ಕಾರ್ಕಳ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಧಾರ್ಮಿಕ ಸಭೆ : ಶ್ರೀದೇವಿ ಕೃಪಾಕಟಾಕ್ಷದಿಂದ 9 ತಿಂಗಳಲ್ಲೇ ನವೀಕರಣ ಪೂರ್ಣ – ಸುನೀಲ್‌ ಕುಮಾರ್‌

ಕಾರ್ಕಳ : ಮಾರಿಯಮ್ಮ ದೇವಿಯ ಆಲಯ ಕೇವಲ 9 ತಿಂಗಳಲ್ಲೇ ಪೂರ್ಣಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತಿರುವುದು ದೇವಿಯ ಕೃಪೆಯಿಂದಾಗಿ. ಮುಷ್ಟಿ ಕಾಣಿಕೆಯ ಸಂದರ್ಭದಲ್ಲಿ ಎಲ್ಲರೂ ನಿರ್ಧರಿಸಿದಂತೆ ಮಾರ್ಚ್‌ ತಿಂಗಳಿನಲ್ಲಿಯೇ ಬ್ರಹ್ಮಕಲಶೋತ್ಸವ ನೆರವೇರಿಸಬೇಕೆಂದುಕೊಂಡ ಹಂಬಲವನ್ನು ಶ್ರೀದೇವಿಯ ಅನುಗ್ರಹದಿಂದಾಗಿ ಇಂದು ನೆರವೇರಿದೆ. ಭಕ್ತ ಜನರ ಸಹಕಾರದಿಂದಾಗಿ ದೇವಿಗೆ ಬಂಗಾರದ ಕಲಶ, ಬಾಗಿಲು ನಿರ್ಮಾಣವಾಗಿದೆ ಎಂದು ಸಚಿವ ಸುನೀಲ್‌ ಕುಮಾರ್‌ ಹೇಳಿದರು.
ಅವರು ಗುರುವಾರ ಕಾರ್ಕಳ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಾರಿಯಮ್ಮ ದೇವಿಯ ದೇಗುಲದ ಬ್ರಹ್ಮಕಲಶದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮುಂದಿನ 3, 4 ತಿಂಗಳೊಳಗೆ ಇಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಾಣವಾಗಲಿದೆ. ಮುಂಬರುವ ದಿನಗಳಲ್ಲಿ ತಾಲೂಕಿನ ದೇಗುಲ ಜೀರ್ಣೊದ್ಧಾರ ಕಾರ್ಯಕ್ರಮಕ್ಕೆ ಮರದ ಅವಶ್ಯಕತೆ ಇರುವುದರಿಂದ ಅದಕ್ಕೆ ಯಾವುದೇ ರೀತಿಯ ಕೊರತೆಯಾಗ ಬಾರದು ಎನ್ನುವ ನಿಟ್ಟಿನಲ್ಲಿ ಕುಂಬ್ರಪದವು ಅರಣ್ಯ ಪ್ರದೇಶದಲ್ಲಿ ನಾಳೆ 500 ಗಿಡಗಳನ್ನು ನೆಡಲಾಗುವುದು ಮತ್ತು ಇದರ ಜವಾಬ್ದಾರಿಯನ್ನು ದೇವಾಲಯದ ಆಡಳಿತ ಮಂಡಳಿ ವಹಿಸಿಕೊಳ್ಳುವುದು ಎಂದರು.

ಕಾರ್ಕಳದ ಹದಿನೈದು ದೇವಾಲಯಗಳ ಆಡಳಿತ ಮೊಕ್ತೇಸರರು ಒಂದೇ ವೇದಿಕೆಯಲ್ಲಿ

ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ. ಗೋಪಾಲಕೃಷ್ಣ ರಾವ್‌, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಿಜಯ ಶೆಟ್ಟಿ, ಹಿರಿಯಂಗಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ್‌ ಶೆಟ್ಟಿ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್‌, ಮನ್ನಾರ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ ರಾವ್, ದತ್ತಾತ್ರೇಯ ಶ್ರೀ ಮೂಕಾಂಬಿಕ ದೇಗುಲದ ಆಡಳಿತ ಮೊಕ್ತೇಸರ ದಿವಾಕರ ಶೆಟ್ಟಿ, ಶಿರ್ಡಿ ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ ಚಂದ್ರಹಾಸ ಸುವರ್ಣ, ತೆಳ್ಳಾರು ರಾಘವೇಂದ್ರ ಮಠದ ಆಡಳಿತ ಮೊಕ್ತೇಸರ ರಮಣ ಆಚಾರ್‌, ಬಾಲಾಜಿ ಶಿಬಿರದ ಗುರೂಜಿ ಬಾಲಕೃಷ್ಣ ಹೆಗ್ಡೆ, ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಯ ಶೆಟ್ಟಿಗಾರ್‌, ಮೂಡುಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್‌ ಶೆಣೈ, ರವಳನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಟಿ. ಸುಧಾಕರ ಪ್ರಭು, ಕಾಬೆಟ್ಟು ವೇಣುಗೋಪಾಲ ದೇವಸ್ಥಾನ ಆಡಳಿತ ಮೊಕ್ತೇಸರ ಸಂದೇಶ್‌ ಉಪಾಧ್ಯಾಯ, ಸಿದ್ದಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ವಿಘ್ನೇಶ್‌ ಪಾಠಕ್‌, ಕುಂಟಲ್ಪಾಡಿ ಅಂಬಾಭವನಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಬುರಾಯ ಶೆಣೈ, ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ಸುಧಾ ರಾಣೆ ಒಟ್ಟು ಕಾರ್ಕಳದ ಹದಿನೈದು ದೇವಾಲಯಗಳ ಆಡಳಿತ ಮೊಕ್ತೇಸರರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ವಸಂತ ಎಂ. ಸ್ವಾಗತಿಸಿ, ವೇದಿಕೆ ಸಂಚಾಲಕ, ಶಿಕ್ಷಕ ಸಂಜಯ್‌ ನಿರೂಪಿಸಿದರು. ನಿವೃತ್ತ ಶಿಕ್ಷಕಿ ಸುಲೋಚನಾ ವಂದಿಸಿದರು.

ತರಕಾರಿಯಿಂದಲೇ ಶೃಂಗಾರ
ಸೌತೆ ಕಾಯಿ, ಶುಂಠಿ, ಟೊಮೆಟೋ, ಬಟಾಟೆ, ಜೋಳ, ಕುಂಬಳಕಾಯಿ, ಬಾಳೆ ಗೊನೆ, ಮೂಲಂಗಿ, ಬದನೆ, ಕ್ಯಾರೆಟ್ ಮೊದಲಾದ ತರಕಾರಿಯಿಂದಲೇ‌ ದೇಗುಲವನ್ನು ಅಲಂಕಾರಗೊಳಿಸಲಾಗಿತ್ತು. ಕಂಬಗಳನ್ನು ಜೋಳ, ಕಬ್ಬು, ಭತ್ತದ ತೆನೆಯಿಂದ ಶೃಂಗಾರಗೊಳಿಸಲಾಗಿತ್ತು. ಹೊರೆಕಾಣಿಕೆಯಲ್ಲಿ ಕಾರ್ಕಳದ ಮೂಲೆ ಮೂಲೆಯಿಂದ ಭಾರಿ ದೊಡ್ಡ ಪ್ರಮಾಣದಲ್ಲಿ ತರಕಾರಿ ಹರಿದುಬಂದಿತ್ತು. ನಾಳೆ ವಿಶೇಷವಾಗಿ ವಿವಿಧ ಹಣ್ಣುಹಂಪಲುಗಳಿಂದ ದೇವಾಲಯವನ್ನು ಶೃಂಗಾರ ಗೊಳಿಸಲಾಗುವುದು. ಅಲಂಕಾರಿತ ದೇವಾಲಯವನ್ನು ಊರ ಪರ ಊರ ಜನಸಾಗರವೇ ಕಾರ್ಕಳದ ಮಾರಿಯಮ್ಮ ದೇವಾಲಯದ ವಿಜೃಂಭಣೆಯನ್ನು ಕಣ್ತುಂಬಿಕೊಂಡರು. ಧಾರ್ಮಿಕ ಸಭೆಯ ಬಳಿಕ ತೆಲಿಕೆದ ಬೊಳೀ ಡಾ| ದೇವದಾಸ್‌ ಕಾಪಿಕಾಡ್‌ ಅವರ ತಂಡದವರಿಂದ ನಾಯಿದ ಬೀಲ ನಾಟಕ ಪ್ರದರ್ಶನಗೊಂಡಿತು.





























































































































error: Content is protected !!
Scroll to Top