ನಿಟ್ಟೆ : ಸೆಮಫೋರ್-23 ಟೆಕ್ ಫೆಸ್ಟ್ ಉದ್ಘಾಟನೆ

ದೇಶದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಕಲಿಕೆ ಅವಶ್ಯ – ಹೇಮಂತ್ ಕುಮಾರ್

ನಿಟ್ಟೆ: ಅಂತಾರಾ‌ಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಚಾರಗಳನ್ನು ವಿಮರ್ಷಿಸುವ ಇಂಟರ್ ನ್ಯಾಷನಲ್ ಮೊನಿಟರಿ ಫಂಡ್ (ಐಎಂಎಫ್)ನ ಅಧ್ಯಯನದ ಪ್ರಕಾರ ಭಾರತವು ಉತ್ತಮ ಭವಿಷ್ಯವನ್ನು ಹೊಂದಿರುವ ದೇಶವಾಗಿದೆ. ನಿರಂತರ ಕಲಿಕೆ ಹಾಗೂ ವಿವಿಧ ವಿಷಯಗಳ ಬಗೆಗೆ ಆಸಕ್ತಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಫಿಡಿಲಿಟಿ ಇನ್ವೆಸ್ಟ್ಮೆಂಟ್ಸ್ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.

ಅವರು ಜ.5 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಟೆಕ್ ಉತ್ಸವ ಸೆಮಫೋರ್ -2023ನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಸೇತುವಿನಂತಹ ಆಪ್ ಮೂಲಕ ಕೋವಿಡ್ ಲಸಿಕೆಯ ಮಾಹಿತಿ ಬಿತ್ತರಿಕೆ ವಿಶ್ವದಲ್ಲೇ ಮೊದಲ ಪ್ರಯತ್ನವಾಗಿದ್ದು ಇದರ ಯಶಸ್ಸು ಈ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಸ್ತುತ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಓರ್ವ ಉದ್ಯೋಗಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಲು ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ಅರಿತಿರುವುದು ಅವಶ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ನಿಟ್ಟೆ ಸಂಸ್ಥೆಯ ಎಂ.ಸಿ.ಎ ವಿಭಾಗವು ಕಳೆದ ಇಪ್ಪತ್ತು ವರ್ಷಗಳಿಂದ ನಡೆಸುತ್ತಾ ಬಂದಿರುವ ಈ ಉತ್ಸವವು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ವಿಫುಲವಾದಂತೆ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳನ್ನು ಸನ್ನದ್ಧರನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಮೌಲ್ಯಾಧಾರಿತ, ಹಣಕಾಸಿನ ವಿನಿಯೋಗ ಹಾಗೂ ತಂತ್ರಾಂ‌ಶಗಳ ಬಗೆಗಿನ ಜ್ಞಾನವೃದ್ಧಿಯ ಹಲವಾರು ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸುವ ಯೋಜನೆ ಸಂಸ್ಥೆಗಿದೆ ಎಂದು ಹೇಳಿದರು.

ಸೆಮಫೋರ್-23 ಟೆಕ್ ಫೆಸ್ಟ್ ಕಾರ್ಯಕ್ರಮದಡಿಯಲ್ಲಿ ನಡೆಸಲಾಗುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ದಕ್ಷಿಣ ಭಾರತದ ಹಲವು ರಾಜ್ಯಗಳ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕಾಲೇಜಿನ ಎಂ.ಸಿ.ಎ ವಿಭಾಗದ ಮುಖ್ಯಸ್ಥ ಡಾ. ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಸ್ಯಾಮ್ಕಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋಯೆಲ್ ಜೋಸೆಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೆಮಫೋರ್ ಸ್ಟಾಫ್ ಕಾರ್ಡಿನೇಟರ್ ಡಾ. ಸ್ಪೂರ್ತಿ ಬಿ. ಶೆಟ್ಟಿ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ಮಾನಸ ಮತ್ತು ತಂಡ ಪ್ರಾರ್ಥಿಸಿದರು. ರಶ್ಮೀ ಕಾರ್ಯಕ್ರಮ ನಿರೂಪಿಸಿದರು. ಸ್ಯಾಮ್ಕಾ ಕಾರ್ಯದರ್ಶಿ ಶ್ರಾವ್ಯಾ ಎ. ಆಚಾರ್ಯ ವಂದಿಸಿದರು.





























































































































error: Content is protected !!
Scroll to Top