ಇದೇ ಉಮಿಕಲ್ ಬೆಟ್ಟದಲ್ಲಿ ಶೂಟಿಂಗ್ ಆಗಿತ್ತು ಆ ತುಳು ಚಿತ್ರ
ಅಭಿವೃದ್ಧಿಯ ಹರಿಕಾರ, ದೂರದೃಷ್ಟಿ ಯೋಜನೆಯ ರೂವಾರಿ, ಅದ್ಭುತ ಕಲ್ಪನೆಗಾರ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರ ಕನಸಿನ ಕೂಸು ಪರಶುರಾಮ ಥೀಮ್ ಪಾರ್ಕ್.
ಸ್ಥಳೀಯ ಭಾಷೆಯಲ್ಲಿ ಉಮಿಕಲ್ ಕುಂಜ ಎಂದೇ ಪ್ರಖ್ಯಾತವಾಗಿರುವ ಈ ಪ್ರದೇಶ ಹಿಂದೆ ಬೈಲೂರಿನ ಜನರು ದನಗಳನ್ನು ಮೇಯಿಸುವ ಮತ್ತು ಕೊಟ್ಟಿಗೆಗೆ ಸೊಪ್ಪು ತರುವ ಪ್ರದೇಶವಾಗಿತ್ತು. ಇಲ್ಲಿನ ಅವಿನಾಭಾವ ಸಂಬಂಧವನ್ನು ಹೊಂದಿರುವ ಹಿರಿಯರನ್ನು ಮಾತನಾಡಿಸಿದಾಗ ತಿಳಿಯಿತು ವಿಶೇಷ ಸಂಗತಿ.

ಬೈಲೂರು ಪರಶುರಾಮ ಥೀಮ್ ಪಾರ್ಕ್ ಇರುವ ಉಮಿಕಲ್ ಬೆಟ್ಟದ ರೋಚಕ ಇತಿಹಾಸವನ್ನು ಕೆದಕ್ಕುತ್ತಾ ಸಾಗಿದಂತೆ ಇಲ್ಲಿನ ಸ್ಥಳೀಯ ನಿವಾಸಿಗಳು ಮೊದಲು ನೆನಪಿಸುವುದು ತುಳುನಾಡಿನಲ್ಲಿ ತಮ್ಮ ಕಾರಣಿಕ ಶಕ್ತಿಯನ್ನು ಮೆರೆದ ಅವಳಿ ವೀರರ ಕಥೆಯನ್ನಾಧಾರಿತ ಮೊದಲ ಐತಿಹಾಸಿಕ ತುಳು ಚಲನಚಿತ್ರ ‘ಕೋಟಿ-ಚೆನ್ನಯ’ವನ್ನು. ಈ ಸಿನೆಮಾಕ್ಕೆ ಈ ವರ್ಷ ಸುವರ್ಣ ಮಹೋತ್ಸವದ ಸಂಭ್ರಮ ಎಂಬುದು ಕೂಡ ಕಾಕತಾಳೀಯ.
ಇಂದು ನಾಡಿನಲ್ಲಿ ಪ್ರವಾಸಿ ತಾಣವಾಗಿ ಸುದ್ದಿ ಮಾಡಲು ಹೊರಟಿರುವ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ 1973ರಲ್ಲಿ ತೆರೆಕಂಡ ಕಟಪಾಡಿ ಮುದ್ದು ಸುವರ್ಣ ನಿರ್ಮಾಣದ ಮತ್ತು ವಿಷ್ಣುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ‘ಕೋಟಿ ಚೆನ್ನಯ’ ಸಿನೆಮಾದಲ್ಲಿ ಬರುವ ಯುದ್ಧದ ಕೊನೆಯ ದೃಶ್ಯವನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಸ್ಥಳೀಯ ನಿವಾಸಿ ಊರಿನ ಮುಖಂಡರಾದ ಕರುಣಾಕರ್ ಹೆಗ್ಡೆ ಸ್ಮರಿಸಿಕೊಳ್ಳುತ್ತಾರೆ. ಈ ಸಿನೆಮಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಈಗಲೂ ವೀಕ್ಷಿಸಬಹುದು.

ಬೈಲೂರು ಬಂಟ್ರಾಕ್ಯಾರ್ ಫೈಟರ್ ಶೆಟ್ಟಿ ಅಭಿನಯಿಸಿದ್ದರು
ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಖಳನಾಯಕ ಮತ್ತು ಸ್ಟಂಟ್‌ಮ್ಯಾನ್ ಎಂದು ಗುರುತಿಸಿಕೊಂಡಿರುವ ಫೈಟರ್ ಶೆಟ್ಟಿ ಅರ್ಥಾತ್ ಮುದ್ದು ಬಾಬುಶೆಟ್ಟಿ ಈ ದೃಶ್ಯದಲ್ಲಿ ನಟಿಸಿದ್ದರು. ಅವರು ಇಂದಿನ ಬಾಲಿವುಡ್ ನಿರ್ಮಾಪಕ ರೋಹಿತ್ ಶೆಟ್ಟಿಯವರ ತಂದೆ. ಅವರ ಮೂಲಮನೆ ಪಳ್ಳಿಯ ಎಡ್ಮೇರು ನಾಲ್ಕು ಬೀದಿ ಬೆಳಿಂಜಾಲೆ ಶೆಟ್ಟಿ ನಿವಾಸ. ಈ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಅವರು ತನ್ನ ತಂದೆಯ ಮನೆಯಾದ ಬೈಲೂರು ಬಂಟ್ರಾಕ್ಯಾರ್‍ನಲ್ಲಿ ತಂಗಿದ್ದರು ಎಂದು ಮನೆಯ ಹಿರಿಯರಾದ ಸೂರ್ಯಣ್ಣ ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.
ಮೊದಲ ಇತಿಹಾಸಾಧಾರಿತ ತುಳು ಸಿನೆಮಾ ಕೋಟಿ-ಚೆನ್ನಯ 1973ರಲ್ಲಿ ತೆರೆಕಂಡಿತ್ತು. ಈ ಸಿನಿಮಾದ ಎಕ್ಕಸಕ್ಕ ಹಾಡು ಇಂದಿಗೂ ತುಳುನಾಡಿನಾದ್ಯಂತ ಜನಪ್ರಿಯವಾಗಿದೆ. ಈ ಹಾಡಿಗೆ ವಿದ್ವಾಂಸರಾದ ಬಿ.ಎ.ವಿವೇಕ್ ರೈ ಸಾಹಿತ್ಯ ಬರೆದಿದ್ದು, ವಿಜಯ್ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆಯನ್ನು ಗಾನಕೋಗಿಲೆ ಎಸ್.ಜಾನಕಿ ಹಾಡಿ, ಮಿನುಗುತಾರೆ ಕಲ್ಪನಾ ಅಭಿನಯಿಸಿದ್ದರು ಎಂಬುದು ವಿಶೇಷ.
ಕಲ್ಪನೆಗೂ ಮೀರಿದ ಯೋಚನಾ ಶಕ್ತಿ

ತನ್ನ ಹೊಸಹೊಸ ಯೋಜನೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಶಾಸಕರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ತಿರುಗಾಡಿ ದುಡಿದ ಫಲವೇ ಬೈಲೂರಿನ ಪರಶುರಾಮ ಥೀಮ್ ಪಾರ್ಕ್. ಸ್ವತಃ ಬೈಲೂರಿನವರೇ ಯೋಚಿಸದ, ಕಲ್ಪನೆಗೂ ಮೀರಿದ ಈ ಒಂದು ಹೆಮ್ಮೆಯ ಯೋಜನೆ ಶಾಸಕರಲ್ಲಿ ಮೂಡಿ ಇಂದು ನನಸಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಊರಗಣ್ಯರಾದ ಗುತ್ತುಮನೆ ಪ್ರಶಾಂತ್ ಕುಮಾರ್ ಇವರು ಹರ್ಷವ್ಯಕ್ತ ಪಡಿಸುತ್ತಾರೆ. ಶಾಸಕರ ದೂರದೃಷ್ಟಿ ಯೋಜನೆಯ ಫಲವೋ ಅಥವಾ ಕಾಲಚಕ್ರ ನಿರ್ಣಯವೂ ಎಂಬಂತೆ ಇಂದು ಇಲ್ಲಿ ತುಳುನಾಡ ಸೃಷ್ಟಿಕರ್ತ ಪರಶುರಾಮನ ಭವ್ಯವಾದ ಥೀಮ್ ಪಾರ್ಕ್ ತಲೆ ಎತ್ತಿ ನಿಂತಿದೆ. ಶಾಸಕರ ಇಂತಹ ಇನ್ನಷ್ಟು ಯೋಜನೆಗಳು ನಾಡಿಗೆ ಸಿಗುವಂತಾಗಲಿ ಎಂದು ಆಶಿಸುತ್ತಾ ಅವರ ಅದಮ್ಯ ಚಿಂತನೆಗೊಂದು ನಮ್ಮ ಸಲಾಮ್.
ಶೈಲೇಶ್ ಶೆಟ್ಟಿ ಬೈಲೂರು






















