ಕಾರ್ಕಳಕ್ಕೆ ಬೇಕು ಸುಸಜ್ಜಿತ ವಾಹನ ಸ್ಟ್ಯಾಂಡ್‌

ಪಾರ್ಕಿಂಗ್‌ ಜಾಗವಿಲ್ಲದೆ ನಿತ್ಯ ಕಿರಿಕಿರಿ- ರಸ್ತೆ ಬದಿ, ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ

ಕಾರ್ಕಳ : ಕಾರ್ಕಳ ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರ. ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಪ್ರವಾಸೋದ್ಯಮ ಮತ್ತಿತರ ವಿಚಾರಗಳಲ್ಲಿ ಕಾರ್ಕಳ ಬಹಳ ವೇಗವಾಗಿ ಅಭಿವೃದ್ಧಿಹೊಂದಿದೆ. ಥೀಂ ಪಾರ್ಕ್‌ಗಳಂಥ ವಿನೂತನ ಯೋಜನೆಗಳು, ಜವಳಿ ಪಾರ್ಕ್‌ನಂಥ ಕೈಗಾರಿಕಾ ಯೋಜನೆಗಳು ಕಾರ್ಕಳಕ್ಕೆ ಬಂದಿವೆ. ಇದಕ್ಕೆ ತಕ್ಕಂತೆ ಕಾರ್ಕಳಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಕಾರ್ಕಳವನ್ನು ಮುಂದಿನ 10 ವರ್ಷವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸುವುದು ತನ್ನ ಗುರಿ ಎಂದು ಕಾರ್ಕಳದ ಶಾಸಕರೂ ಆಗಿರುವ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ಹೇಳುತ್ತಿದ್ದಾರೆ. ಖಂಡಿತ ಈ ರೀತಿಯಾಗಿ ಅಭಿವೃದ್ಧಿ ಹೊಂದಬೇಕಾದ ಎಲ್ಲ ಅರ್ಹತೆ ಮತ್ತು ಅಗತ್ಯ ಕಾರ್ಕಳಕ್ಕೆ ಇದೆ. ಆದರೆ ಅಭಿವೃದ್ಧಿಹೊಂದುತ್ತಿರುವ ನಗರದಲ್ಲಿ ಪಾರ್ಕಿಂಗ್‌ನದ್ದೇ ದೊಡ್ಡ ಸಮಸ್ಯೆ. ಹಾಗೆಂದು ಇದು ಹೊಸ ಸಮಸ್ಯೆಯಲ್ಲ. ಬಹಳ ಕಾಲದಿಂದ ಕಾರ್ಕಳ ಪೇಟೆ ಪಾರ್ಕಿಂಗ್‌ ಸಮಸ್ಯೆಯನ್ನು ಎದುರಿಸುತ್ತಿದೆ. ನಗರದ ಎಲ್ಲೂ ವಾಹನ ಪಾರ್ಕಿಂಗ್‌ಗೆಂದು ಸಮರ್ಪಕವಾದ ಜಾಗ ಇಲ್ಲ. ವಾರದ ಸಂತೆ ನಡೆಯುವ ಶನಿವಾರ ಹಾಗೂ ದೇವಳಗಳ ಉತ್ಸವದ ಸಮಯದಲ್ಲಿ ಕಾರ್ಕಳಕ್ಕೆ ಬಂದವರು ವಾಹನ ಪಾರ್ಕಿಂಗ್‌ ಮಾಡಲು ಪಡುವ ಬವಣೆ ಅಷ್ಟಿಷ್ಟಲ್ಲ. ಆದರೆ ಯಾಕೋ ನಗರಸಭೆಯಾಗಲಿ ಜನಪ್ರತಿನಿಧಿಗಳಾಗಲಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಕಾರ್ಕಳ ಮತ್ತು ಸುತ್ತಮುತ್ತಲಿನ ಊರುಗಳಿಂದ ನಿತ್ಯ ಸುಮಾರು 3 ಸಾವಿರದಷ್ಟು ಜನರು ಹೊರ ಊರುಗಳಿಗೆ ನಿತ್ಯ ಕಾಯಕಕ್ಕಾಗಿ ಬಸ್‌ಗಳಲ್ಲಿ ಹೋಗುತ್ತಾರೆ. ಸಾಣೂರು, ನಿಟ್ಟೆ, ಜಾರ್ಕಳ, ಮುಂಡ್ಲಿ, ಬಜಗೋಳಿ ಮುಂತಾದೆಡೆಗಳಿಂದ ನಿತ್ಯ ದ್ವಿಚಕ್ರ ವಾಹನದಲ್ಲಿ ಬಂದು ಕಾರ್ಕಳದಲ್ಲಿ ಬಸ್‌ ಹತ್ತಿಕೊಂಡು ಹೋಗುವ ನೂರಾರು ಮಂದಿ ಇದ್ದಾರೆ. ಮಂಗಳೂರು, ಮೂಡುಬಿದಿರೆ, ಉಡುಪಿ ಮತ್ತಿತರೆಡೆ ನೌಕರಿಗಾಗಿ ಮತ್ತು ಕಾಲೇಜುಗಳಿಗೆ ಹೋಗುವ ಹೆಚ್ಚಿನವರು ಕಾರ್ಕಳ ಪೇಟೆ ತನಕ ದ್ವಿಚಕ್ರಗಳಲ್ಲಿ ಬರುತ್ತಾರೆ. ಆದರೆ ಕಾರ್ಕಳ ಪೇಟೆಯಲ್ಲಿ ಅವರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಮರ್ಪಕ ಜಾಗವೇ ಇಲ್ಲ.
ಎಲ್ಲೋ ಅಂಗಡಿ ಮುಂಗಟ್ಟುಗಳ ಎದುರು, ಮನೆ ಬಾಗಿಲಲ್ಲಿ, ಗಲ್ಲಿಗಳ ಒಳಗೆ, ಪೆಟ್ರೋಲು ಪಂಪ್‌ಗಳಲ್ಲಿ ಮಳೆ ಬಿಸಿಲಿಗೆ ವಾಹನಗಳನ್ನು ನಿಲ್ಲಿಸಿ ಹೋಗಬೇಕಾದ ಅನಿವಾರ್ಯತೆ ಇದೆ.

ಈ ದ್ವಿಚಕ್ರ ವಾಹನಗಳಿಗೆ ಕಾರ್ಕಳ ಬಸ್‌ ನಿಲ್ದಾಣದ ಆಸುಪಾಸಿನಲ್ಲೇ ಎಲ್ಲಾದರೂ ಸುಸಜ್ಜಿತ ಪಾರ್ಕಿಂಗ್‌ ಸೌಲಭ್ಯ ಮಾಡಿಕೊಡುವುದು ಜರೂರಾಗಿ ಆಗಬೇಕಾದ ಕಾರ್ಯ. ಇದರಿಂದ ದ್ವಿಚಕ್ರ ವಾಹನಗಳೂ ಸುರಕ್ಷಿತವಾಗಿರುತ್ತವೆ ಮತ್ತು ನಗರವೂ ವ್ಯವಸ್ಥಿತವಾಗಿರುತ್ತದೆ. ಬೈಲೂರು, ಬೆಳ್ಮಣ್‌ಗಳಂಥ ಚಿಕ್ಕ ಪೇಟೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ಕಾರ್ಕಳದಂಥ ದೊಡ್ಡ ಪೇಟೆಯಲ್ಲಿ ಇಂಥ ಸೌಲಭ್ಯ ಇಲ್ಲ.
ಹಿಂದೆ ಉಡುಪಿ ಕಡೆ ಹೋಗುವ ಬಸ್‌ಗಳು ನಿಲ್ಲುತ್ತಿದ್ದ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಸ್ಟ್ಯಾಂಡ್‌ ನಿರ್ಮಿಸಿದರೆ ಬಹಳ ಅನುಕೂಲವಾಗುತ್ತದೆ. ಅಲ್ಲೇ ಪಕ್ಕದಲ್ಲಿ ಸರ್ವಿಸ್‌ ಬಸ್‌ ನಿಲ್ದಾಣ ಇರುವುದರಿಂದ ಹೋಗಿ ಬರುವವರಿಗೆ ಸುಲಭವಾಗುತ್ತದೆ. ಕನಿಷ್ಠ 300 ದ್ವಿಚಕ್ರ ವಾಹನಗಳು ನಿಲ್ಲುವಷ್ಟು ವಿಶಾಲವಾಗಿರುವ ದ್ವಿಚಕ್ರ ಸ್ಟ್ಯಾಂಡ್‌ ಕಾರ್ಕಳಕ್ಕೆ ಅಗತ್ಯವಿದೆ.
ನಿತ್ಯ ಕಾರ್ಕಳದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಮುಂದಿನ 10 ವರ್ಷದಲ್ಲಿ ವಾಹನಗಳ ಸಂಖ್ಯೆ ಈಗಿರುವುದಕ್ಕಿಂತ ದುಪ್ಪಟ್ಟು ಆಗಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ದೊಡ್ಡದಾದ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವುದು ಅಪೇಕ್ಷಿತ.

ಸಾಮಾನ್ಯ ಸಭೆಯಲ್ಲಿ ಚರ್ಚೆ
ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಪುರಸಭೆಯ ವ್ಯಾಪ್ತಿಯಲ್ಲಿ ಮಾಡಬೇಕೆನ್ನುವ ಕುರಿತು ಚರ್ಚೆ ನಡೆಸಲಾಗಿದೆ. ಸ್ಥಳ ಎಲ್ಲಿ ಅಂತ ಇನ್ನು ನಿಗದಿಯಾಗಿಲ್ಲ. ಈ ಕುರಿತಂತೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸುಮಾ ಕೇಶವ್
ಕಾರ್ಕಳಪುರಸಭೆ ಅಧ್ಯಕ್ಷೆ

ಶುಲ್ಕ ತೆಗೆದುಕೊಳ್ಳಿ
ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಾರ್ಕಳದಲ್ಲಿ ಇದಕ್ಕೆ ಪೂರಕವಾಗಿ ಪಾರ್ಕಿಂಗ್ ವ್ಯವಸ್ಥೆ ಅಗತ್ಯವಿದೆ. ಸರಕಾರ ಪಾರ್ಕಿಂಗ್ ಸ್ಥಳಕ್ಕೆ ಇಂತಿಷ್ಟು ಶುಲ್ಕ ನಿಗದಿಪಡಿಸಿ ಸುರಕ್ಷತೆ ದೃಷ್ಟಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು.
ವಿನ್ಸೆಂಟ್, ಸ್ಥಳೀಯರು

ಪಾದಚಾರಿಗಳಿಗೆ ಅಡಚಣೆ
ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದರಿಂದ ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸುತ್ತಾರೆ. ಪ್ರಮುಖವಾಗಿ ಮೂರು ಮಾರ್ಗದಲ್ಲಿ ಮಂಗಳೂರು ಕಡೆ ಸಾಗುವ ರಸ್ತೆಯ ಫುಟ್‌ಪಾತ್‌ನಲ್ಲಿ ವಾಹನಗಳ ಪಾರ್ಕಿಂಗ್‌ ಮಾಡುತ್ತಿದ್ದು ಪಾದಚಾರಿಗಳ ಓಡಾಟಕ್ಕೆ ಅಡಚಣೆಯಾಗುತ್ತಿದೆ. ವಾಹನಗಳು ಮಾತ್ರವಲ್ಲದೆ ಅಂಗಡಿಗಳ ಬೋರ್ಡ್‌ಗಳು, ಅಂಗಡಿಯ ಸಾಮಾಗ್ರಿಗಳು, ತರಕಾರಿ ಬುಟ್ಟಿಗಳನ್ನು ತೀರಾ ರಸ್ತೆಗೆ ಸಮೀಪವಾಗಿ ಇಡುತ್ತಿದ್ದು ಇದರಿಂದಾಗಿ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ ಈ ಕುರಿತು ಸಂಬಂಧ ಪಟ್ಟ ಆಡಳಿತ ವ್ಯವಸ್ಥೆ, ಕ್ಷೇತ್ರದ ಜನಪ್ರತಿನಿಧಿಗಳು ಕೂಡಲೇ ಗಮನಹರಿಸಬೇಕಾಗಿದೆ.
-ಪ್ರಕಾಶ್‌ ರಾವ್‌
ಪುರಸಭೆಯ ಮಾಜಿ ಸದಸ್ಯ

ನಿತ್ಯ ಕಿರಿಕಿರಿ
ನಾವು‌ ಮುಂಡ್ಲಿಯಿಂದ ಕಾರ್ಕಳ ತನಕ ಬೈಕ್‌ನಲ್ಲಿ ಬಂದು ಬೈಕ್‌ ಇಲ್ಲಿ ಇಟ್ಟು ಮಣಿಪಾಲಕ್ಕೆ ಉದ್ಯೋಗಕ್ಕೆ ಹೋಗುತ್ತೇವೆ. ಬೈಕ್‌ ನಿಲ್ಲಿಸಲು ಸರಿಯಾದ ಜಾಗ ಇಲ್ಲದೆ ಸಮಸ್ಯೆಯಾಗುತ್ತಿದೆ. ಅಂಗಡಿ, ಹೋಟೆಲ್‌ ಮುಂದೆ ನಿಲ್ಲಿಸಿ ಹೋಗಬೇಕಾಗುತ್ತದೆ. ಇದು ಕೆಲವೊಮ್ಮೆ ಕಿರಿಕಿರಿಗೂ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ನಮ್ಮ ಶಾಸಕರು ಮತ್ತು ಪುರಸಭೆ ಪರಿಹರಿಸಬೇಕು.
-ರಕ್ಷಿತ್‌ ಮತ್ತು ಪ್ರಸಾದ್
ಸ್ಥಳೀಯರು


✒️ ಜ್ಯೋತಿ ರಮೇಶ್‌/ ನಳಿನಿ ಎಸ್. ಸುವರ್ಣ





























































































































error: Content is protected !!
Scroll to Top