✒️ ನಳಿನಿ ಎಸ್. ಸುವರ್ಣ
ಪ್ಯಾನ್ – ಆಧಾರ್ ಕಾರ್ಡ್ ಪ್ರಸ್ತುತ ಜೀವನದ ಬಹುದೊಡ್ಡ ಅವಶ್ಯಕತೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಆರ್ಥಿಕ ವಹಿವಾಟುಗಳಲ್ಲಿ ಪಾನ್ ಕಾರ್ಡ್ ಪ್ರಮುಖ ಆಧಾರವಾದರೆ, ಆಧಾರ್ ಕಾರ್ಡ್ ಪಾನ್ ಕಾರ್ಡ್‌ಗೆ ಪ್ರಮುಖ ಆಧಾರವಾಗಿದೆ. ಈ ನಿಟ್ಟಿನಲ್ಲಿ ಪಾನ್ ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿತ್ತು. 1000 ರೂಪಾಯಿ ದಂಡದೊಂದಿಗೆ ಮಾರ್ಚ್ 31ವರೆಗೆ ಗಡುವು ನೀಡಲಾಗಿದ್ದು, ಈಗ ಜೂನ್ 30, 2023 ರವೆರೆಗೆ ಗಡುವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಕೊನೆಯ ದಿನಗಳಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಿದೆ.
ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್‌ಎಸ್ ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ದಂಡವಿಲ್ಲದೆ ಕೊನೆಯ ಗಡುವು ಜೂನ್ 30, 2022 ಆಗಿತ್ತು. 1000 ರೂ. ದಂಡದೊಂದಿಗೆ ಕೇಂದ್ರ ಸರ್ಕಾರವು ಲಿಂಕ್ ಮಾಡುವ ಅವಧಿಯನ್ನು ಮಾರ್ಚ್ 31, 2023 ರವರೆಗೆ ನಿಗದಿಪಡಿಸಿತ್ತು.ಒಂದುವೇಳೆ ಈ ದಿನದ ಮೊದಲು ಲಿಂಕ್ ಮಾಡದಿದ್ದಲ್ಲಿ ನಂತರ 10,000 ರೂ. ದಂಡ ಪಾವತಿಸಬೇಕಾಗಿತ್ತು. ಇದರಿಂದಾಗಿ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೆಲವರಿಗೆ ಆಧಾರ್ ಪ್ಯಾನ್ ಲಿಂಕ್ ಮಾಡಬೇಕೆಂದು ಮೊದಲಿಂದಲೂ ಹೇಳುತ್ತಿದ್ದರೂ ಎಂಬ ಮಾಹಿತಿಯ ಕೊರತೆ ಮತ್ತು ಈಗ ಒಂದು ಸಾವಿರ ದಂಡ ಪಾವತಿಸಬೇಕೆಂದು ಹೇಳುತ್ತಿರುವುದು ಸಂಕಷ್ಟಕ್ಕೆ ಒಳಪಡಿಸಿದೆ. ಆದರೆ ಇದೀಗ ಲಿಂಕ್ ಗಡುವನ್ನು ಜೂನ್ 30ಕ್ಕೆ ವಿಸ್ತರಿಸುವ ಮೂಲಕ ಜನರ ಗೊಂದಲವನ್ನು ಸರಕಾರ ಬಗೆಹರಿಸಿದೆ.
ಪಾನ್ – ಆಧಾರ್ ಕಾರ್ಡ್ ಲಿಂಕ್ ವಿಸ್ತರಣೆ ಹಾಗೂ ಶುಲ್ಕ
ಪಾನ್ – ಆಧಾರ್ ಕಾರ್ಡ್ ಜೋಡಣೆ ಮಾಡಲು ಮೊದಲು 2017 ರಲ್ಲಿ ಜೂನ್ 29ಕ್ಕೆ ಆದೇಶ ಹೊರಡಿಸಿದ್ದು 2019ರ ಸೆಪ್ಟಂಬರ್ 30ಕ್ಕೆ ಕೊನೆಯ ದಿನಾಂಕ ನಿಗದಿಪಡಿಸಿದ್ದರು. ಆದರೆ ಇದನ್ನು ಡಿಸೆಂಬರ್ 31ರವರೆಗೆ ವಿಸ್ತರಣೆಯ ಆದೇಶ ಸೇರಿದಂತೆ ಒಟ್ಟು 9 ಬಾರಿ ಪಾನ್ – ಆಧಾರ್ ಕಾರ್ಡ್ ಜೋಡಣೆಯ ವಿಸ್ತರಣೆ ಮಾಡಲಾಗಿದೆ. ಇದರಲ್ಲಿ ಮಾ.31, 2022 ರಕ್ಕೂ ಮುನ್ನ ಆಧಾರ್-ಪ್ಯಾನ್ ಜೋಡಣೆ ಉಚಿತವಾಗಿತ್ತು. ಏ.1, 2022 ರಿಂದ 500 ರೂಪಾಯಿಗಳ ದಂಡ ವಿಧಿಸಲಾಗಿತ್ತು ಹಾಗೂ ಜುಲೈ, 1, 2022 ರಿಂದ 1,000 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಇದೀಗ 10ನೇ ಬಾರಿ ಮತ್ತೊಮ್ಮೆ ಆಧಾರ್ ಪಾನ್ ಲಿಂಕ್ ದಿನಾಂಕವನ್ನು ವಿಸ್ತರಿಸಿದ್ದು, 2023 ರ ಜೂನ್ 30 ಕೊನೆಯ ದಿನಾಂಕ ಎಂದು ನಿಗದಿಪಡಿಸಿದೆ. 2023ರ ಜುಲೈ 1ರಿಂದ, ಲಿಂಕ್ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದನ್ನು 30 ದಿನಗಳ ಒಳಗೆ 1000 ರೂ ಶುಲ್ಕ ಕಟ್ಟಿ ಲಿಂಕ್ ಮಾಡಿಸಿ ಮತ್ತೆ ಕಾರ್ಯಗತಗೊಳಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ಏಕೆ ಇಷ್ಟು ಬಾರಿ ವಿಸ್ತರಣೆ
ಮೊದಲೆರಡು ಬಾರಿ ಜನರಿಗೆ ಮಾಹಿತಿ ಕೊರತೆ ಸಂಬಂಧಿಸಿದಂತೆ ವಿಸ್ತರಣೆ ಮಾಡಲಾಗಿತ್ತು. ನಂತರದ ಎಲ್ಲಾ ವಿಸ್ತರಣೆಯನ್ನು ಕೋವಿಡ್ ಸಂಕಷ್ಟದ ಕಾರಣದಿಂದಾಗಿ ಮಾಡಲಾಗಿತ್ತು ಆದರೆ 31-03-2022ರ ವರೆಗೂ ವಿಸ್ತರಣೆಯನ್ನು ಮಾಡಿಯೂ ಹಲವು ಮಂದಿ ಪಾನ್ ಆದಾರ್ ಜೋಡಣೆ ಮಾಡಿಸದ ಕಾರಣ ಇದೀಗ ದಂಡ ಸಹಿತ ಜೋಡಣೆ ಪ್ರಾರಂಭವಾಯಿತು.
ಲಿಂಕ್ ಮಾಡುವುದು ಏಕೆ ಮುಖ್ಯ
ಕಳೆದ ಕೆಲವು ವರ್ಷಗಳಿಂದ ನಕಲಿ ಪಾನ್ ಕಾರ್ಡ್‌ಗಳ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಹಣಕಾಸಿನ ವಂಚನೆಯಂತಹ ಘಟನೆಗಳು ನಡೆದಿವೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವ ಕಾರಣ ತೆರಿಗೆ ವಂಚನೆಯಂತಹ ಪ್ರಕರಣಗಳು ಹೆಚ್ಚಿವೆ. ಇದನ್ನು ನಿಯಂತ್ರಿಸಲು ಆಧಾರ್ ಪಾನ್ ಲಿಂಕ್ ಅನಿವಾರ್ಯವಾಗಿದೆ.
ತೆರಿಗೆ ಪ್ರಯೋಜನಗಳು ಮತ್ತು ವಹಿವಾಟುಗಳನ್ನು ಪಡೆಯುವಲ್ಲಿ ತೊಂದರೆ
ಜೂನ್ 30, 2023 ರವರೆಗೆ ಯಾವುದೇ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ರೆ, ಆರ್ಥಿಕ ವಹಿವಾಟುಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ಯಾನ್ ಇಲ್ಲದೆ ನೀವು ಒಂದೇ ಬಾರಿಗೆ 5000 ರೂ.ಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸಿದರೆ, ಅದು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯುವಲ್ಲಿ ಸಮಸ್ಯೆಗಳಿರುತ್ತವೆ. ಪ್ಯಾನ್, ಡಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಿಸದಿದ್ದಲ್ಲಿ, ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಯಾರಿಗೆ ಪಾನ್ ಜೋಡಣೆಯಿಂದ ವಿನಾಯಿತಿ
>80 ವರ್ಷ ಮೇಲ್ಪಟ್ಟವರು
>ಭಾರತೀಯ ಪ್ರಜೆ ಅಲ್ಲದವರು
>ಅನಿವಾಸಿ ಭಾರತೀಯರು
>ಜಮ್ಮು ಕಾಶ್ಮೀರ, ಅಸಾಂ ಮತ್ತು ಮೇಘಾಲಯಾ ರಾಜ್ಯಕ್ಕೆ ಸೇರಿದವರು
ಪಾನ್ ಹಾಗೂ ಆಧಾರ್ ಕಾರ್ಡನ್ನು ಲಿಂಕ್ ಮಾಡುವ ಬಗ್ಗೆ ಆದಾಯ ತೆರಿಗೆ ಇಲಾಖೆ ಹಲವು ಬಾರಿ ಜನರಲ್ಲಿ ಮನವಿ ಮಾಡಿದೆ. ಕಳೆದ ಮೂರು ವರ್ಷಗಳಿಂದ ಈ ಕೆಲಸ ಜಾರಿಯಲ್ಲಿದೆ. ಮಾಹಿತಿಯ ಕೊರತೆಯಿಂದ ಜನರಲ್ಲಿ ಗೊಂದಲ ಮೂಡಿರುವುದು ಸಹಜ. ಪೆನಾಲ್ಟಿ ಮೊತ್ತ ಕಡಿಮೆ ಮಾಡಿ, ಅವಧಿಯ ವಿಸ್ತರಣೆ ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆಯುವ ಅಗತ್ಯ ಇದೆ.
ರವಿಪ್ರಸಾದ್
ಚಾರ್ಟಡ್ ಅಕೌಂಟೆಂಟ್
ಆಧಾರ್ ಕಾರ್ಡ ಲಿಂಕ್ ಮಾಡಲು ಒಂದು ಸಾವಿರ ರೂಪಾಯಿ ಚಾರ್ಜು ಇಟ್ಟಿರುವುದು ಮತ್ತು ಅದಕ್ಕೆ ಮಾರ್ಚ 31 ಕೊನೆಯ ದಿನಾಂಕ ನಿಗದಿ ಮಾಡಿರುವುದು ಜನಸಾಮಾನ್ಯರಿಗೆ ಕಷ್ಟವಾಗಿತ್ತು. ಲಿಂಕ್ ಖಡ್ಡಾಯ ಮಾಡಿರುವುದರಲ್ಲಿ ತಪ್ಪಿಲ್ಲ ಆದರೆ ಇಂತಹ ಮಹತ್ವದ ಕೆಲಸದ ಬಗ್ಗೆ ಪ್ರಚಾರ ಮತ್ತು ಜಾಗೃತಿ ಮೂಡಿಸುವ ಕಾರ್ಯವನ್ನು ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಿತ್ತು.
ಪ್ರಭಾಕರ್ ಶೆಟ್ಟಿ ಕೊಂಡಳ್ಳಿ
ಶಿಕ್ಷಕರು