ಅಡಪಾಡಿಯಲ್ಲಿ ಸಪ್ತ ಸಂತರ ಸಮಾಗಮ

ವ್ಯಕ್ತಿಯ ವೈಭವೀಕರಣ ಸಂಘಟನೆಯ ತತ್ವವಲ್ಲ – ಜಗದೀಶ್‌ ಕಾರಂತ್‌

ಕಾರ್ಕಳ : ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಮೂಲ ಧರ್ಮದ ಆಚಾರ ವಿಚಾರ ಸಂಸ್ಕೃತಿಯನ್ನು ಯುವಪೀಳಿಗೆ ಮರೆಯುತ್ತಿರುವುದು ದುರಂತ. ಪ್ರತಿ ನಿತ್ಯವೂ ಮತಾಂತರ, ಲವ್‌ ಜಿಹಾದ್‌ನಂತಹ ದುಷ್ಕೃತ್ಯಗಳು ನಡೆಯುತ್ತಿದೆ. ಇಂತಹ ದುರಂತಗಳಿಂದ ಧರ್ಮ ರಕ್ಷಣೆಗಾಗಿ ಪ್ರಸ್ತುತ ಸಮಾಜಕ್ಕೆ ಧರ್ಮಜಾಗೃತಿ ಕಾರ್ಯಕ್ರಮ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂತರ ಸಂಗಮ ಮಹತ್ವವಾದುದು ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಅಡಪಾಡಿ ಪಳ್ಳಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾ ಮಹಾಯಾಗದ ಪ್ರಯುಕ್ತ ಮಾ. 27 ರಂದು ನಡೆದ ಸಂತರ ಸಂಗಮ ಎಂಬ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪೇಜಾವರ ಅಧೋಕ್ಷಜ ಮಠದ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀವರ್ಚನ ನೀಡಿ, ಧಾರ್ಮಿಕ ವಿಧಿ ವಿಧಾನಗಳು ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗದೇ ನಿತ್ಯ ಬದುಕಿನಲ್ಲಿ ಮೈಗೂಡಿಸಿಕೊಂಡಾಗ ಸಮಾಜ ಸುಸ್ಥಿರತೆಯನ್ನು ಹೊಂದಲು ಸಾಧ್ಯ. ಸುಖ ಶಾಂತಿಯ ಮೇಲೆ ನಿಯಂತ್ರತೆ ಹಾಗೂ ದೇವರ ಅನುಗ್ರಹವಿದ್ದಾಗ ಮಾತ್ರ ಬದುಕಿಗೆ ಅರ್ಥವಿರುವುದು ಎಂದರು.

ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನದಲ್ಲಿನ ಬಿಂಬ ಶುದ್ಧಿಗಾಗಿ ಬ್ರಹ್ಮಕಲಶ ಹೇಗೆ ಮುಖ್ಯವೋ ಸಮಾಜದ ಶುದ್ಧಿಗಾಗಿ ಸಾಧು ಸಂತರ ಸಮಾಗಮವು ಪ್ರಮುಖವಾದುದು. ಆದರೆ ಸಂತರ ಹಿತವಚನ ಕೇವಲ ಬೋಧನೆಯಾಗದೆ ಸಮಾಜದಲ್ಲಿ ಅನುಕರಣೆಯಾದಾಗ ಕಾರ್ಯಕ್ರಮದ ಹಿಂದಿನ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ದೇವರು ಮತ್ತು ದೇಶದ ನಡುವಿನ ಚಲನಶೀಲವಾದ ಧರ್ಮ ಸದೃಢವಾಗಿದ್ದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುವುದು. ದೇಶದ ಸಂಸ್ಕೃತಿಯ ಉಳಿವಿನಲ್ಲಿ ಸಾಧು ಸಮಾವೇಶದೊಂದಿಗೆ ಧರ್ಮ ಸಂದೇಶದಂತಹ ಕಾರ್ಯಕ್ರಮಗಳು ಸ್ತುತ್ಯಾರ್ಹ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಶುಭಸಂಶನೆಗೈದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಧಾಮ ಮಾಣಿಲ ಇಲ್ಲಿನ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಮಾನಸಿಕ ಬದ್ಧತೆ, ಮಾನವೀಯ ಮೌಲ್ಯ ಹಾಗೂ ಗುರುತತ್ವದ ಅರಿವನ್ನು ಸಮಾಜಕ್ಕೆ ಧಾರೆಯೆರೆಯುವ ನೆಲೆಯಲ್ಲಿ ಅಡಪಾಡಿಯಲ್ಲಿ ನಡೆಯುತ್ತಿರುವ ಸಂತರ ಸಂಗಮ ಕಾರ್ಯಕ್ರಮ ಶ್ಲಾಘನೀಯ ಎಂದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು, ದೇಶವು ಧರ್ಮ ಜಾಗೃತಿಯೊಂದಿಗೆ ಸಂಘಟನಾತ್ಮಕವಾಗಿ ಬೆಳೆದಾಗ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ. ಆದ್ದರಿಂದ ಧರ್ಮ ರಕ್ಷಣೆ ಮತ್ತು ಮುಂದಿನ ಪೀಳಿಗೆ ಸಂಸ್ಕಾರಯುತ ಜೀವನ ಹೊಂದಲು ಇಂದು ಧರ್ಮ ಸಂದೇಶ ನೀಡುವುದು ಅವಶ್ಯ ಎಂದರು. ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ ಭಾರತದ ತಳಹದಿಯೇ ಸನಾತನ ಹಿಂದೂ ಧರ್ಮ. ತ್ಯಾಗ ಮತ್ತು ಶೌರ್ಯದ ಪ್ರತೀಕವಾದ ಹಿಂದೂ ಧರ್ಮದ ಸಂಕೇತ ಕೇಸರಿ. ಯಾವುದೇ ಒಂದು ಗುಂಪು ಅಥವಾ ಪಕ್ಷಕ್ಕೆ ಸೀಮಿತವಾಗದೇ ಧರ್ಮದ ಶ್ರೀ ರಕ್ಷೆಯಾಗಲಿ ಎಂದರು.

ವೈಭವದ ಸ್ವಾಗತ
ಸಾಲು ಸಾಲು ಭಗಧ್ವಜದ ವೈಭವದ ಮೆರವಣಿಗೆಯೊಂದಿಗೆ ಸಪ್ತ ಸಂತರನ್ನು ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಸುಮಾರು 500 ವರುಷಗಳ ಐತಿಹ್ಯವಿರುವ ಅಡಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು 1997 ರಲ್ಲಿ ಪ್ರತಿಷ್ಠಾಪನೆಗೊಂಡು ಹತ್ತು ವರುಷಗಳ ಬಳಿಕ ಶ್ರೀ ಉಮಾಮಹೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಬಳಿಕ ಶ್ರೀ ಕ್ಷೇತ್ರದಲ್ಲಿ ಆರು ಬಾರಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಹಾಗೂ ಐದು ಬಾರಿ ನಾಗಮಂಡಲೋತ್ಸವವು ನಡೆದಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯದ ಕ್ಷೇತ್ರೀಯ ಸಂಚಾಲಕ ಜಗದೀಶ್ ಕಾರಂತ್‌ ಮಾತನಾಡಿ, ಭಾರತವನ್ನು ಹಿಂದೂ ರಾಷ್ಟ್ರ ಮಾಡುವಲ್ಲಿ ಡಾ. ಹೆಗಡೆವಾರ್ ಅವರ ಶ್ರಮ ಹಾಗೂ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ಆರಂಭವಾದ ಆರ್‌ಎಸ್‌ಎಸ್‌ ಸಮಾಜಕ್ಕೆ ನೀಡಿದ ಕೊಡುಗೆ ಎಂದಿಗೂ ಅಮರ. ದೇಶಕ್ಕಾಗಿ ಮಹಾನ್‌ ನಾಯಕರನ್ನು ಸೃಷ್ಟಿಸಿದ ಹೆಗ್ಗಳಿಕೆ ಆರ್‌ಎಸ್‌ಎಸ್‌ ನದ್ದಾಗಿದೆ. ಪ್ರಸ್ತುತ ನಾನು ನನ್ನದೆಂಬ ಅಹಂನಿಂದ ಸಂಘಟನೆಯ ಭಾಗವಾಗಿದ್ದವರು ಹಿಂದುತ್ವದ ಹೆಸರಿನಲ್ಲಿ ಚುನಾವಣೆಯ ಅಖಾಡಕ್ಕಿಳಿಯುವ ಸನ್ನಿವೇಶಗಳನ್ನು ಗಮನಿಸಬಹುದಾಗಿದೆ. ಆದರೆ ವ್ಯಕ್ತಿಯ ವೈಭವೀಕರಣ ಸಂಘಟನೆಯ ತತ್ವವಲ್ಲ. ಏಕೆಂದರೆ ವ್ಯಕ್ತಿ ಶಾಶ್ವತನೂ ಅಲ್ಲ, ಪರಿಪೂರ್ಣನೂ ಅಲ್ಲ ಈ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ವಾಸ್ತುತಜ್ಞ ಕೃಷ್ಣರಾಜ ತಂತ್ರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಸ್ತಾನದ ನಾಗಪಾತ್ರಿ ವೇದಮೂರ್ತಿ ಸುಬ್ರಮಣ್ಯ ಮದ್ಯಸ್ಥ, ನಾಗರಾಧಕ ಡಾ. ಎನ್.‌ ಬಾಲಕೃಷ್ಣ ವೈದ್ಯ, ಮಂಗಳೂರು ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌, ನರಸಿಂಗೆ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್‌ ಸಾಲ್ವಣ್‌ಕರ್, ಪೆಜಕೊಡಂಗೆ ಪಳ್ಳಿ ಶ್ರೀ ಮಹಾಲಿಂಗೇಶ್ವರ ಆಡಳಿತ ಮೊಕ್ತೇಸರ ಜಗದೀಶ್‌ ಹೆಗ್ಡೆ, ಸೂಡ ಸುಬ್ರಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಜಯಶೀಲಾ ಹೆಗ್ಡೆ, ಲಕ್ಷ್ಮೀಪುರ ಶ್ರೀ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್‌ ನಾಯಕ್‌, ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಘ್ಳೆ, ಮುಂಬೈ ಉದ್ಯಮಿ ಉಮೇಶ್‌ ಪೂಜಾರಿ, ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗೀಶ್‌ ಕಿಣಿ ಪ್ರಾರ್ಥಿಸಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ ರಮೇಶ್‌ ಕಲ್ಲೊಟ್ಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ನಾಯಕ್‌ ವಂದಿಸಿದರು.

error: Content is protected !!
Scroll to Top