ಬಿಸಿಲ ಧಗೆಗಿಂತಲೂ ಬಿರುಸಾಗಿದೆ ಪ್ರಚಾರದ ಬಗೆ

ಕಾರ್ಕಳದಲ್ಲಿ ನಡೆಯುತ್ತಿದೆ ತೀವ್ರ ಪೈಪೋಟಿಯ ಪ್ರಚಾರ

ವರದಿ : ನಳಿನಿ ಎಸ್. ಸುವರ್ಣ

ಕಾರ್ಕಳ : ಚುನಾವಣೆಗೆ ಇನ್ನೇನು 17 ದಿನ ಮಾತ್ರ ಉಳಿದಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡು ನಾಮಪತ್ರ ಪ್ರಕ್ರಿಯೆ ಮುಗಿದ ಬೆನ್ನಿಗೆ ಚುನಾವಣಾ ಪ್ರಚಾರ ಚುರುಕು ಪಡೆದುಕೊಂಡಿದೆ. ಬಹಿರಂಗ ಸಭೆಗಳು, ಸಮಾವೇಶ ಇತ್ಯಾದಿ ಸಾಂಪ್ರದಾಯಿಕ ವಿಧಾನಗಳಿಗೆ ಬದಲಾಗಿ ಮತದಾರರ ನೇರ ಭೇಟಿ ಮತ್ತು ಸಂಪರ್ಕಕ್ಕೆ ಅಭ್ಯರ್ಥಿಗಳು ಮತ್ತು ಪಕ್ಷಗಳು ಈ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಿವೆ. ಇದಕ್ಕಾಗಿ ಕಾರ್ಯಕರ್ತರ ಪಡೆಯನ್ನೇ ಸಜ್ಜುಗೊಳಿಸಿ ಅವರಿಗೆ ಟಾರ್ಗೆಟ್‌ ನೀಡಲಾಗಿದೆ. ಕಾರ್ಯಕರ್ತರು ಪಾಳಿಗಳಲ್ಲಿ ಮನೆ ಮನೆಗೆ ಭೇಟಿ ಕೊಟ್ಟು ಕಾರ್ಯಕರ್ತರ ಮನವೊಲಿಸುವಲ್ಲಿ ಮಗ್ನರಾಗಿದ್ದಾರೆ.

ಜಾಲತಾಣದಲ್ಲಿ ಭರ್ಜರಿ ಪ್ರಚಾರ

ಈಗ ಜಾಲತಾಣವೇ ಪ್ರಚಾರದ ಪ್ರಮುಖ ವೇದಿಕೆ. ಮತದಾರನನ್ನು ನೇರವಾಗಿ ತಲುಪಲು ಇರುವ ಸುಲಭ ವಿಧಾನವು ಇದೇ. ಈ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳು ಜಾಲತಾಣಗಳ ಸಂವಹನ ಮಾಧ್ಯಮವಾದ ವಾಟ್ಸಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಇತ್ಯಾದಿಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಗಾಗಿ ಸಾವಿರಾರು ವಾಟ್ಸಪ್‌ ಗ್ರೂಪ್‌ ಮತ್ತು ಫೇಸ್‌ಬುಕ್‌ ಪೇಜ್‌ಗಳು ಸೃಷ್ಟಿಯಾಗಿವೆ. ಇದರ ನಿರ್ವಹಣೆಗಾಗಿಯೇ ಒಂದು ತಂಡವಿರುವುದು. ಪಕ್ಷದ ಸಾಧನೆ, ಅಭ್ಯರ್ಥಿಯ ಕಾರ್ಯದ ಬಗ್ಗೆ ಈ ಮುಖಾಂತರ ಪ್ರಚುರಪಡಿಸಲಾಗುತ್ತಿದೆ. ಅಂತೆಯೇ ಎದುರಾಳಿ ಅಭ್ಯರ್ಥಿ ಮತ್ತು ಪಕ್ಷದ ಟೀಕೆ, ಕಾಲೆಳೆಯಲು ಕೂಡ ಸಾಮಾಜಿಕ ಜಾಲತಾಣ ಸಮರ್ಥವಾಗಿ ಸದ್ಬಳಕೆಯೋ ದುರ್ಬಳಕೆಯೋ ಆಗುತ್ತಿದೆ.

ಫೋನ್‌ ಕರೆ

ಫೋನ್‌ ಮಾಡಿ ಮತದಾರರ ಮನವೊಲಿಸುವುದು ಇನ್ನೊಂದು ಪ್ರಚಾರ ವಿಧಾನ. ಇದಕ್ಕಾಗಿ ಅಭ್ಯರ್ಥಿಗಳು 15-20 ಜನರನ್ನು ನೇಮಿಸಿಕೊಂಡು ಅವರಲ್ಲಿ ದಿನಕ್ಕೆ ಇಂತಿಷ್ಟು ಮತದಾರರಿಗೆ ಕರೆ ಮಾಡುವಂತೆ ಪಕ್ಷದ ಪ್ರಮುಖರು ಸೂಚಿಸಿರುತ್ತಾರೆ.

ಕಾರ್ಕಳ ಹೆಬ್ರಿಯ ಎಲ್ಲೆಲ್ಲೂ ಇದೀಗ ಚುನಾವಣೆಯದ್ದೇ ಸುದ್ದಿ. ಯಾರು ಗೆಲ್ಲಲಿದ್ದಾರೆ. ಯಾರಿಗೆ ಯಾವುದು ಪ್ಲಸ್‌, ಮೈನಸ್‌ ಪಾಯಿಂಟ್‌ ಎಂಬ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಪ್ರಮುಖವಾಗಿ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಾರ್ಕಳದಲ್ಲಿ ಪೈಪೋಟಿಯಿದ್ದು, ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಭಾರತೀಯ ಜನತಾ ಪಾರ್ಟಿ

ಕಾರ್ಕಳದಲ್ಲಿ ಬಿಜೆಪಿಯಿಂದ 5ನೇ ಬಾರಿಗೆ ವಿ. ಸುನಿಲ್ ಕುಮಾರ್ ಸ್ಪರ್ಧಿಸುತ್ತಿದ್ದು, ಕಾರ್ಯಕರ್ತರು ಈ ಬಾರಿಯೂ ಹೊಸ ಹೊಸ ಯೋಜನೆಗಳೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಮುಖರ ಭೇಟಿ, ಕಾರ್ಯಕರ್ತರ ಸಭೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಸೇರಿದಂತೆ ದಿನವಿಡೀ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ಮನೆ ಭೇಟಿ ನೀಡುತ್ತಿದ್ದು, ದಿನಕ್ಕೆ ಸುಮಾರು 40 ಮನೆ ಭೇಟಿ ಮಾಡುತ್ತಾರೆ. ಸಾಮಾನ್ಯವಾಗಿ 5 ಮಂದಿ ಕಾರ್ಯಕರ್ತರನ್ನೊಳಗೊಂಡ ತಂಡ ಮನೆ ಭೇಟಿ ಮಾಡುತ್ತದೆ. ಪ್ರತಿ ಮನೆಯಲ್ಲೂ 10 ರಿಂದ 15 ನಿಮಿಷ ಮಾತುಕತೆ ನಡೆಸುತ್ತಾರೆ.

ಮೂರು ರೌಂಡ್ ಮನೆ ಭೇಟಿ

ಈಗಾಗಲೇ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ಸಲುವಾಗಿ ನಡೆದ ಕಾಯಕ್ರಮಕ್ಕೆ ಕ್ಷೇತ್ರದ ಜನತೆಯನ್ನು ಆಹ್ವಾನಿಸುವ ನಿಟ್ಟಿನಲ್ಲಿ 209 ಬೂತ್ ನಲ್ಲಿರುವ ಮನೆಗಳಿಗೆ ಭೇಟಿ ನೀಡಿದ್ದು, ಇನ್ನೂ ಮೂರು ಹಂತದಲ್ಲಿ ಮನೆ ಭೇಟಿ ನಡೆಯಲಿದೆ. ಈ ನಡುವೆ ಏಪ್ರಿಲ್ ತಿಂಗಳ ಕೊನೆಯಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಲಿದ್ದು, ಒಂದೇ ದಿನ ಎಲ್ಲಾ ಮನೆಯ ಭೇಟಿ ನಡೆಯಲಿದೆ.
ಮೇ 2 ರಿಂದ 4 ರವರೆಗೆ ಎರಡನೇ ಹಂತದ ಮತ್ತು ಮೇ 5 ರಿಂದ 7 ನೇ ಮೂರನೇ ಹಂತದಲ್ಲಿ ಮನೆ ಭೇಟಿ ನಡೆಯಲಿದೆ.

ಚುನಾವಣೆಯ ಕಾವು ರಣ ಬಿಸಿಲಿನಂತೆ ರಂಗೇರಿದೆ, ಬಿಸಿಲಿನಲ್ಲಿ ಮನೆ ಮನೆ ಪ್ರಚಾರ ಮಾಡುವುದು ಕ್ಲಿಷ್ಟಕರವಾದರೂ, ಕಾರ್ಯಕರ್ತರು ಬಹಳ ಉತ್ಸಾಹದಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗಿಗಳಾಗುತ್ತಿದ್ದಾರೆ.

  • ಸುಹಾಸ್ ಶೆಟ್ಟಿ ಮುಟ್ಲುಪಾಡಿ
    ಅಧ್ಯಕ್ಷರು – ತಾಲೂಕು ಯುವಮೋರ್ಚಾ

ಕಾಂಗ್ರೆಸ್

ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಕಾರ್ಯಕರ್ತರ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ವೇಗವನ್ನು ಪಡೆಯುತ್ತಿದೆ. ಬ್ಲಾಕ್ ಕಾಂಗ್ರೆಸ್ ನಿಯಮಾನುಸಾರವಾಗಿ ಪ್ರಚಾರ ಕಾರ್ಯ ನಡೆಯುತ್ತಿದ್ದು, ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆಯವರೆಗೆ ಬಿಡುವಿಲ್ಲದೆ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ಇಂತಿಷ್ಟು ಟಾರ್ಗೆಟ್ ಇದ್ದು, ಪ್ರತಿನಿತ್ಯ ಸುಮಾರು 50 ರಿಂದ 60 ಮನೆಗೆ ಭೇಟಿ ಮಾಡುತ್ತಾರೆ.

ಕೆಲವು ಕಾರ್ಯಕರ್ತರು ಮಧ್ಯಾಹ್ನದ ಊಟದ ಬಿಡುವನ್ನು ತೆಗೆದುಕೊಳ್ಳದೆ ಪ್ರಚಾರ ಕಾರ್ಯ ಮಾಡುತ್ತಿದ್ದು, ಸಂಜೆ 4 ಗಂಟೆಗೆ ತಮ್ಮ ಕೆಲಸ ಮುಗಿಸುತ್ತಾರೆ.

209 ಬೂತ್ ನಲ್ಲಿರುವ ಪ್ರತಿ ಮನೆಗೆ ಪಕ್ಷದ ಕೆಲಸ, ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರದ್ದಾಗಿದೆ. ನಮ್ಮ ನಾಯಕನ ಗೆಲುವಿಗಾಗಿ ಕಾರ್ಯಕರ್ತರು ಬಿರು ಬಿಸಿಲೆನ್ನೆದೆ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದು, ಪಕ್ಷದ ಗೆಲುವೇ ನಮ್ಮ ಉದ್ದೇಶ. ಕಾರ್ಯಕರ್ತರ ಉತ್ಸಾಹವೇ ವಿಜಯದ ದ್ಯೋತಕವಾಗಿದೆ.
–ಪ್ರದೀಪ್ ನಲ್ಲೂರು

ಜೆಡಿಎಸ್ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಕುಚ್ಚೂರು ಹೆಬ್ರಿ ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಮನೆ ಭೇಟಿ, ಪ್ರಜಾ ವಿಜಯ ಎಂಬ ಬಹಿರಂಗ ಚುನಾವಣಾ ಪ್ರಚಾರ ಹಾಗೂ ವಾಹನದಲ್ಲಿ ಧ್ವನಿವರ್ಧನ ಅಳವಡಿಸಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಇನ್ನೊರ್ವ ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಕೂಡ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.

ಕಾರ್ಕಳದಲ್ಲಿ ಒಟ್ಟು 11 ಮಂದಿ ಚುನಾವಣಾ ಕಣದಲ್ಲಿದ್ದು, ಬಿಸಿಲಿನ ಧಗೆಯನ್ನು ಲೆಕ್ಕಿಸದೆ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದು, ಜನತೆಗೆ ತಮ್ಮ ಕೆಲಸ, ಯೋಚನೆ, ಯೋಜನೆ ಭರವಸೆಗಳನ್ನು ತಲುಪಿಸುತ್ತಿದ್ದಾರೆ.









































































































error: Content is protected !!
Scroll to Top