ಬೆಂಗಳೂರು : ಕೋಟಿ ಕುಬೇರ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿದೆ. ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರನ್ನು ಅಮಾನತುಗೊಳಿಸಿ ಕೆಪಿಸಿಸಿ ಶಿಸ್ತು ಸಮಿತಿ ಜ.6ರಂದು ಆದೇಶ ಹೊರಡಿಸಿದೆ. ಕೆಜಿಎಫ್ ಬಾಬು ನಡೆಯಿಂದ ಈ ಹಿಂದೆ ನೀಡಲಾಗಿದ್ದ 3 ಶೋಕಾಸ್ ನೋಟಿಸ್ಗೆ ಉತ್ತರ ನೀಡಿರಲಿಲ್ಲ. ಇದೀಗ ಅಂತಿಮವಾಗಿ ಪಕ್ಷದಿಂದ ಅಮಾನತು ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಮುಖ್ಯಸ್ಥ ರಹಮಾನ್ ಖಾನ್ ಆದೇಶಿಸಿದ್ದಾರೆ.
ಕಾಂಗ್ರೆಸ್‌ನವರು ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 80 ಸೀಟ್ ಬರಲ್ಲ ಎಂದ ಕೆಪಿಸಿಸಿ ಕಚೇರಿಯಲ್ಲೇ ಕೆಜಿಎಫ್ ಬಾಬು ಹೇಳಿಕೆ ನೀಡಿದ್ದ ಹಿನ್ನೆಲೆಯಿಂದ ಕೆಜಿಎಫ್ ಬಾಬು ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬು ಹಾಗೂ ಕಾಂಗ್ರೆಸ್ ಮುಖಂಡ ಮನೋಹರ್ ನಡುವೆ ಕೆಪಿಸಿಸಿ ಕಚೇರಿಯಲ್ಲಿ ಜಟಾಪಟಿ ನಡೆದಿತ್ತು.
ಕೆ.ಜಿ.ಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್. ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿ. ತನ್ನ ಆಸ್ತಿ 1,741 ಕೋಟಿ ಎಂದು ಘೋಷಿಸಿಕೊಂಡು ದೇಶಾದ್ಯಂತ ಸುದ್ದಿ ಮಾಡಿದ್ದ ವ್ಯಕ್ತಿ ಇವರು. ಆದರೆ ಇದೀಗ ಈ ಕುಬೇರ ಕಾಂಗ್ರೆಸ್ ಪಾಲಿಗೆ ತಲೆನೋವಾಗಿದ್ದಾರೆ.
ಕೋಟಿ ಕುಬೇರ ಕೆಜಿಎಫ್ ಬಾಬುನನ್ನು ಪಕ್ಷದಿಂದ ಅಮಾನತು ಮಾಡಿದ ಕಾಂಗ್ರೆಸ್





















