ಗೆಲುವು ಸಾಧಿಸುವ ನಿಟ್ಟಿನಲ್ಲಿ ವಿರಮಿಸದೆ ಕಾರ್ಯನಿರ್ವಹಿಸೋಣ : ಉದಯ ಕುಮಾರ್ ಶೆಟ್ಟಿ
ಕಾರ್ಕಳ : ಚುನಾವಣೆಗೆ ಕೇವಲ ಇನ್ನು 25 ದಿನಗಳು ಉಳಿದಿದೆ. ಕಾರ್ಕಳದ ಭವಿಷ್ಯ ನಿರ್ಧರಿಸುವ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ವಿರಮಿಸದೇ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಎ. 17ರಂದು ತಾಲೂಕು ಕಚೇರಿ ಬಳಿ ತನ್ನ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದರು. ಜನ ಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿ ಕಾರ್ಯಕರ್ತರೆಲ್ಲರೂ ಕಾರ್ಯನಿರ್ವಹಿಸೋಣ. ಮೂರು ದಿನಗಳಲ್ಲಿ ಕಾರ್ಕಳದ 209 ಬೂತ್‌ಗಳಿಗೆ ತೆರಳಿ ಕಾರ್ಯಕರ್ತರು ಪ್ರಚಾರ ಕಾರ್ಯ ನಡೆಸಬೇಕಿದೆ. ಪಕ್ಷದ ಪ್ರಣಾಳಿಕೆ ಕುರಿತು ಜನತೆಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.
140 ಸ್ಥಾನ ಗೆಲ್ಲುವುದು ಖಚಿತ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನ ಗೆಲ್ಲುವುದು ಖಚಿತ. ಅದರಲ್ಲಿ ಕಾರ್ಕಳವೂ ಒಂದಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಮ್ಮತದಿಂದ ಒಗ್ಗಟ್ಟಿನಿಂದ ದುಡಿಯಬೇಕು. ಗೆದ್ದರೆ ಆದರ್ಶ ಶಾಸಕನಾಗಿ ಮುಂದಿನ 5 ವರ್ಷ ಕಾರ್ಕಳದಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ಮುನಿಯಾಲು ಮಾತು ನೀಡಿದರು.

ಆಡಂಬರ ಬೇಡ – ಶುದ್ಧ ಆಚರಣೆಯಿರಲಿ
ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ರೀತಿಯಾದ ಆಡಂಬರ ಬೇಡ. ಶುದ್ಧ ಆಚರಣೆ ನಮ್ಮದಾಗಲಿ. ಬಡಿದಾಟ, ಹೊಡೆದಾಟ, ಜಗಳಕ್ಕೆ ಹೋಗದೆ ಶುದ್ಧ ಮನಸ್ಸಿನಿಂದ ಕೆಲಸ ಮಾಡೋಣ. ವೀರಪ್ಪ ಮೊಯ್ಲಿಯವರು ಜಾರಿಗೆ ತಂದ ಸಿಇಟಿ ವ್ಯವಸ್ಥೆಯಂಥ ಒಳ್ಳೆಯ ಕೆಲಸಗಳನ್ನು ಜನರಿಗೆ ತಿಳಿಸೋಣ ಎಂದು ಹೇಳಿದ ಮುನಿಯಾಲು ಈ ಹಿಂದೆ ಗೋಪಾಲ ಭಂಡಾರಿಯವರ ಸ್ವಚ್ಛ ಆಡಳಿತದಿಂದಾಗಿ ದೇಶವೇ ಕಾರ್ಕಳದತ್ತ ನೋಡುವಂತೆ ಆಗಿತ್ತು ಎಂದು ಸ್ಮರಿಸಿದರು.
ಧರ್ಮ ಅಧರ್ಮದ ನಡುವಿನ ಹೋರಾಟ
ಎಲ್ಲ ದೇವರು, ದೈವಗಳ ಆಶೀರ್ವಾದ ನಮ್ಮ ಮೇಲಿದೆ. ಈ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟ. ಪಾಂಡವರಂತೆ ಧರ್ಮದ ಉಳಿವಿಗಾಗಿ ಹೋರಾಡೋಣ. ಕಾರ್ಕಳಕ್ಕೆ ಮೆಡಿಕಲ್ ಕಾಲೇಜು ತರುವ, 10 ಸಾವಿರ ಮಂದಿಗೆ ಉದ್ಯೋಗ ನೀಡುವ ಉದ್ಯಮ ಸ್ಥಾಪಿಸುವಂಥ ತನ್ನ ಜನಪರ ಯೋಜನೆಗಳನ್ನು ಅವರು ಈ ಸಂದರ್ಭದಲ್ಲಿ ಕಾರ್ಯಕರ್ತರ ಜತೆ ಹಂಚಿಕೊಂಡರು. ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇನೆ. ಗೆದ್ದರೆ ಈಡೇರಿಸಿ ತೋರಿಸುತ್ತೇನೆ ಎಂದು ಹೇಳಿದರು.
18ರಂದು ನಾಮಪತ್ರ ಸಲ್ಲಿಕೆ
ಎ. 18ರಂದು ನಾಮಪತ್ರ ಸಲ್ಲಿಸುತ್ತೇನೆ. ಎ. 20ರಂದು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದು ಮುನಿಯಾಲು ತಿಳಿಸಿದರು.
ಕಾರ್ಕಳ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ರಾಘವ ದೇವಾಡಿಗ, ಉಪಾಧ್ಯಕ್ಷ ಅವೆಲಿನ್ ಲೂಯಿಸ್, ಕೆಪಿಸಿಸಿ ಪ್ರಚಾರ ಸಮಿತಿಯ ತಾಲೂಕು ಸಂಯೋಜಕ ಸುಪ್ರೀತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಬಂಗೇರ, ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಫಕ್ ಅಹಮದ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಉದಯ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ ದಿಲೀಪ್ ಹೆಗ್ಡೆ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಂತಿ ಶೆಟ್ಟಿ, ಪಕ್ಷದ ಪ್ರಮುಖರಾದ ಡಾ. ಪ್ರೇಮದಾಸ್, ಸುಭೋದ್ ಶೆಟ್ಟಿ, ಸುರೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶೇಖರ್ ಮಡಿವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ವಕ್ತಾರ ಶುಭದ ರಾವ್ ಕಾರ್ಯಕ್ರಮ ನಿರ್ವಹಿಸಿದರು.

























