ಅಂಬರ ಶೋಭಿತ ಆಕಾಶ…

ಒಂದು ಮನೋಜ್ಞ ಕಥೆ

ತನ್ನ ಮನೆಯ ಬಾಲ್ಕನಿಯಿಂದ ದೂರದ ದಿಗಂತ ನೋಡುತ್ತಾ ಬಿಸಿ ಬಿಸಿ ಕಾಫಿ ಹೀರುತ್ತಿದ್ದವಳಿಗೆ, ಅಲ್ಲೇ ಗೂಡಿನಲ್ಲಿದ್ದ ಸೋನು, ‘ನೀನು ಗಲೀಜು ಹುಡುಗಿ’ ಎಂದು ಬಿರುದು ಕೊಟ್ಟಾಗ, ನಗಬೇಕೋ ಅಳಬೇಕೋ ತಿಳಿಯಲಿಲ್ಲ. ನಿನ್ನೆ ಸ್ನಾನ ಮಾಡಲು ಸತಾಯಿಸುತ್ತಿದ್ದ ಸೋನುವಿಗೆ ‘ಗಲೀಜು ಹುಡುಗಿ’ ಅಂದದ್ದನ್ನು ನೆನಪಿನಲ್ಲಿ ಇಟ್ಟುಕೊಂಡು ಅದನ್ನೇ ಪುನರಾವರ್ತನೆ ಮಾಡಿತ್ತು. ಆದರೆ ಅದರ ನಿಜವಾದ ಅರ್ಥ ಆ ಪುಟ್ಟ ಪಕ್ಷಿಗೆ ಎಷ್ಟು ಗೊತ್ತಿರಬಹುದು ಎಂದು ಯೋಚಿಸತೊಡಗಿದಳು. ಒಂಟಿತನ ಅತಿಯಾಗಿ ಕಾಡಿದಾಗ ಜತೆಯಾದದ್ದೇ ಈ ‘ಸೋನು’ ಅನ್ನುವ ಮುದ್ದು ಗಿಳಿ. ಅವಳು ಏನೇ ಹೇಳಿದರೂ ಅದನ್ನು ಎರಡು ದಿನ ನೆನಪಿನಲ್ಲಿಟ್ಟುಕೊಂಡು ಸರಿಯಾದ ಸಂದರ್ಭದಲ್ಲಿ ಅದನ್ನು ಅವಳಿಗೆ ತಿರುಗಿಸಿ ಹೇಳುತ್ತಿತ್ತು. ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ದುಡಿಯುತ್ತಿದ್ದ ಅವಳ ವೃತ್ತಿ ಬದುಕಿನಲ್ಲಿ ತೋರಿಸಬೇಕಾದ ಕೃತಕ ನಗುವನ್ನು, ಕೊಂಚವಾದರೂ ಸಹಜತೆಯತ್ತ ಮರಳಿಸಿದ್ದೇ ಈ ‘ಸೋನು’. ಆದರೀಗ ಅದೂ ಕೂಡಾ ತನ್ನನ್ನು ‘ಗಲೀಜು’ ಹುಡುಗಿ ಅಂದದ್ದು ಅವನಿಯ ಮನಸ್ಸಿಗೆ ನಿಧಾನವಾಗಿ ತಟ್ಟಿತ್ತು. ಆಧುನಿಕತೆಯ ಈ ಸೋಗಲಾಡಿತನದ ಮಧ್ಯೆ, ಅವನಿ ಎನ್ನುವ ಹಳ್ಳಿಯ ಮುಗ್ಧ ಹುಡುಗಿ, ಗಲೀಜು ಹುಡುಗಿಯಾಗಿ, ತನಗರಿವಿಲ್ಲದಂತೆಯೇ ಬದಲಾಗಿದ್ದಳು.
ಆರು ವರ್ಷಗಳ ಬಳಿಕ ತನ್ನವರನ್ನು ಕಾಣಲು ಹುಟ್ಟೂರಿಗೆ ಹೋಗಿದ್ದಾಗಲೂ ಅಣ್ಣ ಪರೋಕ್ಷವಾಗಿ ಇದೇ ಮಾತನ್ನು ಹೇಳಿದ್ದ. ಅವನಿ, ನಿನ್ನ ಬದುಕನ್ನು ಮೂರಾಬಟ್ಟೆ ಮಾಡಿಕೊಳ್ಳುತ್ತಿದ್ದೀಯಾ. ಇನ್ನಾದರೂ ಅರ್ಥ ಮಾಡಿಕೊಂಡು ಮದುವೆಯಾಗು ಅಂದಿದ್ದ.
‘ಮದುವೆ’ ಅನ್ನುವ ಶಬ್ದ ಕಿವಿಗೆ ಬಿದ್ದಾಗಲೆಲ್ಲಾ ಗಂಡು ಜಾತಿಯ ಬಗ್ಗೆ ಅವಳಿಗೆ ತಿರಸ್ಕಾರ ಹುಟ್ಟುತ್ತದೆ. ತನಗಾದ ನೋವು, ವಂಚನೆ ಶೂಲದಂತೆ ಇರಿಯುತ್ತದೆ. ಕಾಲೇಜು ಬದುಕಿನ ಸುಂದರ ಕ್ಷಣಗಳನ್ನು ಆ ಕೆಟ್ಟ ಹುಳುವಿಗೋಸ್ಕರ ತೆತ್ತುಬಿಟ್ಟೆನಲ್ಲಾ ಅನ್ನುವುದು ನೆನಪಾಗುತ್ತದೆ.
ಅವನಿ, ನಾವೆಲ್ಲಾ ಇವತ್ತು ಸಿನಿಮಾಗೆ ಹೋಗುತ್ತೇವೆ. ನೀನು ಬರುತ್ತೀಯಾ? ಅಂತ ಪ್ರಾಣ ಸ್ನೇಹಿತೆ ಪ್ರತಿಭಾ ಕೇಳಿದರೆ, ಬೇಡ ಪ್ರತಿ, ನಾನು ಹಾಗೆಲ್ಲಾ ತಿರುಗಾಡುವುದು ಅವನಿಗೆ ಇಷ್ಟವಾಗಲಿಕ್ಕಿಲ್ಲ ಎಂದಿದ್ದಳು. ಅವನಿ ಇವತ್ತು ಸೆಂಡ್‌ಆಫ್ ಕಣೇ. ಮುಖಕ್ಕಾದರೂ ಸ್ವಲ್ಪ ಕ್ರೀಂ ಬಳಿದುಕೋ ಅಂತ ಅವಳು ಹೇಳಿದರೆ, ಬೇಡ ಪ್ರತಿ ನಾನು ಸರಳವಾಗಿರೋದು ಅವನಿಗಿಷ್ಟ ಅಂದಿದ್ದಳು. ಡಿಗ್ರಿ ಮುಗಿದ ತಕ್ಷಣ ಮನೆಯಲ್ಲಿ ಮದುವೆಯ ಮಾತುಕತೆ ಆರಂಭಗೊಂಡಾಗ, ಇದರಿಂದ ತಪ್ಪಿಸಲೋಸುಗ, ಸಣ್ಣ ಆಫೀಸ್ ಒಂದರಲ್ಲಿ ಟೈಪಿಸ್ಟ್ ಕೆಲಸ ಗಿಟ್ಟಿಸಿಕೊಂಡಿದ್ದಳು.
ಆಫೀಸಿಗೆ ಬಂದಿದ್ದ ಸಹಪಾಠಿಯೊಬ್ಬಳು, ಮೊನ್ನೆ ನಿನ್ನ ವಿನೀತ್‌ನನ್ನು ಹುಡುಗಿಯೊಬ್ಬಳ ಜತೆ ಫಿಲಂ ಥಿಯೇಟರ್ನಲ್ಲಿ ನೋಡಿದೆ ಎಂದಾಗ, ಇವಳಿಗೆ ಬರಸಿಡಿಲು ಬಡಿದಂತಾಯಿತು. ಹುಡುಗರನ್ನು ಲೆಕ್ಕಕ್ಕಿಂತ ಜಾಸ್ತಿ ನಂಬಬೇಡ ಎಂದು ಪ್ರತಿಭಾ ಹೇಳುತ್ತಿದ್ದದ್ದು ನೆನಪಾಯಿತು. ಏನಾದರಾಗಲಿ ಮುಂದಿನ ಸಲ ಸಿಕ್ಕಾಗ ವಿನೀತ್‌ನಲ್ಲಿ ಮದುವೆಯ ಬಗ್ಗೆ ಕೇಳಿಬಿಡಬೇಕು. ತನಗೂ ಇಪ್ಪತ್ತನಾಲ್ಕು ವರ್ಷ ದಾಟುತ್ತಿದೆ ಅಂದುಕೊಡಳು. ನಾಳೆ ಸೋಮೇಶ್ವರ ಬೀಚಿಗೆ ಹೋಗೋಣ ಅಂತ ವಿನೀತ್ ಫೋನಾಯಿಸಿದಾಗ, ಇದೇ ಸರಿಯಾದ ಅವಕಾಶ ಅಂದುಕೊಂಡಳು.
ನೋಡು ಅವನಿ, ನಿನಗೆ ನನ್ನ ಅವಶ್ಯಕತೆ ಇತ್ತು. ನನಗೂ ನಿನ್ನ ಸಾಮಿಪ್ಯ ಬೇಕಿತ್ತು. ನಮ್ಮಿಬ್ಬರದು ರೆಸಿಪ್ರೋಕಲ್ ರಿಲೇಶನ್‍ಶಿಪ್. ಮದುವೆ ಅನ್ನುವ ಬಂಧನದಲ್ಲಿ ನನಗೆ ನಂಬಿಕೆ ಇಲ್ಲ ಅಂತ ಖಡಾಖಂಡಿತವಾಗಿ ಅವನು ಹೇಳಿದಾಗ, ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಿಬಿಡಬಾರದೇ ಎನ್ನುವಷ್ಟು ಅವಳು ಕುಸಿದುಹೋದಳು.
ತನ್ನ ಬದುಕನ್ನು ಅಂತ್ಯಗೊಳಿಸಬೇಕು ಅಂದುಕೊಂಡವಳಿಗೆ, ಛಲದಿಂದ ಜೀವಿಸಬೇಕು ಅನ್ನುವ ಭಂಡ ಧೈರ್ಯ ಯಾವಾಗ ಹುಟ್ಟಿಕೊಂಡಿತೋ?
ನಿಧಾನವಾಗಿ ತನ್ನನ್ನು ತಾನು ಪ್ರೀತಿಸಲು ಆರಂಭಗೊಂಡ ಬದುಕಿನ ಬದಲಾವಣೆ, ಲಿಪ್‌ಸ್ಟಿಕ್, ಮೇಕಪ್‍ಕಿ ಟ್‍ಗಳಿಂದ ಆರಂಭವಾಗಿ, ಬಿಯರ್, ಜಿನ್‍ಗಳನ್ನೂ ಮೀರಿ ಬೆಳೆಯುತ್ತಿತ್ತು. ಬದುಕು ಬಲು ಭಾರ ಅಂದುಕೊಳ್ಳುತ್ತಿದ್ದವಳಿಗೆ ಈಗೀಗ ಮತ್ತೆ ಕಾಲೇಜು ದಿನಗಳ ಮುಗ್ಧ ಪ್ರಪಂಚಕ್ಕೆ ಮರಳುವ ಮನಸ್ಸಾಗುತ್ತಿದೆ. ಯಾವಾಗಲೂ ಹೂ ನಗೆ ಬೀರುತ್ತದ್ದ ಪಕ್ಕದ ಫ್ಲಾಟ್‍ನ ಮುದ್ದು ಹುಡುಗ, ಕಣ್ಣೊಳಗಿಳಿದು ಹೃದಯಕ್ಕೆ ಹತ್ತಿರವಾಗುತ್ತಿದ್ದಾನೆ. ಕೋವಿಡ್ ಸೋಂಕು ತಗಲಿ ಒಂಟಿಯಾಗಿ ತನ್ನ ಫ್ಲಾಟಿನಲ್ಲಿ ಬಿದ್ದುಕೊಂಡಿದ್ದಾಗ ಬಹಳ ಆಸ್ಥೆಯಿಂದ ಗಂಜಿ ಬೇಯಿಸಿ ತಂದು ಕೊಟ್ಟಿದ್ದ. ಆವಾಗ ಆರಂಭಗೊಂಡ ಆತ್ಮೀಯತೆ ಹಂತ ಹಂತವಾಗಿ ಅವಳನ್ನು ಬದಲಾಯಿಸಿತ್ತು. ತನ್ನ ಬದುಕಿನ ಪ್ರತಿ ಪುಟಗಳನ್ನೂ ಅವನ ಮುಂದೆ ತೆರೆದಿಟ್ಟು, ಇಂತಹವಳನ್ನು ಮದುವೆಯಾಗಬಲ್ಲೆಯಾ ಅಂತ ಅವನಲ್ಲಿ ಕೇಳಬೇಕು ಅಂದುಕೊಂಡಳು.
ರಘು ಬಹಳ ಚುರುಕು ಬುದ್ಧಿಯ ಹುಡುಗ. ಇವಳು ಏನನ್ನೂ ಬಾಯಿ ಬಿಟ್ಟು ಹೇಳದಿದ್ದರೂ, ಇವಳ ಬದುಕನ್ನು ಅರ್ಥಯಿಸಿಕೊಂಡಿದ್ದ. ಅಂದೊಂದು ದಿನ ಪಾರ್ಟಿಯೊಂದರಲ್ಲಿ ಕುಡಿದದ್ದು ಜಾಸ್ತಿಯಾಗಿ ಸಹೋದ್ಯೋಗಿಯೊಬ್ಬನ ತೆಕ್ಕೆಯಲ್ಲಿ ಓಲಾಡುತ್ತಾ ಬಂದವಳನ್ನು ಮರಳಿ ಗೂಡಿಗೆ ಸೇರಿಸಿ ಅವಳು ಮತ್ತೆ ಸಹಜ ಸ್ಥಿತಿಗೆ ಬರುವವರೆಗೆ ತನ್ನ ಲ್ಯಾಪ್‌ಟಾಪ್‌ನೊಂದಿಗೆ ಅವಳ ಪಕ್ಕದಲ್ಲೇ ಕುಳಿತಿದ್ದ. ರಘು ತಪ್ಪಾಯಿತು ಕ್ಷಮಿಸಿಬಿಡಿ. ನಾನು ನಿಜವಾಗಿಯೂ ಅಂತವಳಲ್ಲ ಅನ್ನುತ್ತಾ ತನ್ನ ದೃಷ್ಟಿಯನ್ನು ಗೋಡೆಯಲ್ಲಿ ನೇತುಹಾಕಿದ್ದ ತನ್ನ ಮುಗ್ಧ ಮುಖದ ಕಾಲೇಜು ಫೋಟೋದ ಕಡೆಗೆ ನೆಟ್ಟಿದ್ದಳು.
ಪ್ರಪಂಚದಲ್ಲಿ ಎಲ್ಲರೂ ಕೆಟ್ಟವರಲ್ಲ. ಪರಿಸ್ಥಿತಿಗಳು ಮನುಷ್ಯನನ್ನು ಬದಲಾಯಿಸುತ್ತವೆ. ನೀವು ಕೂಡಾ ಬದಲಾಗುತ್ತೀರಿ ಎಂಬ ನಂಬಿಕೆ ಇದೆ. ಆ ಪುಟ್ಟ ಪಕ್ಷಿಯ ಮೇಲೆ ನೀವು ತೋರುವ ಕಾಳಜಿ ನಿಮ್ಮ ಒಳ್ಳೆಯ ಮನಸ್ಸಿಗೆ ಸಾಕ್ಷಿ. ಇವನು ತನ್ನನ್ನು ಎಷ್ಟೆಲ್ಲಾ ಗಮನಿಸುತ್ತಿದ್ದಾನಲ್ಲಾ ಅನ್ನಿಸಿಬಿಟ್ಟಿತ್ತು ಅವಳಿಗೆ. ಆ ಘಟನೆ ನಡೆದ ನಂತರ ಅವಳು ನಿಜವಾಗಲೂ ಬದಲಾಗಿದ್ದಳು. ದೇವಸ್ಥಾನದ ಕಡೆ ತಿರುಗಿಯೂ ನೋಡದಿದ್ದವಳು ಯುಗಾದಿಯ ದಿನ ಸೀರೆಯುಟ್ಟು, ಗುಡಿಗೆ ಪ್ರದಕ್ಷಿಣೆ ಬಂದಿದ್ದಳು. ಮನೆಯಲ್ಲಿ ಸಿಹಿ ತಿಂಡಿ ಮಾಡಿ ರಘುವಿಗೂ ಕಳಿಸಿಕೊಟ್ಟಿದ್ದಳು.
ಸಹೋದ್ಯೋಗಿಗಳು ಕರೆಯುವ ಪಾರ್ಟಿಯಿಂದ ಆದಷ್ಟು ದೂರವಿದ್ದು ಬೇಗನೇ ಮನೆ ಸೇರುತ್ತಿದ್ದಳು. ಸೋನುವಿಗೆ ಜತೆಯಾಗಲೆಂದು ಇನ್ನೊಂದು ಗಿಳಿ ಹಾಗೂ ಪರ್ಷಿಯನ್ ಬೆಕ್ಕು ಅವಳ ಕುಟುಂಬ ಸೇರಿತ್ತು.
ದೂರದ ದಿಗಂತದಲ್ಲಿ ವಿಮಾನವೊಂದು ಹಾರುತ್ತಿದ್ದದ್ದನ್ನು ನೋಡುತ್ತಿದ್ದವಳು ಕಾಲಿಂಗ್ ಬೆಲ್ ಸದ್ದಿಗೆ ಗಡಬಡಿಸಿ ಬಾಗಿಲಿನ ಬಳಿ ಓಡಿದಳು. ಪಕ್ಕದ ಫ್ಲಾಟ್‍ನ ಹೂನಗೆಯ ಹುಡುಗ ನಿಂತಿದ್ದ.
ಮೇಡಂ, ನನ್ನ ಅಪ್ಪ ಅಮ್ಮ ಊರಿನಿಂದ ಬಂದಿದ್ದಾರೆ. ನಿಮ್ಮನ್ನು ನೋಡಬೇಕು ಅಂದರು. ಕರೆದುಕೊಂಡು ಬರಬಹುದೇ ಅಂದ. ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದೇನೆ. ಆದರೆ ನನ್ನ ಬಗ್ಗೆ ಹೇಳಲು ಅವಕಾಶವಾಗಿಲ್ಲ. ನಾನು ಒಬ್ಬ ಡಿವೋರ್ಸಿ. ನನ್ನನ್ನು ಕಟ್ಟಿಕೊಂಡವಳು ಆರು ತಿಂಗಳು ಕಳೆಯುವುದರ ಒಳಗೆ ನನ್ನ ಸಹೋದ್ಯೋಗಿಯೊಂದಿಗೆ ಸ್ಟೇಟ್ಸ್ ಗೆ ಹಾರಿಬಿಟ್ಟಳು.
ಈಗ ನನಗೆ ಬೇಕಿರುವುದು ನನ್ನ ಅಪ್ಪ ಅಮ್ಮನನ್ನು ಹಾಗೂ ನನ್ನನ್ನು ಅರ್ಥ ಮಾಡಿಕೊಳ್ಳಬಲ್ಲ ಹೆಣ್ಣು ಹೃದಯ. ಅದು ನಿಮಗಿದೆಯೆಂದು ನನಗೆ ಚೆನ್ನಾಗಿ ಗೊತ್ತು. ಬದುಕಲ್ಲಿ ನಾವಿಬ್ಬರೂ ನೋವು ತಿಂದವರೇ. ಆದರೆ ಜೀವನಕ್ಕೆ ಎಲ್ಲಿ ಕೊನೆ ಎಂದು ತಿಳಿದುಕೊಳ್ಳುತ್ತೇವೋ, ಅಲ್ಲೇ ಅದರ ಆರಂಭವೂ ಇದೆ. ನಮ್ಮಿಬ್ಬರ ನೋವು ಇಲ್ಲಿಗೆ ಪರ್ಯಾವಸಾನವಾಗುವುದೆಂದು ಭಾವಿಸಿದ್ದೇನೆ. ನಮ್ಮ ನಡುವೆ ಎಲ್ಲವೂ ಸರಿ ಇರದೇ ಹೋದರೂ ನೆಮ್ಮದಿಯಾಗಿ ಬದುಕುವ ಪ್ರಯತ್ನ ನಾವೇ ಮಾಡಬೇಕಾಗಿದೆ.ಏನನ್ನುತ್ತೀರಾ?
ಅಂಬರ ಶೋಭಿತ ಆಕಾಶ ಅವಳಿಗೆ ನಿಚ್ಚಳವಾಗಿ ಗೋಚರಿಸುತ್ತಿತ್ತು. ಗೂಡಿನಲ್ಲಿದ್ದ ಸೋನು ಸ್ನಾನವಾಯಿತು. ಈಗ ನೀನು ಒಳ್ಳೆ ಹುಡುಗಿ… ಒಳ್ಳೇ ಹುಡುಗಿ…ಎಂದು
ಮುಗ್ದವಾಗಿ ಹೇಳುತ್ತಲೇ ಇತ್ತು.
ಜ್ಯೋತಿ ಪದ್ಮನಾಭ ಭಂಡಿ





























































































































































































































error: Content is protected !!
Scroll to Top