ಪಕ್ಷ ಸೇರ್ಪಡೆಯಾದ ಮರುಕ್ಷಣವೇ ಟಿಕೆಟ್ ನೀಡಿದ ಕಾಂಗ್ರೆಸ್ ನಾಯಕರು
ಬೆಂಗಳೂರು: ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಬಿ ಫಾರಂ ನೀಡಿದೆ. ಅಂದರೆ ಈ ಕ್ಷೇತ್ರದಿಂದ ಅವರು ಈ ಸಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಾತರಿಯಾಗಿದೆ. ಬಿಜೆಪಿ ಅವರ ವಿರುದ್ಧ ಯಾರನ್ನು ಕಣಕ್ಕಿಳಿಸುತ್ತಿದೆ ಎನ್ನುವ ಕುತೂಹಲವಿದೆ. ಬಿಜೆಪಿ ಜತೆಗಿನ ಮೂರು ದಶಕಗಳಿಗೂ ಅಧಿಕ ಕಾಲದ ನಂಟನ್ನು ಶೆಟ್ಟರ್ ಈ ಸಲ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಕಳೆದುಕೊಂಡಿದ್ದಾರೆ.
ಶೆಟ್ಟರ್ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಈ ಮೊದಲು ಅವರು ಕಾಂಗ್ರೆಸ್ಸನ್ನು ಟೀಕಿಸಿದ್ದ ವೀಡಿಯೊಗಳು ಹೊರಬರಲಾರಂಭಿಸಿವೆ. ಈ ನಟುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿ. ಟಿ. ರವಿ ಸಹಿತ ಹಲವು ನಾಯಕರು ಶೆಟ್ಟರ್ ನಡೆಯನ್ನು ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಳಸಿ ಬೀಸಾಡುವುದು ಕಾಂಗ್ರೆಸ್ ಸಂಸ್ಕೃತಿ, ಈಗ ಸನ್ಮಾನ ಮಾಡುತ್ತಾರೆ. ಚುನಾವಣೆ ನಂತರ ಅವಮಾನ ಮಾಡುತ್ತಾರೆ. ಅರಸು, ವೀರೇಂದ್ರ ಪಾಟೀಲ್ ಅವರಿಗೆ ಅಪಮಾನ ಮಾಡಿದೆ. ಎಲ್ಲ ಗೊತ್ತಿದ್ದು ಜಗದೀಶ್ ಶೆಟ್ಟರ್ ಯಾಕೆ ಕಾಂಗ್ರೆಸ್‌ಗೆ ಹೋದ್ರೊ ಗೊತ್ತಿಲ್ಲ ಎಂದರು.
ಚುನಾವಣೆ ವೇಳೆ ಕಾಂಗ್ರೆಸ್‌ಗೆ ಲಿಂಗಾಯಿತರ ಮೇಲೆ ಪ್ರೀತಿ ಬಂದಿದೆ ಎಂದು ವಾಗ್ದಾಳಿ ನಡೆಸಿದ ಸಿಎಂ, ಶೆಟ್ಟರ್ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಂಡಿದೆ. ಅವರನ್ನು ಕಡೆಗಣಿಸಿದೆ ಎಂಬ ಪ್ರಶ್ನೆಯೇ ಇಲ್ಲ. ಮತ್ತೆ ಶೆಟ್ಟರ್ ಬಿಜೆಪಿಗೆ ಬರುತ್ತಾರೆಂಬ ವಿಶ್ವಾಸವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶೆಟ್ಟರ್‌ಗೆ ಬಿಜೆಪಿ ಎಲ್ಲ ಸ್ಥಾನಮಾನ ನೀಡಿತ್ತು. ಆದರೂ ಅವರು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ ಎಂದರು. ಸಿಎಂ, ಸ್ಪೀಕರ್ ಸೇರಿದಂತೆ ಎಲ್ಲಾ ಸ್ಥಾನಮಾನ ನೀಡಿದ್ದರೂ ಅವರ ಬಿಜೆಪಿಯಿಂದ ಹೊರಗೆ ಹೋಗಿದ್ದಾರೆ. ಇದು ತಾತ್ಕಾಲಿಕ ಹಿನ್ನಡೆಯಾದರೂ ಪಕ್ಷ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಹೇಳಿದರು.
ಲಕ್ಷ್ಮಣ್ ಸವದಿ ಚುನಾವಣೆಯಲ್ಲಿ ಸೋತರೂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಮುಂದೆ ಇನ್ನಷ್ಟು ಉತ್ತಮ ಅವಕಾಶ ಸಿಗುತಿತ್ತು. ಆದರೆ, ಅವರು ಪಕ್ಷ ಬಿಟ್ಟು ದ್ರೋಹ ಮಾಡಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದರು.






















