ಯಕ್ಷ ರಂಗಾಯಣ ಚಿಣ್ಣರ ಮೇಳ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ

ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಎ. 22ರಿಂದ 30ರ ವರೆಗೆ ನಡೆಯುವ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಚಿಣ್ಣರ ಮೇಳದ ಉದ್ಘಾಟನಾ ಸಮಾರಂಭವು ಶನಿವಾರ ಜರುಗಿತು. ಮಕ್ಕಳಿಂದ ವಿವಿಧ ಸಂಗೀತ ಪರಿಕರಗಳನ್ನು ನುಡಿಸುವ ಮೂಲಕ ಶಿಬಿರಕ್ಕೆ ವಿನೂತನವಾಗಿ ಚಾಲನೆ ನೀಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ, ಪೋಷಕರ ಸಹಕಾರ, ಜನತೆಯ ಪ್ರೋತ್ಸಾಹದಿಂದ ಕಳೆದ ಬಾರಿ ನಡೆಸಿದ ಚಿಣ್ಣರ ಮೇಳ ಯಶಸ್ವಿಯಾಗಿ ನಡೆದಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನೋಂದಾವಣೆ ಮಾಡಿಕೊಂಡಿದ್ದು ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಈ ಶಿಬಿರ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದರು.

7 ರಿಂದ 15 ವರ್ಷದೊಳಗಿನ ಒಟ್ಟು 440 ಮಕ್ಕಳು ನೋಂದಾವಣೆ ಮಾಡಿಕೊಂಡಿದ್ದು, ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಹಾಕಿರುವ ನಾಲ್ಕು ವೇದಿಕೆಗಳಲ್ಲಿ ರಾಜ್ಯದ ಪ್ರತಿಭಾನ್ವಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕಲಾಪ್ರಕಾರದ ಚಟುವಟಿಕೆಗಳು ನಡೆಯಲಿವೆ. ರಂಗಾಭಿನಯ, ರಂಗಗೀತೆ, ಮಾತುಗಾರಿಕೆ, ಚಿತ್ರಕಲೆ, ಕೊಲಾಜ್, ಕ್ಲೇ ಮಾಡಲಿಂಗ್, ಮುಖವರ್ಣಿಕೆ, ಚಲನಚಿತ್ರ ಪ್ರದರ್ಶನ, ಪಕ್ಷಿಲೋಕ, ರಂಗದಾಟಗಳು, ಕಥಾಭಿನಯ, ಅಭಿನಯ ಗೀತೆ, ಕತೆ ಕಟ್ಟುವ ರೀತಿ, ಗುಂಪು ಚಟುವಟಿಕೆಗಳು, ಮುಖವಾಡ ತಯಾರಿ, ಕ್ರಾಫ್ಟ್, ನಾಟಕ ತಯಾರಿ ಮತ್ತು ಪ್ರದರ್ಶನ ಅಲ್ಲದೆ ಮಕ್ಕಳ ಬದುಕಿಗೆ ಬೇಕಾದ ಮೌಲ್ಯಯುತ ವಿಚಾರಗಳು ಸೇರಿದಂತೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಹತ್ತಾರು ವಿಷಯಗಳನ್ನು ತರಬೇತಿ ನೀಡಲಾಗುತ್ತದೆ. ಶಿಬಿರವು ಎ. 30 ರಂದು ಮಕ್ಕಳ ಪ್ರತಿಭಾ ಪ್ರದರ್ಶದೊಂದಿಗೆ ಸಮಾಪನಗೊಳ್ಳಲಿದೆ.

ಕಾರ್ಯುಕ್ರಮದಲ್ಲಿ ಯಕ್ಷರಂಗಾಯಣದ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಶಿಬಿರದ, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಹೆಗ್ಗೊಟಾರ ಮೈಸೂರು, ಸಂಗೀತ ಭಿಡೆ ಧರ್ಮಸ್ಥಳ, ಜನಾರ್ಧನ ಹಾವಂಜೆ, ಅಕ್ಷಯ್ ಪಲಿಮಾರ್, ಹರೀಶ್ ಅರಸೀಕೆರೆ, ಚಂದ್ರನಾಥ ಬಜಗೋಳಿ, ಶಿವಗಿರಿ ಕಲ್ಲಡ್ಕ, ಶ್ರೀಮತಿ ದಿವ್ಯಾ ಅರ್ಜುನ್ ಕಾರ್ಕಳ, ಝುಬೇರ್ ಖಾನ್ ಕುಡ್ಲ, ಸೂರ್ಯ ಪುರೋಹಿತ್ ಕಾರ್ಕಳ, ತಾರಾನಾಥ ಕೈರಂಗಳ, ಸುಶ್ಮಿತಾ ಮೋಹನ್, ಸಂತೋಷ್ ಮಾಳ, ಶ್ರೀಮತಿ ಶ್ರೇಷ್ಠ ಕಾರ್ಕಳ , ಭಾಸ್ಕರ ನೆಲ್ಯಾಡಿ, ಭಾವನಾ ಕೆರೆಮಠ, ವಿ.ಕೆ. ವಿಟ್ಲ, ಉಜ್ವಲ್ ಮಂಗಳೂರು, ಭುವನ್ ಮಣಿಪಾಲ, ಜೋಶಿತ್ ಶೆಟ್ಟಿ ಬಳಗ ಮುಂತಾದವರು ಉಪಸ್ಥಿತರಿದ್ದರು. ವಸಂತ್‌ ಎಂ. ಕಾರ್ಯಕ್ರಮ ನಿರೂಪಿಸಿದರು. ಸುಶಾಂತ್‌ ಬಜಗೋಳಿ ವಂದಿಸಿದರು.

















































error: Content is protected !!
Scroll to Top