ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

ಉಡುಪಿ : “ಕೋರ್ಟ್​ಗೆ ಹೋಗ್ತಿ, ಆದರೆ ನಿನ್ನ ತೀರ್ಮಾನ ಮೆಟ್ಲಲ್ಲಿ ನಾನು ಮಾಡುತ್ತೇನೆ” ಎಂದು ಪಂಜುರ್ಲಿ ದೈವ ನುಡಿಯುತ್ತದೆ, ಆದರೂ ಇದನ್ನು ಲೆಕ್ಕಿಸದೆ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ರಕ್ತಕಾರಿ ಸಾವನ್ನಪ್ಪುತ್ತಾನೆ. ಇದು ಕನ್ನಡದ ಸೂಪರ್ ಹಿಟ್ ಮೂವಿ ಕಾಂತಾರ ಸಿನಿಮಾದ ರೀಲ್ ಸ್ಟೋರಿ. ಆದರೆ ಉಡುಪಿಯಲ್ಲಿ ಇದೇ ರೀತಿಯ ನೈಜ ಘಟನೆಯೊಂದು ನಡೆದಿದೆ. ಉಡುಪಿ ಜಿಲ್ಲೆಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದಲ್ಲಿ ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ದೈವದ ತಂಬಿಲ ಸೇವೆ ಸಂದರ್ಭದಲ್ಲಿ ಸ್ಥಾನದ ಎದುರೇ ಕುಸಿದುಬಿದ್ದು ಸಾವನ್ನಪ್ಪಿದ್ದು, ಊರ ಜನ ಮೂಕ ವಿಸ್ಮಿತರಾಗಿದ್ದಾರೆ.
ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ. ಈ ನೇಮದಲ್ಲಿ ಸಮಸ್ತ ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದ್ದು, ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದ ಪ್ರಕಾಶ್ ಶೆಟ್ಟಿ ಅಧಿಕಾರದ ಲಾಲಸೆಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ್ದು, ಇಲ್ಲಿಯ ಭಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿ, 9 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸುತ್ತಾರೆ.
ವರ್ಷಂಪ್ರತಿಯಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಆಶ್ಚರ್ಯದ ಸಂಗತಿ ಎಂದರೆ ಡಿ. 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿ. 24 ರಂದು ಕೊಡಮಣಿತ್ತಾಯ ದೈವದ ತಂಬಿಲ ಸೇವೆ ಸಂದರ್ಭ ಎಲ್ಲರೆದುರೇ ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ವಕೀಲ ಬಿ. ನಾಗರಾಜ್, ಕೋರ್ಟ್​ನಲ್ಲಿ ವಾದ ಮಂಡಿಸಿ ತಡೆಯಾಜ್ಞೆಯನ್ನು ತೆರವು ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
ದೈವ ನರ್ತಕರಿಗೆ ಬೆದರಿಕೆ ಹಾಕಿದ ಪ್ರಕಾಶ್ ಶೆಟ್ಟಿ ಮತ್ತು ತಂಡ
ಜಾರಂದಾಯ ಅಪ್ಪಣೆಯಂತೆ ದೈವ ನರ್ತಕನಾಗಿ ಕೆಲಸ ಮಾಡುತ್ತಿದ್ದಾಗ ಪ್ರಕಾಶ್ ಶೆಟ್ಟಿ, ಕೇಶವ ಪೂಜಾರಿ ಮತ್ತು ಮೋಹನ್ ಅಮಿನ್ ಅವರು ಹಣದ ಆಮಿಷ ಹಾಕಿ ನಾವು ಹೇಳಿದ ಹಾಗೆ ನುಡಿ ಕೊಡಬೇಕು ಎಂದು ಹೇಳಿ ಬೆದರಿಸಿದ್ದಾರೆ ಮತ್ತು ನೀನು ಹೇಗೆ ಕೋಲ ಕಟ್ಟುತ್ತೀ ಎಂದು ನನಗೆ ಬೆದರಿಕೆ ಹಾಕಿದ್ದಾರೆ ಎಂದು ದೈವನರ್ತಕ ಭಾಸ್ಕರ ಬಂಗೇರ ಹೇಳಿದ್ದಾರೆ.
ಜನವರಿ 7ಕ್ಕೆ ನಡೆಯಬೇಕಿದ್ದ ನೇಮೋತ್ಸವವನ್ನು ದೈವಸ್ಥಾನ‌ ಸಮಿತಿ‌ ಜಯ ಪೂಜಾರಿ ದೈವದೀನರಾದ ಕಾರಣಕ್ಕೆ ಮುಂದೂಡಿದೆ. ಆದರೆ ಹಠ ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ.7 ರಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿದೆ. ಕೋರ್ಟ್​​ನಲ್ಲಿ ತಡೆಯಾಜ್ಞೆ ತೆರವಾಗಿದ್ದರೂ ಊರವರ ವಿರುದ್ಧ ಹೊರಟಿರುವ ಪ್ರಕಾಶ್ ಶೆಟ್ಟಿ ಮತ್ತು ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಊರ ಸಮಸ್ತರು ಸಭೆ ಸೇರಿ 500 ವರ್ಷಗಳ ಇತಿಹಾಸ ಇರುವ ಜಾರಂದಾಯ ಬಂಟ ಸೇವಾ ಸಮಿತಿ ಮಾಡುವ ನಿರ್ಣಯಕ್ಕೆ ಬದ್ಧ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಪಡುಬಿದ್ರೆ ಪೊಲೀಸ್ ಠಾಣೆ ಮೆಟ್ಟಿಲೇರಿದ ದೈವಕೋಲ ವಿವಾದ
ಪಡುಹಿತ್ಲು ಗ್ರಾಮದಲ್ಲಿ ದೈವಕೋಲ ನಡೆಸುವ ವಿವಾದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಜಯ ಪೂಜಾರಿ ಸಾವು ಹಿನ್ನಲೆ ವಿವಾದವು ಇದೀಗ ಪಡುಬಿದ್ರೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರ ಸಮ್ಮುಖದಲ್ಲಿ ನಿನ್ನೆ ತಡರಾತ್ರಿಯವರೆಗೂ ಸಂಧಾನ ಸಭೆ ನಡೆದಿದ್ದು, ಸಂಧಾನ ವಿಫಲವಾಗಿದೆ. ಇಂದು ಕೋಲ ನಡೆಸಲು ಟ್ರಸ್ಟ್ ತೀರ್ಮಾನ ಮಾಡಿದರೆ, ಸಮಿತಿಯು ಕೋಲ ನಡೆಸದಂತೆ ಪಟ್ಟು ಹಿಡಿದಿದೆ.
ದೈವಸ್ಥಾನದ ಸುತ್ತಾಮುತ್ತಾ ಪೊಲೀಸ್ ಬಂದೋಬಸ್ತ್
ಟ್ರಸ್ಟ್ ಮತ್ತು ಸಮಿತಿ ನಡುವಿನ ಜಟಾಪಟಿ ಹಿನ್ನಲೆ ಜಾರಂದಾಯ ದೈವಸ್ಥಾನದ ಸುತ್ತಾಮುತ್ತಾ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಯಾ ಪೂಜಾರಿ ಸಾವಿನ ಸೂತಕ ಹಿನ್ನಲೆ ಕೋಲ ನಡೆಸದಿರಲು ತೀರ್ಮಾನಿಸಲಾಗಿದೆ. ಆದರೆ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕೋಲ ನಡೆಸಲು ಮುಂದಾಗಿದ್ದಾರೆ. ನಿನ್ನೆ ರಾತ್ರಿ ನಡೆದ ಸಂಧಾನಸಭೆಯೂ ವಿಫಲಗೊಂಡ ಪರಿಣಾಮ ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣಗೊಂಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.











































error: Content is protected !!
Scroll to Top