ಹುಟ್ಟು ನಮಗೆ ಉಚಿತವಾಗಿ ದೊರೆತಿದೆ. ಸಾವು ಖಚಿತವಾಗಿಯೇ ಇರಲಿದೆ. ನಡುವಿನ ಜೀವನ ಸಂಭ್ರಮವಾಗ ಬೇಕಿದೆ. ಇದನ್ನು ನಾವು ಎಲ್ಲಿ ಹುಡುಕುವುದು? ಭಗವಂತ ಕೊಟ್ಟ ಅವಕಾಶ ಈ ನರ ಜನ್ಮ. ಬರಿಯ ಕಾಲಹರಣವಾದರೆ ಏನು ಪ್ರಯೋಜನ? ಧರಣಿಯಲ್ಲಿ ಎತ್ತರೆತ್ತರ ಏರಲು ವಿಶಾಲವಾಗಿರುವ ನೀಲಾಕಾಶದಂತಿಹ ಅವಕಾಶವಿದೆ. ಓಡುವ ಮೋಡಗಳಂತೆ ಚಂಚಲತೆಯೂ ಇದೆ. ಒಮ್ಮಿಂದೊಮ್ಮೆಲೆ ಎರಗುವ ಸಂಕಷ್ಟಗಳ ಸುರಿಮಳೆ ಇದೆ. ಕತ್ತಲು ಬೆಳಕಿನಲಿ ಮುಸುಕಿನ ಗುದ್ದಾಟದ ಶೀತಲ ಸಮರವಿದೆ. ನೋಡಿ ನಗುವೆವು, ಒಳಗೊಳಗೆ ಬೇಯುವೆವು, ಹೊರಗೆ ಬೆರೆಯುವೆವು. ಕಾಡುವ ನೋಟಗಳಿಗೆ, ಅವರಿವರಾಡುವ ಆಟಗಳಿಗೆ ಬಲಿಯಾಗುವೆವು. ಹೊರುವ ನೋವಿನಲ್ಲೆ ನಮ್ಮವರ ನಡುವೆ ಭಾರವಾಗುತ್ತಿಹೆವು. ಜಗವೆಂದು ನಮ್ಮನ್ನು ಅಪ್ಪಿಕೊಳ್ಳದು. ಅಲ್ಲಿ ದೂರುವವರೆ ಹೆಚ್ಚು. ಈ ನೋವಿಗೊಂದು ಪರಿಹಾರ ಬೇಕಲ್ವೆ? ಜೀವನದಲ್ಲಿ ನೆಮ್ಮದಿ, ಶಾಂತಿ ದೊರಕ ಬೇಕಾದರೆ ನಾವು ಕೂಡಾ ಸೋತು ಗೆದ್ದವರ, ಕಷ್ಟಪಟ್ಟು ಮೇಲೆದ್ದವರ ಜಾಡುಹಿಡಿದು ಸಾಗಿದಾಗ ಎಷ್ಟೋ ಮಂದಿಯ ಪರಿಚಯ ನಮಗಾಗುತ್ತೆ. ಬಾಲಹಿಡಿದಾಗ ನಮಗೂ ಜೀವನ ಇದೆ ಅನಿಸುತ್ತೇ. ಕೆಲವು ಸ್ಯಾಂಪಲ್‌ಗಳ ಡೋಸ್ ತಮ್ಮ ಮುಂದಿರಿಸಿದ್ದೇನೆ. ಓದಿ ಜೀವನೋತ್ಸಾಹ ಪಡೆದುಕೊಳ್ಳಿ.
ಊರು ಹೋಗು ಅಂತಿದೆ ಕಾಡು ಬಾ ಅಂತಿರುವ ಮುದಿತನದ ಕಾಲದಲ್ಲಿ ಪ್ರಖ್ಯಾತನಾದವನ ಯಶೋಗಾಥೆ ಇದು. ಮೊದಲಿಗೆ ಟೈರ್ ಸೇಲ್ಸ್ ಮ್ಯಾನ್ ಆಗಿ, ನಂತರ ವಿಮಾ ಕಂಪೆನಿಯಲ್ಲಿ ದುಡಿದ. ಮತ್ತೆ ಬೇರೆ-ಬೇರೆ ಊರು ಅಲೆದಾಡಿ ತಿರುಗಿ ಕೊನೆಗೆ ಪಾಕಪ್ರವೀಣನಾದ. ಅಲ್ಲಿ ಹೊಸ ನಳಪಾಕದ ಪ್ರಯೋಗಕ್ಕೆ ಮುಂದಾದ. ಆ ಪ್ರಯೋಗದ ಪರಿಣಾಮವೇ ಒಂದು ಸಣ್ಣ ಅಂಗಡಿ ತೆರೆದ. ಆತನ ಆ ವ್ಯವಹಾರದಲ್ಲಿ ಭಾರಿ ಯಶಸ್ಸನ್ನು ತಂದುಕೊಟ್ಟಿತು. ತಾನು ನಿಂತ ಜಾಗವಲ್ಲದೇ ಇಡೀಯ ಜಗದಗಲ ವ್ಯಾಪಾರ ಪಸರಿಸಿತು. ಕೋಟ್ಯಾಂತರ ಗ್ರಾಹಕರ, ವಿತರಕರ ಗಮನ ಸೆಳೆಯಿತು. ಅದುವೇ ಕೆಂಟುಕೆ ಫ್ರೈಡ್ ಚಿಕನ್…… ಕೆ.ಎಫ್.ಸಿ. ಅರಳು ಮರಳು ಕಾಲದಲ್ಲಿರುವ ಅದರ ಮಾಲಿಕನೇ ಸ್ಯಾಂಡರ್ಸ್. ಜೀವನೋತ್ಸಹ ಅಂದ್ರೆ ಇದೇ ಅಲ್ವಾ.
ಈತ ಕನ್ನಡಕ ಹಾಕಿಕೊಂಡ ಇಂಜಿನಿಯರ್. ಇವನಿಗೆ ಕ್ರಿಕೇಟ್ ಹುಚ್ಚು. ಕ್ರಿಕೇಟ್‌ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲ. ಆದರೆ ಕನ್ನಡಕ ತೊಡಕಾಗಿತ್ತು. ಎಲ್ಲರೂ ಇವನ ಆಡುವ ಕನಸು ಅಸಾಧ್ಯವೆಂದೇ ಭಾವಿಸಿದ್ದರು. ಇಂತಹ ಸಂದರ್ಭದಲ್ಲೆ ಪಂದ್ಯವೊಂದರ ಇನ್ನಿಂಗ್ಸ್ನಲ್ಲಿ ನಾಲ್ಕಕ್ಕಿಂತ ಅಧಿಕ ವಿಕೆಟ್‌ಗಳನ್ನು 66 ಬಾರಿ ತೆಗೆದದ್ದು, ಏಕಕಾಲದಲ್ಲಿ ಒಂದು ಪಂದ್ಯದಲ್ಲಿ ಎಲ್ಲಾ 10 ವಿಕೆಟ್ ಪತನಗೊಳಿಸಿದ್ದು, ಟೆಸ್ಟ್ ಕ್ರಿಕೇಟ್‌ನಲ್ಲಿ ಭಾರತದ ಬೇರಾವ ಬೌಲರ್ ಮಾಡಿರದ 619 ವಿಕೆಟ್ಗಳ ಸಾಧನೆಯ ಮೂಲಕ ಇವನ ಕೀರ್ತಿ ಜಗದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಯಿತು. ಈ ಹೆಗ್ಗಳಿಕೆಗೆ ಪಾತ್ರನಾದವನೇ ಅನಿಲ್ ಕುಂಬ್ಲೆ. ಇವರಿಗೆ ಅದೆಷ್ಟೋ ಜನ ಅವಮಾನಪಡಿಸಿರಲಿಕ್ಕಿಲ್ಲ?

ಹಲವಾರು ಟೆಸ್ಟ್ ಪಂದ್ಯಾಟದಲ್ಲಿ ವಿಪರೀತ ಎನಿಸುವ ಗೂಗ್ಲಿಗಳನ್ನು ಎಸೆದು ಹಲವಾರು ಟೆಸ್ಟ್ ಪಂದ್ಯಗಳ ವಿಜಯಕ್ಕೆ ಕಾರಣವಾಗಿದ್ದ ಬಿ. ಎಸ್. ಚಂದ್ರಶೇಖರ್‌ರ ಸಾಧನೆಗೆ ಪೋಲಿಯೋ ಪೀಡಿತವಾದ ಕೈಗಳು ಕಾರಣವಾಗಲಿಲ್ಲ. ಗಣಿತ ವಿಷಯದಲ್ಲಿ ಫೈಲ್ ಆಗಿ, ಆಟದ ಮೈದಾನದಲ್ಲಿ ಆಟವಾಡಿ ಕ್ರಿಕೇಟ್ ದೇವರೆಂದು ಖ್ಯಾತನಾದ ಸಚಿನ್ ತೆಂಡುಲ್ಕರ್ ಸಾಧನೆ ಸಾಮಾನ್ಯವಲ್ಲ. ಸಚಿನ್ನರ ಇಚ್ಛಾ ಶಕ್ತಿಗೆ ಸಾಟಿವುಂಟೆ? ಆಕಾಶವಾಣಿಯಲ್ಲಿ ಕೆಲಸವನ್ನು ಕಳೆದುಕೊಂಡು ಅವಮಾನಕ್ಕೆ ಒಳಗಾದ ವ್ಯಕ್ತಿ ಮುಂದೆ ಬಾಲಿವುಡ್ ಚಿತ್ರರಂಗದಲ್ಲಿ ಮೇರು ಶಿಖರವನ್ನೆ ಏರಿ ವಿಶ್ವಖ್ಯಾತ ನಟನೆನಿಸಿಕೊಂಡ ಅಮೀತಾಬ್ ಬಚ್ಚನ್ ಅವಮಾನಕ್ಕೆ ಬಲಿಯಾಗದೆ ಸನ್ಮಾನವನ್ನೆ ಹೆಗಲೇರಿಸಿಕೊಂಡ ಇವರ ಛಲವೇನು ಕಡಿಮೆಯೇ? ತರಗತಿಯೊಳಗೆ ಫೈಲ್ ಎಂದು ಪಟ್ಟಕಟ್ಟಿಕೊಂಡಿದ್ದ ಟೋನಿಬ್ಲೇರ್ ಬ್ರಿಟನ್ ಪ್ರಧಾನಿಯಾದರು. ದೆಹಲಿಯ ಮ್ಯಾಕ್ ಡೋನಾಲ್ಡ್ನಲ್ಲಿ ಸೇವಕಿಯಾಗಿದ್ದು ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಸ್ಮೃತಿ ಇರಾನಿ ಕೇಂದ್ರ ಸಚಿವ ಸಂಪುಟದ ಸಚಿವೆಯಾದರು.
ಪೋಲಿಯೋ ಪೀಡಿತಳಾಗಿದ್ದ ಈಕೆ ತನ್ನ ದೇಹದ ಸ್ವಾಧೀನವನ್ನು ಕಳೆದುಕೊಂಡು ಗಾಲಿಕುರ್ಚಿಗೆ ವಶವಾದಳು. 33 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾದಳು. ದೃತಿಗೆಡದ ಈಕೆ ಚಿಂತೆ ಮಾಡುತ್ತಾ ಕೂರಲಿಲ್ಲ. ನನಗೆ ಹೀಗಾಯಿತಲ್ಲ ಎಂದು ಕೊರಗಲಿಲ್ಲ ಮರುಗಲಿಲ್ಲ, ಶಪಿಸಲಿಲ್ಲ. ಇಂದು ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ಧ ಪ್ಯಾರಾ ಒಲಂಪಿಕ್ಸ್ ಕ್ರೀಡಾಪಟು. ಅವಳೇ ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದ ಗೌರವಾನ್ವಿತ ಕನ್ನಡತಿ ಮಾಲತಿ ಹೊಳ್ಳ. ಶತದಡ್ಡ ಎನಿಸಿಕೊಂಡ, ತರಗತಿಯಲ್ಲಿ ಪೆದ್ದು ಎಂದೆಲ್ಲ ಕರೆಸಿಕೊಂಡ ಹುಡುಗ ಅಮೇರಿಕಾದ ಪ್ರಸಿದ್ದ ವೈದ್ಯನಾದ. ಮುಂದೆ ಶಸ್ತ್ರಚಿಕಿತ್ಸೆಗಳಿಂದಲೇ ಪ್ರಸಿದ್ಧನಾದ. ಜೊತೆಗೆ ಸಜ್ಜನ ರಾಜಕಾರಣಿ ಎನಿಸಿಕೊಂಡ. ಅವರೇ ಬೆಂಜಮಿನ್ ಸಾಲೋಮನ್ ಕಾರ್ಸನ್.
ಈಕೆಯ ಹೆಸರು ಮೇರಿಸೆಲ್ ಅಪಾಟೆನ್. ವಯಸ್ಸು 25. ಫಿಲಿಫೈನ್ಸ್ ದೇಶದ ಮನೀಲಾ ನಗರದ ಮಾರ್ಲೋ ನೇವಿಗೇಶನ್ ಎಂಬ ಸ್ಟಾರ್ ಹೋಟೇಲ್‌ನಲ್ಲಿ ಚೀಫ್‌ಕುಕ್. ಇದರಲ್ಲೇನು ವಿಶೇಷ ಅಂದ್ರೆ ಆಕೆ ಮೊಂಡು ಕೈ ಸುಂದರಿ. ಅಂದರೆ ಎರಡು ಮುಂಗೈಗಳಿಲ್ಲದವಳು. ಇಂದು ಬದುಕಿನ ಬವಣೆಯನ್ನು ಮೀರಿ ನಿಂತ ಸ್ಫೂರ್ತಿದಾಯಕ ವ್ಯಕ್ತಿ ಎನಿಸುತ್ತಾಳೆ. ಒಂದು ಕಾಲದ ಪ್ರಸಿದ್ಧ ಗಾಯಕಿ. ಆದರ್ಶ ಮನೆಯೊಡತಿ. ಡಿಢೀರ್ ಮಿದುಳಿನ ಸಮಸ್ಯೆಗೆ ಒಳಗಾಗಿ ಬದುಕುವ ಆಸೆಯನ್ನೆ ಕೈಬಿಟ್ಟಿದ್ದಳು. ಮತ್ತೆ ಛಲದ ಮನವಕಟ್ಟಿದಳು. ಇಂದು ಸೂಪರ್ ಸ್ಟಾರ್‌ಗಳಿಗೆ ತರಬೇತಿ ನೀಡುವ ಬಾಡಿ ಬಿಲ್ಡರ್ ಆಗಿ ಬೆಳೆದಳು. ಆ ಸಿಕ್ಸ್ ಪ್ಯಾಕ್ ಲೇಡಿಯೇ ಕಿರಣ್ ಥೆಂಬ್ಲಾ.
ಒಲಂಪಿಕ್ಸ್‌ನಲ್ಲಿ ಭಾಗವಹಿಸಲೇ ಬೇಕೆಂಬ ಹಠ ತೊಟ್ಟು ಫೈಲೂರ್ ಆದ, ಸೋಲು-ಗೆಲುವಿನ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡಿದ ಅಮೇರಿಕಾದ ಪ್ರಸಿದ್ಧ ಓಟಗಾರ್ತಿ ಸಾರಬ್ರೌನಳ ಸಾಹಸಗಾಥೆಯು ಇತಿಹಾಸದ ಕ್ರೀಡಾಪುಟದಲ್ಲಿ ಕ್ರೀಡಾಳುಗಳಿಗೆ ಚೈತನ್ಯದ ಚಿಲುಮೆಯಾಗುತ್ತಾಳೆ. ಜೀವನದ 50ರ ನಂತರ ನೈಕ ಕಂಪೆನಿಯನ್ನು ಸ್ಥಾಪಿಸಿ, ಅದರ ಮೂಲಕ ಸಿರಿತನದ ಮೇರು ಶಿಖರವೇರಿ ಯಶಸ್ವಿ ಉದ್ಯಮಿ ಎನಿಸಿಕೊಂಡ ಪಲ್ಗುಣಿಯವರ ಸಾಧನೆಯ ಛಲ ಮೆಚ್ಚುವಂತದ್ದೆ.
ಈಕೆ ಹಣ್ಣು ಹಣ್ಣು ಮುದುಕಿ. ವಾಸ ಒಂದು ಮುರುಕಲು ಗುಡಿಸಲಿನಲ್ಲಿ. ಕಾಯಕ ಬೀದಿ ಗುಡಿಸುವುದು. ಸ್ವಂತ ಮಕ್ಕಳಿಲ್ಲ. ಆದರೂ ಈಕೆ ಕಳೆದ 24 ವರ್ಷಗಳಿಂದ ತನ್ನ ಶಕ್ತಿ ಮೀರಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಪಡೆದ ವಿದ್ಯಾರ್ಥಿಗಳಿಗೆ ಈಕೆ ಯಾರೆಂದೇ ಇತ್ತೀಚೆಗಿನವರೆಗೂ ಗೊತ್ತಿರಲಿಲ್ಲ. ತನಗೆ ಸಹಾಯ ಮಾಡುತ್ತಿರುವವಳು ಯಾರೆಂದು ಒಂದು ಬಾಲಕಿ ಹುಡುಕಿದಾಗಲೇ ಈ ಬಡ ಮುದುಕಿಯ ಹೃದಯ ಶ್ರೀಮಂತಿಕೆಯು ಜಗಜ್ಜಾಯಿರಾಯಿತು. ಆ ಹೃದಯ ವೈಶಾಲ್ಯದಿಂದ ಕೂಡಿದ, ಸಾಮಾಜಿಕ ಕಳಕಳಿಯನ್ನು ಹೊಂದಿದ ಈ ಅಜ್ಜಿಯ ಹೆಸರೇ ಲೀ ಯುಕೂನ್. ಜನ ಇವಳನ್ನು ಕಬ್ಬಿಣದ ಕಾಲಿನ ಮಹಿಳೆ ಎಂದು ಕರೆಯುತ್ತಾರೆ.
ಈತ ಕುಂಬಾರ ಕುಟುಂಬದಲ್ಲಿ ಹುಟ್ಟಿದ ಬಡ ಯುವಕ. ಕುಲವೃತ್ತಿಯನ್ನು ಅನುಸರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದ ಕಾಲ. ಎಸ್.ಎಸ್.ಎಲ್.ಸಿಯಲ್ಲಿ ಫೈಲ್ ಆಗಿ ತಂದೆ ಜೊತೆ ಮೇಸ್ತ್ರಿ ಕೆಲಸಕ್ಕೆ ಮನಸ್ಸಿಲ್ಲದೆ ಹೋಗುತ್ತಿದ್ದ. ಮತ್ತೆ ಟೀ ಸ್ಟಾಲ್‌ನಲ್ಲಿ ಸ್ವಲ್ಪ ದಿನ ಕೆಲಸ. ಹೆಂಚಿನ ಕಾರ್ಖನೆಯಲ್ಲಿ ಎಷ್ಟೋ ದಿವಸ. ಯಾವ ಕೆಲಸವೂ ತೃಪ್ತಿ ಕಾಣಲಿಲ್ಲ. ಉದ್ಯೋಗವಿಲ್ಲದೆ ನಿರುದ್ಯೋಗಿಯಾಗಿದ್ದ. ಪುನಃ ಕುಲಕಸುಬಿನೆಡೆಗೆ ಮರಳಿದ. ಸಾಂಪ್ರದಾಯಿಕ ಕುಂಬಾರನ ಕಾರ್ಯಕ್ಕೆ ನವೀನ ಆವಿಷ್ಕಾರ ತಂದ. ಇದರಲ್ಲಿ ಮೊದಲಿಗೆ ಕೈ ಸುಟ್ಟುಕೊಂಡರೂ ಕೂಡಾ ದೃತಿಗೆಡದೆ ಮುಂದುವರಿದ. ಇದರ ಫಲಶೃತಿ ‘ಮಿಟ್ಟೀ ಕೂಲ್’ ಎಂಬ ಫ್ಯಾಕ್ಟರಿಯ ಆರಂಭಕ್ಕೆ ನಾಂದಿಹಾಡಿದ. ಇಂದು ಈ ಕಾರ್ಖನೆಯು ಮಣ್ಣಿನ ರೆಫ್ರಿಜರೇಟರ್ ಸಹಿತ ನಿತ್ಯೋಪಯೋಗಿ ಪರಿಕರಗಳನ್ನು ಮಣ್ಣಿನಿಂದಲೇ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಹಿಂದೆ ಝೀರೋ ಆಗಿದ್ದವ ಇಂದೂ ಎಲ್ಲರಿಗೂ ಹೀರೋ ಆಗಿದ್ದಾನೆ. ಮಾಜಿ ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂರಿಂದ ಮಣ್ಣಿನ ವಿಜ್ಞಾನಿ ಎಂಬ ಬಿರುದು ಪಡೆದುಕೊಂಡಿದ್ದಾನೆ. ಆ ಮಣ್ಣಿನ ಮಗನೇ ಗುಜರಾತಿನ ಮನ್ಸುಖ್ ಬಾಯ್ ರಾಘವಜಿ ಪ್ರಜಾಪತಿ.
ಈಕೆಯದು ಕಳೆದ 17 ವರ್ಷಗಳಿಂದ ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ವಾಸ್ತವ್ಯ.. ಪ್ರತಿದಿನ ಮಂಡಕ್ಕಿ ವ್ಯಾಪಾರ. ತಲೆಮೇಲೆ ಮಂಡಕ್ಕಿ ಮೂಟೆಹೊತ್ತು ಕೊಂಡು ‘ಮಂಡಕ್ಕಿ ಬೇಕೆ ಮಂಡಕ್ಕಿʼ ಎನ್ನುತ್ತಾ ಊರೂರು ಸುತ್ತಾಟ. ಮುಂಜಾನೆಯಿಂದ ಇಳಿ ಸಂಜೆಯ ಹೊತ್ತಿನವರೆಗೂ ಕಾಯಕದಲ್ಲಿ ಮಗ್ನಳೀಕೆ. ಹಾಗಂತ ಜೀವನ ಸಾಗಾಟದ ಹೊಣೆ ಹೊತ್ತ ಈಕೆ ಸಾಮಾನ್ಯ ಹೆಂಗಸಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಟಗಲ್‌ನ ಗ್ರಾಮ ಪಂಚಾಯತ್ ಸದಸ್ಯೆ. ಪಂಚಾಯತ್‌ನ ಸಾಮಾನ್ಯ ಸಭೆಗೆ ತಪ್ಪದೇ ಹಾಜಾರಾಗಿ, ಜನರಿಗೆ ನೆರವಾಗುವಳು. ಅಂದ ಹಾಗೆ ಅವಳು ಯಾರೆಂದ್ರಾ……? ಅವಳೇ…ಲಕ್ಮೀ ದೇವಮ್ಮ.

✒️ಸಂತೋಷ್ ನೆಲ್ಲಿಕಾರು


























