ಕಾರ್ಕಳ ಯಕ್ಷರಂಗಾಯಣ ನಿರ್ದೇಶಕ ಸ್ಥಾನ ನೇಮಕಾತಿ ರದ್ದು

ಮೂರು ವರ್ಷ ಅವಧಿ ಇದ್ದರೂ ಒಂದೇ ವರ್ಷಕ್ಕೆ ಮೊಟಕು

ಕಾರ್ಕಳ : ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ಮೊದಲ ಅಧಿವೇಶನದ ದಿನವೇ ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಅಕಾಡೆಮಿ, ರಂಗಾಯಣ ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಜೀವನ್‌ ರಾಂ ಸುಳ್ಯ ಅವರೂ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಾರ್ಕಳದಲ್ಲಿ ಯಕ್ಷರಂಗಾಯಣ ಸ್ಥಾಪನೆಯಾಗಿದ್ದು 2022 ಎ. 8ರಂದು ಹಿರಿಯ ರಂಗಕರ್ಮಿ ಜೀವನ್‌ ರಾಂ ಸುಳ್ಯ ಅವರು ಅಧಿಕಾರ ವಹಿಸಿದ್ದರು. ಅಕಾಡೆಮಿ ಅ‍ಧ್ಯಕ್ಷರ ಅವಧಿ 3 ವರ್ಷಗಳಾಗಿದ್ದರೂ ಸರಕಾರ ಬದಲಾದ ಹಿನ್ನೆಲೆಯಲ್ಲಿ ಇದೀಗ ಅಕಾಡೆಮಿ ಅಧ್ಯಕ್ಷರ ನೇಮಕಾತಿಯನ್ನು ರದ್ದುಪಡಿಸಲಾಗಿದೆ.
ಯಕ್ಷರಂಗಾಯಣ ನಿರ್ದೇಶಕರಾಗಿ ಜೀವನ್‌ ರಾಂ ಸುಳ್ಯ ಅವರು ಯಕ್ಷರಂಗಾಯಣದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದರು. ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಅವರು ಪರಶುರಾಮ, ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837 ನಾಟಕಗಳನ್ನು ನಿರ್ದೇಶಿಸಿದರು. ಕಾರ್ಕಳ-ಹೆಬ್ರಿ ಭಾಗದ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಿದ್ದರು. ಚಿಣ್ಣರ ಮೇಳ ಆಯೋಜನೆ ಮೂಲಕ ಎಳವೆಯಿಂದಲೇ ಮಕ್ಕಳು ಪ್ರತಿಭಾವಂತರಾಗಿ ಬೆಳೆಯುವಂತೆ ಮಾಡಿದ್ದರು. ಹಲವಾರು ಸೃಜನಾತ್ಮಕ ಯೋಜನೆಗಳಿಗೆ ಅಡಿಪಾಯ ಹಾಕಿದ್ದ ಜೀವನ್‌ ರಾಂ ಸುಳ್ಯ ಅವರನ್ನು ಅವಧಿ ಪೂರ್ಣವೇ ಸರಕಾರ ನೇಮಕಾತಿ ರದ್ದುಪಡಿಸಿರುವುದರಿಂದ ಕಾರ್ಕಳದ ಸಾಂಸ್ಕೃತಿಕ ಲೋಕಕ್ಕೆ ಆದ ಭಾರಿ ಹಿನ್ನಡೆಯೆಂದೇ ಹೇಳಲಾಗುತ್ತಿದೆ. ಕಾರ್ಕಳದ ಹಲವಾರು ಕಲಾವಿದರಿಗೆ ಇದು ಬೇಸರದ ಸಂಗತಿಯಾಗಿರುವುದಂತು ಸತ್ಯ.



































































































error: Content is protected !!
Scroll to Top