ಕಗ್ಗದ ಸಂದೇಶ-ಭಕ್ತಿಯೆಂಬುದು ರಕ್ತದಂತೆ ಪ್ರವಹಿಸುತಿರಲಿ ದೇಹದೊಳು…

ಯುಕ್ತಿ ಸಾಮ್ರಾಜ್ಯದಲಿ ಭಕ್ತಿ, ಬಡ ಪರದೇಶಿ|
ಶಕ್ತಿ ಚತುರತೆಯಡಗಿ ನೀನು ಸೋತಂದು||
ಉತ್ಕ್ರಮಣದರೆ ಮನದಿ ದೈವವನು ಪಿಡಿದೇನು|
ಭಕ್ತಿ ರಕ್ತದಿ ಪರಿಗೆ- ಮಂಕುತಿಮ್ಮ||

ಬುದ್ಧಿವಂತಿಕೆಯಿಂದ ಬದುಕುವ ನಾವು ಜೀವನದಲ್ಲಿ ಹಲವಾರು ಚಾತುರ್ಯಗಳನ್ನು ಬಳಸುತ್ತೇವೆ, ಹಾಗೆ ಬದುಕುವಾಗ ದೈಹಿಕವಾಗಿ ಗಟ್ಟಿಯಾಗಿರುವಾಗ ದೇವರ ಭಕ್ತಿ ಎನ್ನುವುದು ಬಡವಾಗಿರುತ್ತದೆ, ಪರದೇಶಿಯಂತಿರುತ್ತದೆ. ಜೀವನದ ಕೊನೆ ಘಟ್ಟದಲ್ಲಿ ದೈಹಿಕವಾಗಿ ಕುಗ್ಗಿದಾಗ ಅರೆಮನಸ್ಸಿನಿಂದ ದೇವರನ್ನು ಸ್ಮರಿಸುತ್ತೇವೆ. ಈ ರೀತಿಯ ಭಕ್ತಿಯಿಂದ ಯಾವುದೇ ಪ್ರಯೋಜನವಿಲ್ಲ. ಭಕ್ತಿ ಎನ್ನುವುದು ನಮ್ಮ ದೇಹದಲ್ಲಿ ರಕ್ತ ಹರಿಯುವಂತೆ ನಿರಂತರವಾಗಿ ಪ್ರವಹಿಸುತ್ತಿರಬೇಕು ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಯೌವನದಲ್ಲಿ ನಮ್ಮ ದೈಹಿಕ ಶಕ್ತಿ ಹಾಗೂ ಬುದ್ಧಿ ಸಾಮರ್ಥ್ಯವೇ ಪ್ರಮುಖವೆಂದು ಭಾವಿಸಿ ದೇವರ ಭಕ್ತಿಯನ್ನು ಕಡೆಗಣಿಸುತ್ತೇವೆ. ಬದುಕಿನ ಕೊನೆಗಾಲದಲ್ಲಿ ದೈಹಿಕ ಶಕ್ತಿ ಕುಂದಿದಾಗ ಭಗವಂತನನ್ನು ನೆನೆಯುತ್ತೇವೆ. ಅನೇಕ ನಾಸ್ತಿಕರು ಕೂಡ ತಮ್ಮ ಬದುಕಿನ ಕೊನೆ ಕೊನೆಗೆ ದೇವರ ಮೊರೆ ಹೋಗುವುದುಂಟು.ಕೊನೆಗಾಲದಲ್ಲಿ ದೇವರನ್ನು ನೆನೆಯುವುದನ್ನು ಬಿಟ್ಟು ದೇಹದಲ್ಲಿ ರಕ್ತ ಸಹಜವಾಗಿ ಹರಿಯುವಂತೆ ಭಕ್ತಿಯ ರಸವು ನಿತ್ಯನಿರಂತರವಾಗಿ ಹರಿಯಬೇಕು.

ರವಿಶಶಿಯು ಕರಿಗಡಲು ಗಿರಿತೊರೆಯು ಕೆಮ್ಮುಗಿಲು|
ಭುವಿಯ ಮೇಲಣ ಸಕಲರಮ್ಯಸೃಷ್ಟಿ||
ಕುವಲಯದಿ ನಿನಗುಳ್ಳ ಭೋಗಭಾಗ್ಯಗಳೆಲ್ಲ|
ಶಿವಕೃಪೆಯು ಎಂದರಿಯೊ-ಬೋಳುಬಸವ||

ಎಂಬ ಕವಿ ನಿಜಗುಣರ ಮಾತಿನಂತೆ ಬದುಕಿನ ಸಕಲ ಕಾರ್ಯಗಳು ಕೈಗೂಡಬೇಕಾದರೆ ದೇವರ ಅನುಗ್ರಹ ಬೇಕು ಎನ್ನುವುದನ್ನು ಅರಿಯಬೇಕು.
ಕಾರ್ಯದಕ್ಷತೆ, ಬುದ್ಧಿ, ಚಾಣಾಕ್ಷತನ ಹಣವು|
ಶೌರ್ಯ ಸಾಹಸ ಬಲ್ಮೆಯೊಂದುಮಿರದ||
ಧೈರ್ಯಗೇಡಿಗಂ ದೈವಾನುಕೂಲಮಿರೆ|
ಕಾರ್ಯಕೈಗೂಡುವುದು-ಬೋಳುಬಸವ||

ಎಂಬಂತೆ ಬುದ್ಧಿ ಚಾಣಾಕ್ಷತನಕ್ಕಿಂತ ದೈವಾನುಕೂಲ ಮುಖ್ಯ. ಮನುಷ್ಯ ಪ್ರಯತ್ನಕ್ಕೆ ದೈವಾನುಗ್ರಹ ಕೂಡಿದಾಗಲೇ ಸಾಧನೆ ಸಾಧ್ಯವಾಗುವುದು.
ಬಿತ್ತಮಳೆಗಳವೋಲುಯತ್ನ ದೈವಿಕ ನಮಗೆ|
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು||
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ|
ಗೊತ್ತಿಲ್ಲ ಫಲದ ಬಗೆ- ಮಂಕುತಿಮ್ಮ||

ಎಂದು ಡಿವಿಜಿಯವರೇ ಹೇಳಿದಂತೆ ಬೀಜ ಬಿತ್ತಿದ ಮಾತ್ರಕ್ಕೆ ಬೆಳೆ ಬರುವುದಿಲ್ಲ, ಮಳೆಯ ಮೂಲಕ ಅದಕ್ಕೆ ಬೇಕಾದ ನೀರು ಹರಿದಾಗಲೇ ಹುಲುಸಾದ ಬೆಳೆ ದೊರೆಯುವುದು.ಹೀಗೆ ಮನುಷ್ಯ ಪ್ರಯತ್ನಕ್ಕೆ ದೈವಾನುಗ್ರಹ ಕೂಡಿದಾಗಲೇ ಸಾಧನೆ ಸಾಧ್ಯವಾಗುವುದು ಎನ್ನುವ ವಾಸ್ತವವನ್ನು ಅರಿತು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ, ಕಾರ್ಕಳ ತಾಲೂಕು

ಪ್ರಭಾಕರ ಶೆಟ್ಟಿ ಕೊಂಡಳ್ಳಿ








































































































error: Content is protected !!
Scroll to Top