ಕಾರ್ಕಳದಲ್ಲೇ ಅತಿ ಹೆಚ್ಚು ಮಂದಿ ಚುನಾವಣಾ ಕಣದಲ್ಲಿ
ಕಾರ್ಕಳ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯು ಏ. 20ಕ್ಕೆ ಮುಕ್ತಾಯಗೊಂಡಿದ್ದು, ಶುಕ್ರವಾರ ನಡೆದಿರುವ ನಾಮಪತ್ರ ಪರಿಶೀಲನೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ 2 ಹಾಗೂ ಕುಂದಾಪುರದಲ್ಲಿ ಒಂದು ಸೇರಿದಂತೆ ಒಟ್ಟು 3 ನಾಮಪತ್ರ ತಿರಸ್ಕೃತವಾಗಿದೆ. ಅಂತಿಮವಾಗಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಿಂದ ಒಟ್ಟು 42 ಮಂದಿ ಅಭ್ಯರ್ಥಿಗಳು ಚುನಾವಣಾ ರಂಗಕ್ಕೆ ಪ್ರವೇಶಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮಂದಿ ಸ್ಪರ್ಧಿಸುತ್ತಿದ್ದು, ಒಟ್ಟು 11 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇವರಲ್ಲಿ 9 ಮಂದಿ ಪುರುಷರು ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳು. ಬಿಜೆಪಿಯಿಂದ ವಿ. ಸುನಿಲ್ ಕುಮಾರ್, ಕಾಂಗ್ರೆಸ್‌ನಿಂದ ಉದಯ್ ಶೆಟ್ಟಿ, ಆಮ್ ಆದ್ಮಿ ಪಾರ್ಟಿಯ ಡೇನಿಯಲ್ ಫೆಡ್ರಿಕ್ ರೇಂಜರ್, ಜನತಾದಳದ ಶ್ರೀಕಾಂತ ಪೂಜಾರಿ, ಉತ್ತಮ ಪ್ರಜಾಕೀಯ ಪಕ್ಷದಿಂದ ಅರುಣ್ ದೀಪಕ್ ಮೆಂಡೋನ್ಸಾ, ಪಕ್ಷೇತರರಾಗಿ ಕೃಷ್ಣ ಶೆಟ್ಟಿ, ಪ್ರಮೋದ್ ಮುತಾಲಿಕ್, ಡಾ. ಮಮತಾ ಹೆಗ್ಡೆ, ವಿದ್ಯಾಲಕ್ಷ್ಮಿ, ಸುಧಾಕರ ಆಚಾರ್ಯ ಮತ್ತು ಹರೀಶ್ ಅಧಿಕಾರಿ ಸ್ಪರ್ಧೆ ನಡಸುತ್ತಿದ್ದಾರೆ. ಒಟ್ಟು 13 ಮಂದಿ ನಾಮಪತ್ರ ಸಲ್ಲಿಸಿದ್ದು, ಇವರಲ್ಲಿ ರಿಪಬ್ಲಿಕನ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದ ಉದಯ್ ಎಂ. ಮತ್ತು ಆಮ್ ಆದ್ಮಿ ಪಾರ್ಟಿಯ ದಯಾನಂದ ಶೆಟ್ಟಿ (ಸಬ್‌ಟ್ಯೂಟ್ ಕ್ಯಾಂಡಿಡೇಟ್)ಯವರ ನಾಮಪತ್ರ ತಿರಸ್ಕೃತವಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 8 ಪುರಷುರು ಮತ್ತು ಓರ್ವ ಮಹಿಳೆ ಸೇರಿದಂತೆ ಒಟ್ಟು 9 ಮಂದಿ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಜನತಾದಳದಿಂದ ದಕ್ಷತ್ ಆರ್. ಶೆಟ್ಟಿ, ಆಮ್ ಆದ್ಮಿ ಪಕ್ಷದಿಂದ ಪ್ರಭಾಕರ್ ಪೂಜಾರಿ, ಕಾಂಗ್ರೆಸ್‌ನ ಪ್ರಸಾದ್ ರಾಜ್ ಕಾಂಚನ್, ಬಿಜೆಪಿಯ ಯಶ್‌ಪಾಲ್ ಸುವರ್ಣ, ಉತ್ತಮ ಪ್ರಜಾಕೀಯ ಪಕ್ಷದ ನಿತಿನ್ ವಿ. ಪೂಜಾರಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಮ್ ದಾಸ್ ಭಟ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಶೇಖರ್ ಹಾವಂಜೆ ಮತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ಕೃಷ್ಣಮೂರ್ತಿ ಆಚಾರ್ಯ ಹಾಗೂ ದೀನಾ ಪ್ರಭಾಕರ್ ಸ್ಪರ್ಧಿಸುತ್ತಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಿಂದ 7 ಮಂದಿ ಸ್ಪರ್ಧೆಯಲ್ಲಿದ್ದು, ಇವರಲ್ಲಿ ಓರ್ವ ಮಹಿಳೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಗುರ್ಮೆ ಸುರೇಶ್ ಶೆಟ್ಟಿ, ಕಾಂಗ್ರೆಸ್‌ನ ವಿನಯ್ ಕುಮಾರ್ ಸೊರಕೆ, ಜನತಾದಳದ ಸಬಿನಾ ಸಮದ್, ಆಮ್ ಆದ್ಮಿ ಪಕ್ಷದಿಂದ ಸ್ಟೇಫನ್ ರಿಚರ್ಡ್ ಲೋಬೋ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಮಹಮ್ಮದ್ ಹನೀಫ್ ಸ್ಪರ್ಧಿಸುತ್ತಿದ್ದು, ಪಕ್ಷೇತರರಾಗಿ ಅಬ್ದುಲ್ ರಜಾಕ್ ಶಾಬನ್ ಅಹ್ಮದ್ ಮತ್ತು ಅಬ್ದುಲ್ ರಹಿಮಾನ್ ಸ್ಪರ್ಧೆ ನಡೆಸುತ್ತಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ, ಆಮ್ ಆದ್ಮಿ ಪಕ್ಷದ ಜಯರಾಜ್, ಕಾಂಗ್ರೆಸ್‌ನ ದಿನೇಶ್, ಜನತಾದಳದಿಂದ ರಮೇಶ್, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ ಮತ್ತು ಪಕ್ಷೇತರರಾಗಿ ಚಂದ್ರ ಹರಿಜನ ಸ್ಪರ್ಧಿಸುತ್ತಿದ್ದಾರೆ.
ಬೈಂದೂರು ಕ್ಷೇತ್ರದಲ್ಲಿ ಒಟ್ಟು 9 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಬಿಜೆಪಿಯ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಾಂಗ್ರೆಸ್‌ನಿಂದ ಕೆ. ಗೋಪಾಲ ಪೂಜಾರಿ, ಜನತಾದಳದ ಮನ್ಸೂರ್ ಇಬ್ರಾಹಿಂ, ಆಮ್ ಆದ್ಮಿ ಪಕ್ಷದ ರಮನಂದ ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್ ಎಸ್., ರಾಷ್ಟ್ರೀಯ ಸಮಾಜ ದಳದ ಕೊಲ್ಲೂರು ಮಂಜುನಾಥ್ ನಾಯಕ್ ಹಾಗೂ ಪಕ್ಷೇತರರಾಗಿ ಚಂದ್ರ ಹರಿಜನ, ಶ್ಯಾಮ ಬಿ. ಮತ್ತು ಹೆಚ್. ಸುರೇಶ್ ಪೂಜಾರಿ ಸ್ಪರ್ಧಿಸುತ್ತಿದ್ದಾರೆ.





















