ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ
ಉಡುಪಿ : ಕಾಂಗ್ರೆಸ್‌ನಲ್ಲಿ ಪಕ್ಷ ಕಟ್ಟಿದವರ ಕಡೆಗಣೆನೆಯಾಗಿದೆ. ಹಣಕ್ಕಾಗಿ ಪಕ್ಷವನ್ನು ಮಾರಾಟ ಮಾಡಲಾಗಿದೆ. ಪಕ್ಷದ ಮುಖಂಡರ ನಿರ್ಧಾರ ವಿರೋಧಿಸಿ ತಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುನಾಥ ಪೂಜಾರಿ ತಿಳಿಸಿದರು.
ಭಾನುವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಿಟ್ಟು ಹೊರಹಾಕಿದ ಮಂಜುನಾಥ ಪೂಜಾರಿ ಅವರು ಕಾರ್ಕಳದಲ್ಲಿ ಉದಯ್ ಕುಮಾರ್ ಶೆಟ್ಟಿಯವರಿಗೆ ಯಾವ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ ? ಕಳೆದ ಬಾರಿಯ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಂದ ಬಿಜೆಪಿಗೆ ಮತ ಹಾಕಿಸಿದಂತಹ ಉದಯ್ ಕುಮಾರ್ ಶೆಟ್ಟಿಯವರಿಗೆ ಇದೀಗ ಟಿಕೆಟ್ ನೀಡಿರುವುದು ಸರಿಯಲ್ಲ. ಬಿಜೆಪಿ ಸರಕಾರ ಆಗಲಿ ಅಥವಾ ಸುನಿಲ್ ಕುಮಾರ್ ವಿರುದ್ಧವಾಗಲಿ ಧ್ವನಿ ಎತ್ತದ ಉದಯ ಕುಮಾರ್ ಶೆಟ್ಟಿ ಅವರ ಪರವಾಗಿಯೇ ಕೆಲಸ ಮಾಡಿರುತ್ತಾರೆ. ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ ಭಟ್, ಸುನಿಲ್ ಕುಮಾರ್ ಜೊತೆ ಓಡಾಡುತ್ತಿರುತ್ತಾರೆ. ಗುತ್ತಿಗೆದಾರನಾಗಿ ಕಳಪೆ ಕಾಮಗಾರಿ ನಡೆಸಿರುವ ಉದಯ ಕುಮಾರ್ ಶೆಟ್ಟಿ ಇದೀಗ ಗುತ್ತಿಗೆದಾರರ ಸಾಮ್ರಾಜ್ಯ ಕಟ್ಟಲು ಮುಂದಾಗಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಮತ್ತು ಸೊರಕೆಯಿಂದ ಕಾಂಗ್ರೆಸ್ ನಿರ್ನಾಮ
ವಿನಯ ಕುಮಾರ್ ಸೊರಕೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಕೊಡದೇ ಉದಯ ಕುಮಾರ್ ಶೆಟ್ಟಿಯವರಿಗೆ ಡಿಕೆಶಿ ಟಿಕೆಟ್ ನೀಡಿದ್ದಾರೆ. ಈ ಮೂಲಕ ಕಾರ್ಕಳದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಲು ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ ಮಂಜುನಾಥ ಪೂಜಾರಿ ಅವರು ಉಡುಪಿ ಜಿಲ್ಲೆಯಲ್ಲಿ ಒಂದು ಸೀಟು ಕೂಡ ಕಾಂಗ್ರೆಸ್‌ಗೆ ದೊರೆಯದು ಎಂದರು.

ಬ್ಲಾಕ್ ಕಾಂಗ್ರೆಸ್‌ಗೆ ಹುದ್ದೆಗೆ ರಾಜೀನಾಮೆ
ಸಂಕಷ್ಟ ಕಾಲದಲ್ಲೂ ಕಾಂಗ್ರೆಸ್ ಪಕ್ಷದೊಂದಿಗಿದ್ದು ಪಕ್ಷ ಕಟ್ಟುವ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ. 40 ವರ್ಷಗಳಿಂದ ಪಕ್ಷದ ಸಿದ್ದಾಂತದಡಿಯಲ್ಲಿ ಕಾರ್ಯನಿರ್ವಹಿಸಿದ ನಾನು ಕಾಂಗ್ರೆಸ್‌ನ ಸದಸ್ಯನಾಗಿ ಇರುತ್ತೇನೆ. ಯಾವುದೇ ಹುದ್ದೆಯಲ್ಲಿರದೇ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಇದೇ ಸಂದರ್ಭ ತಿಳಿಸಿದರು.
ಹಣಕ್ಕಾಗಿ ಪಕ್ಷದ ಮಾರಾಟ
ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಈ ಹಿಂದಿನ ಪದ್ಧತಿಯನ್ನು ಅನುಸರಿಸದೆ ಹಣಕ್ಕಾಗಿ ಪಕ್ಷ ಟಿಕೆಟ್ ಮಾರಾಟ ಮಾಡಿದೆ ಎಂದು ಗಂಭೀರ ಆರೋಪ ಮಾಡಿರುವ ಮಂಜುನಾಥ ಪೂಜಾರಿ ತಮಗೆ ಬೇಕಾದವರಿಗೆ ಟಿಕೆಟ್ ಕೊಡುವುದಾದರೆ, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಸಂದರ್ಭ 2 ಲ. ರೂ. ಹಣ ಸಂಗ್ರಹಿಸಿದ್ದು ಯಾತಕ್ಕಾಗಿ ಎಂದು ಪ್ರಶ್ನಿಸಿದರು. ಟಿಕೆಟ್ ಹಂಚಿಕೆಯಲ್ಲಿ ಸ್ಕ್ರೀನಿಂಗ್ ಕಮಿಟಿಯ ಸದಸ್ಯರಿಗೂ ಎರಡೆರಡು ಕೋಟಿ ರೂ. ಸಂದಾಯವಾಗಿದೆ ಎಂದು ಮಂಜುನಾಥ ಪೂಜಾರಿ ಬಾಂಬ್ ಸಿಡಿಸಿದರು.
ನಂಬರ್ ವನ್ ಭ್ರಷ್ಟ
ರಾಜೇಂದ್ರ ಕುಮಾರ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಡೀಲಿಂಗ್ ಮಾಡುತ್ತಿದ್ದು ಅವರು ನಂಬರ್ ವನ್ ಭ್ರಷ್ಟರಾಗಿದ್ದಾರೆ. ಅವರನ್ನು ಅವಶ್ಯವಾಗಿ ತನಿಖೆ ಮಾಡಬೇಕು ಎಂದ ಅವರು ಸೊರಕೆ, ಗೋಪಾಲ ಪೂಜಾರಿ, ರಾಜೇಂದ್ರ ಕುಮಾರ್ ಅವರ ಚೇಲಾಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕುಟುಕಿದರು.
























