ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಸಿಎಂ ಬಸವರಾಜ ಬೊಮ್ಮಾಯಿಯವರು ನಾಯಿಮರಿ ಥರ ಮುದುಡಿಕೊಂಡಿರುತ್ತಾರೆ, ಅವರನ್ನು ಕಂಡರೆ ಭಯಪಡುತ್ತಾರೆ, ರಾಜ್ಯಕ್ಕೆ ಬೇಕಾದ ಅನುದಾನ ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ. ಅವರು ಜ.4 ರಂದು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯನವರ ಮಾತುಗಳು ಅವರ ಅವಿವೇಕತನ, ಅವರ ಸಂಸ್ಕೃತಿ, ನಡವಳಿಕೆ, ವ್ಯಕ್ತಿತ್ವವನ್ನು ತೋರಿಸುತ್ತವೆ. ಪ್ರತಿಯಾಗಿ ನಾನು ಏನೂ ಹೇಳುವುದಿಲ್ಲ. ನಾಯಿ ಬಹಳ ನಿಯತ್ತಿನ ಪ್ರಾಣಿ, ಜನರಿಗೆ ಬಹಳ ನಿಯತ್ತಿನಿಂದ ಕೆಲಸ ಮಾಡುವ ವ್ಯಕ್ತಿ ನಾನು. ನಾಯಿಯಲ್ಲಿರುವ ನಿಯತ್ತನ್ನು ನನ್ನ ಜೀವನದಲ್ಲಿಯೂ ಅಳವಡಿಸಿಕೊಂಡು ಹೋಗುತ್ತೇನೆ. ಜನರಿಗೆ ಸುಳ್ಳು ಹೇಳುವುದು, ವಂಚನೆ ಮಾಡುವುದು, ಸುಳ್ಳು ಸೌಭಾಗ್ಯಗಳ ಭರವಸೆ ನೀಡುವುದು ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳು. ಬಿಜೆಪಿ ಜನರಿಗೆ ಏನು ಮಾಡಿದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ, ಇದೆಲ್ಲದಕ್ಕೂ ರಾಜ್ಯದ ಜನತೆ ಉತ್ತರಿಸುತ್ತಾರೆ ಎಂದರು.
ಮೋದಿ ಕಾಮಧೇನು
ಸಿದ್ದರಾಮಯ್ಯ ಹಿಂದೆ ಅತ್ಯಂತ ಸಭ್ಯ ಪ್ರಧಾನಿ ಮನಮೋಹನ ಸಿಂಗ್ ಎದುರಿಗೆ ಹೆದರಿಕೊಂಡು ಹೋಗಲೇ ಇಲ್ಲ. ರಾಜ್ಯಕ್ಕೆ ನಯಾಪೈಸೆ ತರಲು ಆಗಲಿಲ್ಲ. ಬಹಳ ರಾಜ್ಯಕ್ಕೆ ಅವರು ಕೊಡುಗೆ ಏನೂ ಇಲ್ಲ ಎಂದರು. ಮೋದಿಯವರು ಪ್ರಧಾನಿಯಾದ ನಂತರ ವಿಶೇಷವಾದ ಕೊಡುಗೆಗಳನ್ನು ನೀಡಿದ್ದಾರೆ. ಮೋದಿಯವರು ರಾಜ್ಯಕ್ಕೆ 6 ಸಾವಿರ ಕಿ.ಮೀ. ಹೆದ್ದಾರಿ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಒಂದು ರಾಜ್ಯಕ್ಕೆ ಇಷ್ಟು ದೊಡ್ಡ ಕೊಡುಗೆ ಬಂದಿರುವುದು ಒಂದು ದಾಖಲೆ. ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆ, ಮಂಗಳೂರು ಕಾರವಾರ ಬಂದರು, ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅನುದಾನ ನೀಡಲಿದ್ದಾರೆ. ಎಲ್ಲಾ ಮಹಾನಗರಗಳಿಗೆ ಸ್ಮಾರ್ಟ್ ಸಿಟಿಯಂತಹ ಮಹತ್ವವನ್ನು ಯೋಜನೆಗಳನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ಮೋದಿ ಕೊಡುವ ಕಾಮಧೇನು ಎಂದು ಬೊಮ್ಮಾಯಿ ಬಣ್ಣಿಸಿದರು.























