಿಯೆ ಪ್ರೀತಿಯ ಎಚ್ಚರಿಕೆಯನ್ನು ನೀಡಿದ್ದರೂ ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ದುಡಿಯುವ ಉತ್ಸಾಹವು ಅವರದ್ದು. ವಿಶ್ರಾಂತಿ ಎಂಬುದು ಅವರಿಗೆ ದೊರೆಯಲೆ ಇಲ್ಲ! ಕಠಿಣ ದುಡಿಮೆಯ ನಡುವೆ ಅವರ ಜೀವವು ಒಳಗಿಂದ ಒಳಗೆ ದಣಿಯಿತು. ಇತ್ತೀಚೆಗೆ ಅವರಿಗೆ ಒಂದು ಬೈಕ್ ಅಪಘಾತ ಆಗಿ ಒಂದಷ್ಟು ಜರ್ಜರಿತ ಆಗಿದ್ದರು ನಮ್ಮ ಗಣಪತಿ ಸರ್. ಮೊನ್ನೆ ಮೊನ್ನೆ ಅವರ ಮನೆಗೆ ಹೋಗಿ ಒಂದೂವರೆ ಗಂಟೆ ಕೂತು ಮಾತಾಡಿದಾಗಲೂ ಅವರು ಹೇಳಿದ್ದು ಅದೇ ಮಾತು – ಸರ್, ತುಂಬಾ ಕೆಲಸ ಬಾಕಿ ಇದೆ. ಬೇಗ ಬೇಗ ಮಾಡಿ ಮುಗಿಸಬೇಕು!

ನಾನು ಹೇಳಿದ್ದೆ – ಸರ್, ನೀವು ಮಾಡಲೇ ಬೇಕಾದ ಮೊದಲ ಕೆಲಸ ವಿಶ್ರಾಂತಿ ಪಡೆಯುವುದು ಮತ್ತು ಕುಟುಂಬಕ್ಕೆ ಹೆಚ್ಚು ಸಮಯ ಕೊಡುವುದು ಅಂದಿದ್ದೆ! ಅದಕ್ಕೆ ಗಣಪತಿ ಸರ್ ಅವರ ಮುಗ್ಧ ನಗು ಮಾತ್ರ ಉತ್ತರವಾಗಿತ್ತು.

ಗಣಪತಿ ಸರ್ ಅಂದರೆ ಅದು ಅವಿಶ್ರಾಂತವಾದ ದುಡಿಮೆ. ಎಂದೂ ಬತ್ತದ ಉತ್ಸಾಹದ ಚಿಲುಮೆ. ಎಳೆಯರಿಗೆ ಪ್ರೇರಣೆ ನೀಡುವ ಸ್ಫೂರ್ತಿ ಸೆಲೆ. ಸದಾ ಕಾಡುವ ಮಗುವಿನ ಮುಗ್ಧತೆ. ಬೇಗ ಕನೆಕ್ಟ್ ಆಗುವ ಗೆಳೆತನ. ನೆವರ್ ಕಾಂಪ್ರೋಮೈಸಿಂಗ್ ಪರ್ಸನಾಲಿಟಿ. ತನಗೆ ಸರಿ ಎಂದು ಅನ್ನಿಸಿದನ್ನು ಮಾಡಿಯೇ ಬಿಡುವ ಹಠ. ತನ್ನ ಜೊತೆಗೆ ಇರುವವರ ಬಗ್ಗೆ ತೀವ್ರ ಕಾಳಜಿ. ಗಣಪತಿ ಸರ್ ಈ ಎಲ್ಲವೂ ವಿಶೇಷಣಗಳನ್ನು ಮೀರಿಯೇ ಬದುಕಿದರು.

ತನಗೆ ಸ್ವಲ್ಪ, ಸಮಾಜಕ್ಕೆ ಬಹಳಷ್ಟು ಅನ್ನೋದು ನಮ್ಮ ಸರ್ ಬದುಕಿ ತೋರಿಸಿದ ರೀತಿ. ಅವರ ಪ್ರೀತಿಯ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ ಅನ್ನುವುದು ನನ್ನ ಪ್ರಾರ್ಥನೆ.

ಒಟ್ಟಿನಲ್ಲಿ ಗಣಪತಿ ಸರ್ ಅಂದರೆ ನನ್ನ ಆತ್ಮ! ನಿನ್ನೆಯಿಂದ ನನ್ನ ಮನಸ್ಸು ಖಾಲಿ ಖಾಲಿ ಅನ್ನಿಸ್ತಿದೆ. ಏನೂ ಬೇಡ ಅನ್ನಿಸಿ ಬಿಟ್ಟಿದೆ. ನಮ್ಮ ಗಣಪತಿ ಸರ್ ಅವರು ಸ್ವರ್ಗದಲ್ಲಾದರೂ ವಿಶ್ರಾಂತಿ ಪಡೆಯಲಿ ಅನ್ನುವುದು ಭರತ ವಾಕ್ಯ.

✒️ ರಾಜೇಂದ್ರ ಭಟ್ ಕೆ.

































































































error: Content is protected !!
Scroll to Top