ಕಾರ್ಕಳ: ಚಲನಚಿತ್ರಗಳು ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗುತ್ತದೆ. ಇದಕ್ಕೆ ಉತ್ತಮವಾದ ನಿದರ್ಶನ ಪ್ರಸ್ತುತ ದೇಶದಾದ್ಯಂತ ಸಂಚಲನ ಮೂಡಿಸುತ್ತಿರುವ ಕಾಂತಾರ ಸಿನಿಮಾ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಈ ಸಿನಿಮಾವು ಕರಾವಳಿಯ ಸೊಬಗನ್ನು ಚಿತ್ರಿಸುವುದರ ಜೊತೆಗೆ ಕರಾವಳಿಯ ಜನತೆಯ ನಂಬಿಕೆಯೊಂದಿಗೆ ಬೆಸೆದುಕೊಂಡಿದೆ. ಇಲ್ಲಿನ ದೈವರಾಧನೆಯ ಮಹತ್ವ, ಪ್ರಕೃತಿಯೊಂದಿಗೆ ಜನರ ಬೆಸುಗೆ, ಪರಿಸರ ಮತ್ತು ಜನರ ರಕ್ಷಣೆಯಲ್ಲಿ ದೈವದ ಕಾರ್ಣಿಕ ಇವೆಲ್ಲವನ್ನೂ ಕಟ್ಟಿಕೊಟ್ಟಿರುವ ಕಾಂತಾರ ಸಿನಿಮಾವು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಚಿತ್ರದ ಬಿಡುಗಡೆ ಆಗುವುದರ ಮೂಲಕ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಸಿನಿಮಾ ಬಹಳಷ್ಟು ಪ್ರಭಾವಿಸಿದ್ದು ಯಾರೂ ಕೂಡ ನೋಡದೆ ಇರಲಾರರು.
ಕಾಂತಾರದಿಂದ ಪ್ರಭಾವಿತರಾದ ಮಕ್ಕಳು:
ಕಾಂತಾರ ಸಿನಿಮಾದಿಂದ ಪ್ರೇರಿತರಾದ ಮಕ್ಕಳು ತಮ್ಮದೆ ಒಂದು ಸಣ್ಣ ಗುಂಪನ್ನು ಕಟ್ಟಿಕೊಂಡು ಸಿನಿಮಾದ ಒಂದು ಸನ್ನಿವೇಶವನ್ನು ತಾವೇ ಅಭಿನಯಿಸಿ ವೀಡಿಯೋ ಮಾಡಿದ್ದರು. ಸಿನಿಮಾದಲ್ಲಿ ಅರಣ್ಯ ಅಧಿಕಾರಿಯ (ಕಿಶೋರ್ ಪಾತ್ರ) ಒಂದು ಸಂಭಾಷಣೆಯನ್ನು ಹೇಳುವ ಮೂಲಕ ಮಕ್ಕಳು ತಮ್ಮ ವಿಡಿಯೋವನ್ನು ಆರಂಭಿಸುತ್ತಾರೆ ನಂತರ ರಿಷಭ್ ಶೆಟ್ಟಿ ಕಂಬಳದ ಕೋಣಗಳನ್ನು ಓಡಿಸುವ ದೃಶ್ಯಕ್ಕನುಗುಣವಾಗಿ ಕರುವನ್ನು ಓಡಿಸುವ ವೀಡಿಯೋ ಮಾಡಿದ್ದಾರೆ.
ವೈರಲ್ ಆದ ವೀಡಿಯೋ:
ಮಕ್ಕಳ ವಿಡಿಯೋ ಆರಂಭದಲ್ಲಿ ಕೇವಲ ತಮ್ಮ ಮನೆಯ, ಸಂಬಂಧಿಕರ ವ್ಯಾಟ್ಸ್ಯಾಪ್ ಗ್ರೂಪ್‌ನಲ್ಲಿ ಶೇರ್ ಆಗಿದ್ದು ಇದೀಗ ರಾಜ್ಯಮಟ್ಟದಲ್ಲಿ ವೈರಲ್ ಆಗುತ್ತಿದೆ. ಅನೇಕ ಮಾಧ್ಯಮದಲ್ಲೂ ಪ್ರಸಾರವಾಗಿದೆ. ಹೀಗೆ ಒಂದು ಸಣ್ಣ ವೈರಲ್ ವೀಡಿಯೋ ಮೂಲಕ ಗಮನ ಸೆಳೆದ ಮಕ್ಕಳ ಹಿನ್ನೆಲೆಯನ್ನು ಗಮನಿಸಿದಾಗ ಯಾಕೆ ಆ ಮಕ್ಕಳು ಸಿನಿಮಾದಲ್ಲಿರುವ ಕೇವಲ ಕಂಬಳ ಓಡಿಸುವ ದೃಶ್ಯವನ್ನೇ ಅಭಿನಯಿಸಿದರು ಎಂದು ಪರಿಶೀಲಿಸಿದಾಗ ಆದು ಅವರ ಮನೆಯ ಪರಂಪರೆಯೊಂದಿಗೆ ಬೆಸೆದುಕೊಂಡಿತ್ತು ಎಂಬುದು ಗಮನಾರ್ಹವಾದ ವಿಚಾರವಾಗಿದೆ.
ಕಂಬಳ ಪರಂಪರೆಯ ಮನೆತನ:
ವೈರಲ್ ಆದ ವೀಡಿಯೋದಲ್ಲಿರುವ ಮಕ್ಕಳು ಕಂಬಳದ ಪರಂಪರೆಯನ್ನು ಹೊಂದಿರುವ ಕಾರ್ಕಳದ ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಮನೆತನದವರಾಗಿದ್ದಾರೆ. ಶಂಕರಬೆಟ್ಟು ಮನೆಯ ಕಂಬಳದ ಪರಂಪರೆ ಪ್ರಾರಂಭವಾದದ್ದು ಶಂಕರ ಮಡಿವಾಳರವರಿಂದ. ಸುಮಾರು 1972ರ ಸಮಯದಲ್ಲಿ 16ನೇ ವಯಸ್ಸಿನಲ್ಲಿ ಕಂಬಳದ ಓಟಗಾರನಾಗಿ ಕಂಬಳ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು 35 ವರ್ಷಗಳ ಕಾಲ ನಿರಂತರವಾಗಿ ಕಂಬಳದ ಓಟಗಾರನಾಗಿ 10 ವರ್ಷಗಳ ತೀರ್ಪುಗಾರನಾಗಿ ಸಾಧನೆಯನ್ನು ಮಾಡಿರುವುದಲ್ಲದೆ ಯುವ ಕಂಬಳ ಸಾಧಕರಿಗೆ ಪ್ರೇರಣೆಯಾಗಿದ್ದರು. ನೇಗಿಲು ಹಿರಿಯ, ನೇಗಿಲು ಕಿರಿಯ, ಹಗ್ಗ ಹಿರಿಯ, ಹಗ್ಗ ಹಿರಿಯ ಹೀಗೆ ಹಲವಾರು ವಿಭಾಗದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮುಂದೆ 2000ನೇ ಇಸವಿಯ ನಂತರ ಶಂಕರಬೆಟ್ಟು ಮನೆಯ ಸುರೇಶ್ ಕೆ. ಮತ್ತು ರವೀಂದ್ರ ಕುಮಾರ್ ಜೊತೆಯಾಗಿ ಕಂಬಳದ ಕೋಣಗಳನ್ನು ಕಟ್ಟಿದರು. ರವೀಂದ್ರ ಕುಮಾರ್ ಅವರ ಹೆಸರಿನಲ್ಲಿ ಕೋಣಗಳನ್ನು ಓಡಿಸುತ್ತಿದ್ದರು. ಇವರೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು 4 ವರ್ಷ ಸಿರಿಸ್ ಮಾಡಿದ್ದಾರೆ (3 ವರ್ಷ ನೇಗಿಲು ಕಿರಿಯ ಮತ್ತು 1 ವರ್ಷ ನೇಗಿಲು ಹಿರಿಯ). ರವೀಂದ್ರ ಕುಮಾರ್ ಅವರು ಕಂಬಳದ ಕಮೆಂಟ್ರಿಯನ್ನು ಮಾಡುತ್ತಾರೆ.
ಹಿರಿಯರ ಅಭಿಪ್ರಾಯ:
ಈ ವಿಚಾರದ ಬಗ್ಗೆ ನ್ಯೂಸ್ ಕಾರ್ಕಳ ಮನೆಯ ಹಿರಿಯರನ್ನು ಸಂಪರ್ಕಿಸಿದಾಗ, ನಮ್ಮ ಮನೆಯ ಕಂಬಳದ ಪರಂಪರೆಯ ಮೇಲಿರುವ ಅಭಿಮಾನ ಮತ್ತು ಕಾಂತಾರ ಸಿನಿಮಾದ ಪ್ರೇರಣೆಯಿಂದ ಮಕ್ಕಳು ಈ ರೀತಿಯ ವೀಡಿಯೋ ಮಾಡಿರಬಹುದು ಎಂದು ಮನೆಯ ಹಿರಿಯರು ಹೇಳುತ್ತಾರೆ. ಯಾವುದೇ ರೀತಿಯಾದ ಪೂರ್ವ ತಯಾರಿಯಿಲ್ಲದೆ ಮನೆಯ ಹಿರಿಯರ ಸಹಾಯ ಪಡೆಯದೆ ಮಕ್ಕಳೆ ಸೇರಿಕೊಂಡು ಮಾಡಿರುವುದು ವಿಶೇಷ ಅಲ್ಲದೆ ಈ ರೀತಿಯಾದ ವಿಡಿಯೋ ಮಾಡಿದ್ದಾರೆ ಎಂಬುದು ನಮಗೆ ತಿಳಿದದ್ದೆ ಮೊಬೈಲ್‌ನಲ್ಲಿ ವೈರಲ್ ಆಗುತ್ತಿದ್ದ ವಿಡಿಯೋ ನೋಡಿದ ಬಳಿಕ ಎನ್ನುತ್ತಾರೆ.
ವೀಡಿಯೋದಲ್ಲಿ ಕಂಬಳ ಓಟಗಾರನಾಗಿ ಶಂಕರಬೆಟ್ಟು ಶಂಕರ ಮಡಿವಾಳರ ಮೊಮ್ಮಗ, ಯೋಗೀಶ್ ಸಾಲ್ಯಾನ್ ಅವರ ಮಗ 4ವರ್ಷದ ಸುಯೋಗ್, ಕಿಶೋರ್ ಪಾತ್ರದಲ್ಲಿ ಪ್ರಸಾದ್ ಐಸಿರ ಅವರ ಮಗ ಪ್ರಮಿತ್ ಕುಮಾರ್ (14), ರಕ್ಷಿತ್ ಕುಮಾರ್ (15), ಪ್ರಧಾನ್ (10), ಪ್ರಣತಿ (7) ಅಭಿನಯಿಸಿದ್ದಾರೆ. ಐಶ್ವರ್ಯ ಮತ್ತು ತೃಪ್ತಿ ಎಂಬ ಮಕ್ಕಳು ವಿಡಿಯೋದ ದೃಶ್ಯೀಕರಣ ಮತ್ತು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಂಬಳದ ಸೊಬಗಿನೊಂದಿಗೆ ದೈವದ ಕಾರ್ಣಿಕತೆಯನ್ನು ಪ್ರತಿಬಿಂಬಿಸುವ ಕಾಂತಾರ ಸಿನಿಮಾವು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ ಎಂಬುದಕ್ಕೆ ಈ ಎಳೆವಯಸ್ಸಿನ ಮಕ್ಕಳ ಧನಾತ್ಮಕವಾದ ವೀಡಿಯೋ ಚಿತ್ರಿಕರಣವು ಉತ್ತಮ ಉದಾಹರಣೆ ಎಂದರೂ ತಪ್ಪಾಗಲಾರದು. ಕೇವಲ ಮನರಂಜನೆ ಮಾತ್ರವಲ್ಲದೆ ಜನ ಜೀವನದೊಂದಿಗೆ ಬೆಸುಗೆಯನ್ನು ಹೊಂದಿದ್ದು ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವಲ್ಲಿ ಕಾಂತಾರ ಸಿನಿಮಾವು ಯಶಸ್ವಿಯಾಗಿದೆ ಎಂಬುದಕ್ಕೆ ಜನ ದಟ್ಟನೆಯಿಂದ ತುಂಬಿರುವ ಸಿನಿಮಾ ಥಿಯೆಟರ್‌ಗಳೇ ಸಾಕ್ಷಿ.