ಹಬ್ಬದ ಸಂದರ್ಭ ಹೂವು ಸಿಕ್ಕಾಪಟ್ಟೆ ದುಬಾರಿ

ಹೂ, ಹಣ್ಣು ಕೈಗೆಟಕುತ್ತಿಲ್ಲ ಎಂದು ಜನರ ದೂರು

ಕಾರ್ಕಳ: ಹಬ್ಬದ ಸಂದರ್ಭದಲ್ಲಿ ಹೂವು, ಹಣ್ಣುಹಂಪಲು, ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವುದು ಮಾಮೂಲು ಸಂಗತಿ. ಇದೀಗ ದೀಪಾವಳಿ ಹಬ್ಬ ಬರುತ್ತಿರುವಂತೆಯೇ ಮತ್ತೊಮ್ಮೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ. ಅದರಲ್ಲೂ ಹೋವಿನ ಬೆಲೆ ಕೆಳೆದರೆ ಹೌಹಾರುವಂತಿದೆ. ವರುಣನ ಆರ್ಭಟದಿಂದಾಗಿ ಹೂವಿನ ಬೆಳೆ ನಾಶವಾಗಿರುವುದು ಬೆಲೆ ಏರಿಕೆಯಾಗಲು ಮುಖ್ಯ ಕಾರಣ. ಹಬ್ಬಕ್ಕೆ ಮೂರು ದಿನಗಳು ಬಾಕಿ ಇರುಗಲೇ ಹೂವಿನ ದರ ಗಗನಕ್ಕೇರಿದೆ. ನಾಳೆಯಿಂದ ಇನ್ನು ಹೆಚ್ಚಾಗಲಿದೆ.
ಮಾರುಕಟ್ಟೆಯಲ್ಲಿ ಸೇವಂತಿಗೆ ಒಂದು ಮಾರು ಹೂವಿಗೆ 70-80 ರೂ. ಇದೆ. ಚೆಂಡು ಹೂ, ಗುಲಾಬಿ, ಸೇವಂತಿಗೆ, ಮಲ್ಲಿಗೆ ಸೇರಿದಂತೆ ಎಲ್ಲ ಹೂವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ‌. ದಸರಾ ಹಬ್ಬದ ವೇಳೆ 250ರಿಂದ 300 ರೂಪಾಯಿ ಸೇವಂತಿಗೆ ಹೂವಿನ ದರ ಇತ್ತು. ದೀಪಾವಳಿ ಹಬ್ಬದ ಸಮಯದಲ್ಲಿ 200 250 ರೂ.ವರೆಗೆ ಹೋಗಬಹುದು ಎಂದು ಹೂವಿನ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಒಂದು ಹೂವಿನ ಹಾರ ಈಗಲೇ 50 ರಿಂದ 150ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಇದು ಇನ್ನು ಹೆಚ್ಚಳವಾಗಲಿದೆ. ಸೋಮವಾರ ದೀಪಾವಳಿ ಹಬ್ಬ. ಈಗಲೇ ದರಗಳು ದುಪ್ಪಟ್ಟು ಆಗುತ್ತಿದೆ ಎನ್ನುವುದು ಗ್ರಾಹಕರ ಮಾತಾಗಿದೆ.
ಹೂವಿನ ದರ ಏರಿಕೆಗೆ ಪ್ರಮುಖ ಕಾರಣ ಈ ಬಾರಿ ಸುರಿದ ಭಾರಿ ಮಳೆ. ಸೇವಂತಿಗೆ ಸೇರಿದಂತೆ ಬೇರೆ ಬೇರೆ ಹೂವುಗಳು ನೀರಿನಲ್ಲಿ ತೋಯ್ದು ಹಾಳಾಗಿವೆ. ಬೆಳೆ ಕಡಿಮೆ ಬಂದಿದೆ. ಜತೆಗೆ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಮಾರುಕಟ್ಟೆಗೆ ಹೂವು ಕಡಿಮೆ ಬರುತ್ತಿರುವ ಕಾರಣ ದರ ಹೆಚ್ಚಳವಾಗಿದೆ. ಜನರು ಚೌಕಾಸಿ ವ್ಯಾಪಾರ ಮಾಡುತ್ತಾರೆ.‌‌ ಕೆಲವರು ದರ ಕೇಳಿ ಇನ್ನು ಕಡಿಮೆಯಾಗಿಲ್ವಾ, ಹೂ ಬೇಡ ಬಿಡಿ ಎಂದು ಮುಂದಕ್ಕೆ ಹೋಗುತ್ತಾರೆ. ಮತ್ತೆ ಕೆಲವರು ಎರಡು ಮಾರು ಹೂವು ಖರೀದಿ‌ ಮಾಡುವವರು ಕೇವಲ ಅರ್ಧ ಮಾರು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೂವಿನ ವ್ಯಾಪಾರಿಗಳು ಕಷ್ಟ ಹೇಳಿಕೊಂಡಿದ್ದಾರೆ.
ದೀಪಗಳ ಹಬ್ಬದಲ್ಲಿ ಲಕ್ಷ್ಮೀಗೆ ವಿಶೇಷ ಪ್ರಾಧಾನ್ಯತೆ. ಪೂಜೆ, ಪುನಸ್ಕಾರ ಮಾಡಲಾಗುತ್ತದೆ. ಹಾಗಾಗಿ ಹೂವು ಬೇಕು. ಈ ಕಾರಣಕ್ಕೆ ದುಬಾರಿ ಆದರೂ ಖರೀದಿ ಮಾಡಬೇಕು.
ಸೇಬು, ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಸೀಬೆ, ಬಾಳೆಹಣ್ಣಿನ ಬೆಲೆ ಕೂಡ ಕೈಗೆಟುಕುತ್ತಿಲ್ಲ ಎಂದು ಜನ ಗೊಣಗುತ್ತಿದ್ದಾರೆ. ಸೇಬಿನ ಬೆಲೆ ಒಂದು ಕೆಜಿಗೆ 140 -150 ರೂ. ಇದೆ. ದಸರಾ ಹಬ್ಬದ ವೇಳೆ 250 ರೂಪಾಯಿಗೇರಿತ್ತು. ಈ ಬಾರಿ ಎಲ್ಲೆಡೆಯಿಂದ ಯಥೇಚ್ಛವಾಗಿ ಹಣ್ಣು ಬಂದಿರುವ ಕಾರಣ ಬೆಲೆ ಜಾಸ್ತಿಯಾಗದು. ಹೆಚ್ಚು ಕಡಿಮೆ ಇದೇ ದರ ಇರಲಿದೆ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಿದ್ದಾರೆ.













































error: Content is protected !!
Scroll to Top