ಹೆಬ್ರಿ : ಆಧುನಿಕ ಯುಗದಲ್ಲೂ ಕೃಷಿಯ ಮೂಲಕ ಜೀವನವನ್ನು ನಡೆಸಬಹುದು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿ, ಕೃಷಿಗೆ ಕಾರ್ಪೋರೇಟ್ ಟಚ್ ನೀಡಿ ಮುನಿಯಾಲಿನ ಮಣ್ಣನ್ನು ಗೋಧಾಮದ ಮೂಲಕ ಪಾವನಗೊಳಿಸಿದಂತಹ ವಿಭಿನ್ನ ಯೋಚನೆ ಯೋಜನೆಯ ಸಾಧಕ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಅವರ ಕಾರ್ಯವೈಖರಿ ಸಮಾಜಕ್ಕೆ ಮಾದರಿ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಅವರು ಏ. 16 ರಂದು ಮುನಿಯಾಲಿನಲ್ಲಿರುವ ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿ ಗೋಧಾಮದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇಶಕ್ಕೆ ಬಹುದೊಡ್ಡ ಕೊಡುಗೆ
ಭಾರತೀಯ ಗೋತಳಿಗಳ ಸಂರಕ್ಷಣೆಯನ್ನು ಮಾಡುವ ಮೂಲಕ ಮುನಿಯಾಲು ಗೋಧಾಮ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಹಾಸನ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ವೈಕುಂಠದಂತೆ ಗೋಲೋಕ ನಿರ್ಮಾಣ
ಗೋವುಗಳ ಪೋಷಣೆಯ ಮೂಲಕ ಧರ್ಮವನ್ನು ಉಳಿಸುವ ಪುಣ್ಯದ ಕಾರ್ಯದೊಂದಿಗೆ ಮುನಿಯಾಲಿನ ಗೋಧಾಮಕ್ಕೆ ಆಧುನಿಕ ಟಚ್ ನೀಡುವ ಮೂಲಕ ರಾಮಕೃಷ್ಣ ಆಚಾರ್ ವೈಕುಂಠದಂತೆ ಗೋಲೋಕವನ್ನೇ ನಿರ್ಮಾಣ ಮಾಡಿದ್ದಾರೆ ಎಂದು ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಮುನಿಯಾಲಿನ ಸಂಜೀವಿನಿ ಫಾರ್ಮ್ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಮಾತನಾಡಿ, ಯುವ ಪೀಳಿಗೆಯನ್ನು ನಗರ ಜೀವನದಿಂದ ಕೃಷಿ ಜೀವನದತ್ತ ಆಕರ್ಷಿಸಿ ಪುರಾತನ ಗೋತಳಿಗಳ ಸಂರಕ್ಷಣೆಯ ಜೊತೆಗೆ ಗೋಧಾಮವನ್ನು ಕೃಷಿ ಪ್ರವಾಸೋಧ್ಯಮ ಕೇಂದ್ರವಾಗಿ ಬೆಳೆಸುವುದು ನಮ್ಮ ಉದ್ದೇಶ ಎಂದರು.
ಮೂಡುಬಿದಿರೆ ಬಾಲಾಜಿ ಉದ್ಯಮ ಸಮೂಹದ ಅಧ್ಯಕ್ಷ ವಿಶ್ವನಾಥ ಪ್ರಭು, ಡೈರಿ ಗೋಧಾಮದ ಕಾರ್ಯದರ್ಶಿ ಸವಿತಾ ರಾಮಕೃಷ್ಣ ಆಚಾರ್, ವಿವಿಧ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭ ನಾಗಬನದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮ ನಡೆಯಿತು. ಪುರೋಹಿತ್ ದಾಮೋಧರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.
ವಿಶ್ವದರ್ಜೆಯಲ್ಲಿ ಕ್ರಾಂತಿ ಮೂಡಿಸಿದ ಮುನಿಯಾಲು ಗೋಧಾಮ : ಡಾ. ಚಂದ್ರಶೇಖರ ಕಂಬಾರ
ಗೋಧಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡು ಕ್ರಾಂತಿಕಾರಕ ರೀತಿಯಲ್ಲಿ ಮುನಿಯಾಲಿನ ಕೃಷಿ ಕ್ಷೇತ್ರವನ್ನು ಆಧುನಿಕವಾಗಿ ಮಾರ್ಪಾಡಿಸಿ ವಿಶ್ವದರ್ಜೆಯಲ್ಲಿ ಗೋಧಾಮವನ್ನು ನಿರ್ಮಾಣ ಮಾಡಿದಂತಹ ರಾಮಕೃಷ್ಣ ಆಚಾರ್ ಓರ್ವ ಅದ್ಭುತ ಸಾಧಕ ಎಂದು ಡಾ. ಚಂದ್ರಶೇಖರ ಕಂಬಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಜೀವನದ ಜಂಜಾಟದ ನಡುವೆ ಜಾನುವಾರುಗಳ ಮೇಲೆ ಮರೆಯಾಗುತ್ತಿರುವ ಪ್ರೀತಿಯನ್ನು ಗೋಧಾಮ ಮತ್ತೆ ಜಗತ್ತಿಗೆ ತೋರಿಸಿಕೊಟ್ಟಿದೆ. ವಿವಿಧ ತಳಿಯ ಗೋವುಗಳ ಪೋಷಣೆಯೊಂದಿಗೆ ರಾಮಕೃಷ್ಣ ಆಚಾರ್ ದೇಶದ ಸಂಸ್ಕೃತಿ ಉಳಿವಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಅಭಿನಂದಿಸಿದರು.


























