ಮಹಾಮಾತೆ ಹೀರಾಬೆನ್ ನಿರ್ಗಮನ

ತಾಯಿ-ಮಗನ ಬಾಂಧವ್ಯದ ಅದ್ಭುತ ದೃಷ್ಟಾಂತ

ತಾಯಿ ಮಗನ ಅದ್ಭುತ ಸಂಬಂಧದ ಕೊಂಡಿ ಇಂದು ಕಡಿದು ಹೋಗಿದೆ. ಪ್ರಧಾನಿ ಮೋದಿಜಿ ಅವರ ತಾಯಿ ಹೀರಾಬೆನ್ ಮೋದಿ ನೂರನೇ ವರ್ಷದಲ್ಲಿ ತಮ್ಮ ಬದುಕಿನ ಯಾತ್ರೆ ಮುಗಿಸಿದ್ದಾರೆ.
2004ರಿಂದ ಆರಂಭಿಸಿ ಇಂದಿನವರೆಗೂ ರಾಷ್ಟ್ರದ ಜನರು ಈ ತಾಯಿ ಮಗನ ಪ್ರೀತಿ ಮತ್ತು ಮಮತೆಯ ಘಟನೆಗಳಿಗೆ ಸಾಕ್ಷಿ ಆಗಿದ್ದಾರೆ. ಒಂದು ಕಡು ಬಡತನದ ಕುಟುಂಬದಿಂದ ಬಂದ ವ್ಯಕ್ತಿ ದೇಶದ ಪ್ರಧಾನಿ ಆಗುವ ತನಕ ಮತ್ತು ಅದರ ನಂತರ

ಇಂದಿನವರೆಗೂ ಆ ತಾಯಿ ಮಗನ ಸಾಧನೆಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.
ಮೋದಿಜಿ ಮುಖ್ಯಮಂತ್ರಿ ಆಗಿ, ಮುಂದೆ ಪ್ರಧಾನಿ ಆಗಿ ಪ್ರತಿ ಬಾರಿ ಪ್ರಮಾಣ ತೆಗೆದುಕೊಳ್ಳುವ ಮೊದಲು ಹೋಗಿ ಕುಳಿತುಕೊಳ್ಳುತ್ತಿದ್ದದ್ದು ಈ ಮಹಾಮಾತೆಯ ಪಾದಮೂಲದಲ್ಲಿ! ಅಲ್ಲಿ ಹೆಚ್ಚು ಮಾತುಕತೆ ಇರಲಿಲ್ಲ. ಆದರೆ ಆ ಮೌನದಲ್ಲಿ ನೂರು ಅರ್ಥ ಇತ್ತು. ಮೋದಿಜಿ ಏನಾದರೂ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೊದಲು ಹೋಗಿ ತನ್ನ ತಾಯಿಯ ಮುಂದೆ ಕೂತು ಬಿಡುತ್ತಿದ್ದರು. ಸರ್ಜಿಕಲ್ ಸ್ಟ್ರೈಕ್ ಆಗುವ ಮೊದಲು, ನೋಟು ಅಮಾನ್ಯವಾಗುವ ಮೊದಲು, ತ್ರಿವಳಿ ತಲಾಖ್ ವಿರುದ್ಧದ ಕಾನೂನು ಜಾರಿಯಾಗುವ ಮೊದಲು, ಕಾಶ್ಮೀರದ 370ನೇ ವಿಧಿ ರದ್ದು ಆಗುವ ಮೊದಲು… ಹೀಗೆ ಪ್ರತೀಯೊಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಮೊದಲು ತನ್ನ ತಾಯಿಯ ಮುಂದೆ ಹೋಗಿ ಆಶೀರ್ವಾದ ತೆಗೆದುಕೊಂಡು ಬರುತ್ತಿದ್ದರು.
ಹೀರಾಬೆನ್ ಹೆಚ್ಚು ಓದಿದವರಲ್ಲ. ಬಡತನದ ಬೇಗೆಯಲ್ಲಿ ಬೆಂದು ಪಾಠ ಕಲಿತವರು. ಮೋದಿಜಿ ಮುಖ್ಯಮಂತ್ರಿ, ಪ್ರಧಾನಿ ಆದ ನಂತರವೂ ಅವರ ದಿನಚರಿ, ಬದುಕುವ ರೀತಿ ಬದಲಾವಣೆ ಆದದ್ದಿಲ್ಲ.

ಅವರು ಮನಸ್ಸು ಮಾಡಿದ್ದರೆ ಪ್ರಧಾನಿಯ ನಿವಾಸಕ್ಕೆ ಬಂದು ಐಷಾರಾಮಿ ಆಗಿ ಬದುಕಬಹುದಿತ್ತು ಅಥವಾ ಪ್ರಧಾನಿಯ ತಾಯಿ ಎಂದು ಒಂದಿಷ್ಟು ಐಷಾರಾಮಿ ಸೌಲಭ್ಯ ಪಡೆಯಬಹುದಿತ್ತು. ಆದರೆ ಆ ತಾಯಿ ಗುಜರಾತಿನ ತನ್ನ ಮಕ್ಕಳ ಮನೆಯಲ್ಲಿ ಸರಳವಾಗಿ ಬದುಕಿದರು. ಪ್ರತಿ ಚುನಾವಣೆಗೆ ಬಂದು ತಪ್ಪದೆ ಓಟ್ ಹಾಕಿದರು. ತನ್ನ ಮಗನ ಎಲ್ಲ ನಿರ್ಧಾರಗಳಿಗೆ ನೈತಿಕ ಬೆಂಬಲ ಕೊಟ್ಟರು. ಪ್ರತಿ ಸಲ ಮಗ ಮನೆಗೆ ಬಂದಾಗ ತುತ್ತು ಊಟ ತಿನ್ನಿಸಿ ಆಶೀರ್ವಾದ ಮಾಡಿ ಕಳುಹಿಸುತ್ತಿದ್ದರು.
ಮೋದಿಜಿ ಕೂಡ ಹಾಗೆ ತನ್ನ ಯಶಸ್ಸಿನ ಎಲ್ಲ ಶ್ರೇಯಸ್ಸನ್ನು ತನ್ನ ತಾಯಿಯ ಪಾದದಲ್ಲಿ ಇಟ್ಟು ಮೌನವಾಗಿ ನಿಂತುಬಿಡುತ್ತಿದ್ದರು. ರಾಜತಾಂತ್ರಿಕವಾಗಿ ಮೋದಿಜಿ ವಜ್ರಕ್ಕಿಂತಲೂ ಕಠಿಣ ಆದರೂ ಅಮ್ಮನ ಮುಂದೆ ಹೂವಿಗಿಂತಲೂ ಮೃದು ಆಗುತ್ತಿದ್ದರು. ಮೋದಿಜಿ ಪ್ರತಿ ಚುನಾವಣೆಯಲ್ಲಿ ಗೆದ್ದಾಗಲೂ ಆ ತಾಯಿ ಪಡುತ್ತಿದ್ದ ಸಂಭ್ರಮವನ್ನು ಶಬ್ದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಅದು ಒಬ್ಬ ತಾಯಿಯ ಮೌನ ಆಶೀರ್ವಾದವೇ ಆಗಿತ್ತು!

ಒಬ್ಬ ಶಿವಾಜಿಯ ಜೀವನದಲ್ಲಿ ಜೀಜಾಬಾಯಿ ಪ್ರೇರಣೆ ಕೊಟ್ಟಂತೆ ಹೀರಾಬೆನ್ ತನ್ನ ಅಸಾಮಾನ್ಯ ಮಗನ ಉನ್ನತಿಯಲ್ಲಿ ಮೌನವಾಗಿ ನಿಂತು ಆಶೀರ್ವಾದ, ಬೆಂಬಲ ನೀಡಿದ್ದಾರೆ. ಇಂದು ಶಾಶ್ವತವಾಗಿ ಮೌನಕ್ಕೆ ಶರಣಾಗಿದ್ದಾರೆ. ವಿಶ್ವನಾಯಕನಾಗಿ ಒಬ್ಬ ಮಗನನ್ನು ರೂಪಿಸಿದ ಕೀರ್ತಿಯು ಆ ತಾಯಿಗೆ ಸಲ್ಲುತ್ತದೆ ಅನ್ನುವುದು ನೂರಕ್ಕೆ ನೂರರಷ್ಟು ನಿಜ.





























































































































error: Content is protected !!
Scroll to Top