ಕಾರ್ಕಳ ಸಮೀಪದ ಕರ್ವಾಲು ದೇವಸ್ಥಾನಕ್ಕೆ ರವಿಶಾಸ್ತ್ರಿ ಭೇಟಿ

ಕೆ.ಎಲ್.‌ ರಾಹುಲ್‌ ಶ್ರೇಷ್ಠ ಆಟಗಾರ

ರೋಹಿತ್‌ ಶರ್ಮಾ ಮುಂಬರುವ ವಿಶ್ವಕಪ್‌ ಮುನ್ನಡೆಸಲಿದ್ದಾರೆ

ಕಾರ್ಕಳ : ಕೆ.ಎಲ್.‌ ರಾಹುಲ್‌ ಓರ್ವ ಶ್ರೇಷ್ಠ ಆಟಗಾರ. ಮುಂದಿನ ಏಳೆಂಟು ವರ್ಷಗಳ ಕಾಲ ಕ್ರಿಕೆಟ್‌ ಆಡುವ ಸಾಮರ್ಥ್ಯವನ್ನು ರಾಹುಲ್‌ ಹೊಂದಿದ್ದಾರೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಕಾರ್ಕಳ ಸಮೀಪದ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು.

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಸಮರ್ಥ, ಅನುಭವಿ ಆಟಗಾರರು, ಪ್ರವರ್ಧಮಾನಕ್ಕೆ ಬರುತ್ತಿರುವ ಯುವಕರಿದ್ದಾರೆ. ಭಾರತೀಯ ತಂಡ ಸಮತೋಲಿತವಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ತಂಡದೆದುರಿನ ಏಕದಿನ ಸರಣಿಯನ್ನು ನಾವು ಕಳೆದುಕೊಂಡಿರಬಹುದು. ಅದರಿಂದ ಅಂತಹ ನಷ್ಟವೇನಿಲ್ಲ. ಕ್ರಿಕೆಟ್‌ನಲ್ಲಿ ಏರಿಳಿತಗಳು ಸಹಜ ಎಂದು ರವಿಶಾಸ್ತ್ರಿ ಹೇಳಿದರು.

ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ರೋಹಿತ್‌ ಶರ್ಮಾ ಅವರು ಮುನ್ನಡೆಸಲಿದ್ದಾರೆ. ಭಾರತ ಉತ್ತಮ ಪ್ರದರ್ಶನ ತೋರಲಿದೆ. ರಿಷಬ್‌ ಪಂತ್‌ ಬೇಗನೆ ಚೇತರಿಸಿಕೊಳ್ಳಬೇಕು. ಈ ಬಾರಿ ಐಪಿಲ್‌ನಲ್ಲಿ 10 ತಂಡು ಭಾಗವಹಿಸಲಿದ್ದು, ಪಂದ್ಯಾಟಗಳು ಅತ್ಯಂತ ರೋಮಾಂಚನಕಾರಿಯಾಗಿ ನಡೆಯಲಿದೆ ಎಂದರು. ಪತ್ರಕರ್ತ ಮನೋಹರ್‌ ಪ್ರಸಾದ್‌ ಸಂವಾದ ನಿರ್ವಹಿಸಿದರು.

ಮುಂಬೈಯಿಂದ ಆಗಮಿಸಿದ ರವಿಶಾಸ್ತ್ರಿ ಅವರು ಪಾವಂಜೆ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಕರ್ವಾಲಿಗೆ ಆಗಮಿಸಿದರು. ಇಲ್ಲಿನ ವಿಷ್ಟುಮೂರ್ತಿ ದೇವರಿಗೆ ಹೂವಿನ ಪೂಜೆ ಸಲ್ಲಿಸಿ, ನಾಗಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ನಡೆಸಿದರು. ಈ ವೇಳೆ ದೇವಸ್ಥಾನದ ವತಿಯಿಂದ ರವಿಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಕರ್ವಾಲಿಗೆ ಇದು ನನ್ನ 11ನೇ ಭೇಟಿ ಪ್ರತಿ ಭೇಟಿಯೂ ಚೈತನ್ಯದಾಯಕ. ದೇವಸ್ಥಾನ ನವೀಕರಣ ಕಾರ್ಯ ಅತ್ಯಾಕರ್ಷಕವಾಗಿ ಆಗಿದೆ ಎಂದು ವರ್ಣಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಅನಂತಪಟ್ಟಾಭಿ ರಾವ್‌, ಆಡಳಿತ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಕಮಾರ್‌ ಹೆಗ್ಡೆ, ಗೌರವಾಧ್ಯಕ್ಷ ಮನೋಹರ್‌ ಪ್ರಸಾದ್‌, ಜಾರ್ಕಳ ಮೋಹನ್‌ ಹೆಗ್ಡೆ, ಎಚ್.‌ ಯುವರಾಜ ನಾಯಕ್‌, ರಮೇಶ್‌ ರಾವ್‌, ಸತೀಶ್‌ ರಾವ್‌, ಶ್ರೀನಿಧಿ, ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





































error: Content is protected !!
Scroll to Top