ಕ್ಷಯಮುಕ್ತ ಭಾರತ ಸಂಕಲ್ಪ

ಕಾರ್ಕಳದಲ್ಲಿ ಕ್ಷಯ ರೋಗಿಗಳ ದತ್ತು ಸ್ವೀಕಾರ ಅಭಿಯಾನ

ಉಭಯ ತಾಲೂಕಿನಲ್ಲಿ 96 ಸಕ್ರೀಯ ಪ್ರಕರಣ

ಕಾರ್ಕಳ : ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರದ ಆಶಯದಂತೆ 2025ರ ವೇಳೆ ಭಾರತವನ್ನು ಕ್ಷಯ (ಟಿಬಿ) ಮುಕ್ತಗೊಳಿಸುವ ನಿಟ್ಟಿನಲ್ಲಿ ಅಭಿಯಾನ ನಡೆಯುತ್ತಿದೆ. ಇದರ ಒಂದು ಭಾಗವಾಗಿ ಕ್ಷಯ ರೋಗಿಗಳನ್ನು ದತ್ತು ಸ್ವೀಕರಿಸುವ ಯೋಜನೆಯನ್ನೂ ರೂಪಿಸಲಾಗಿದೆ. ಎನ್‌ಜಿಒ, ಚುನಾಯಿತ ಪ್ರತಿನಿಧಿಗಳು, ಹಾಗೂ ಸಂಘ ಸಂಸ್ಥೆಗಳು ಕ್ಷಯ ರೋಗಿಗಳನ್ನು ದತ್ತು ಪಡೆದು 6 ತಿಂಗಳ ಕಾಲ ಪೌಷ್ಠಿಕ ಆಹಾರ ನೀಡುವ ಕಾರ್ಯ ಮಾಡಲಾಗುತ್ತಿದೆ.
ಕ್ಷಯ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಈ ಬ್ಯಾಕ್ಟಿರೀಯಾಗಳು ದೇಹದೊಳಗೆ ಸೇರಿಕೊಂಡು ಶ್ವಾಸಕೋಶಗಳಿಗೆ ಹಾನಿ ಮಾಡುವುದು. ಪ್ರತಿವರ್ಷ ಮಾ. 24ರಂದು ವಿಶ್ವ ಕ್ಷಯ ರೋಗ ದಿನ (World Tuberculosis Day) ಆಚರಿಸಲಾಗುತ್ತದೆ. ಕ್ಷಯ ರೋಗ ಒಂದು ಕಾಲದಲ್ಲಿ ಭೀತಿ ಹುಟ್ಟಿಸಿದ್ದ ಕಾಯಿಲೆಯಾಗಿತ್ತು. ಡಾ. ರಾಬರ್ಟ್ ಕೋಚ್ ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು1882ರಲ್ಲಿ ಪತ್ತೆಹಚ್ಚಿದ್ದರು. ಕ್ಷಯ ಸಾಂಕ್ರಾಮಿಕ ರೋಗವಾಗಿರುವುದರಿಂದ ಇದು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ರೋಗಿ ಕೆಮ್ಮಿದಾಗ ಕಫದಲ್ಲಿರುವ ರೋಗಾಣುಗಳೊಂದಿಗೆ ಇನ್ನೊಬ್ಬರಿಗೆ ಹರಡುತ್ತದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಒಟ್ಟು 96 ಸಕ್ರಿಯ ಪ್ರಕರಣವಿದೆ.

ಲಕ್ಷಣಗಳು
ಎರಡು ವಾರಕ್ಕಿಂತ ಹೆಚ್ಚು ದಿನ ಕೆಮ್ಮು ಕಂಡುಬರುವುದು, ಸಂಜೆ ವೇಳೆ ಜ್ವರ ಬರುವುದು, ಹಸಿವು ಆಗದೇ ಇರುವುದು, ತೂಕ ಕಡಿಮೆಯಾಗುವುದು, ಎದೆಯಲ್ಲಿ ನೋವಾಗುವುದು, ಕಫದಲ್ಲಿ ರಕ್ತ, ಬೆವರುವಿಕೆ ಮತ್ತು ಎದೆ ನೋವು ಕಂಡು ಬರುವುದು ಕ್ಷಯ ರೋಗ ಲಕ್ಷಣ. ಇಂತಹ ಲಕ್ಷಣ ಕಂಡುಬಂದಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಬಹುದಾಗಿದೆ. ರೋಗಿ ದತ್ತು ಸ್ವೀಕಾರ ಅಭಿಯಾನದ ಕುರಿತು ಅಥವಾ ಕ್ಷಯ ರೋಗದ ಕುರಿತು ಮಾಹಿತಿ ಪಡೆಯಲು ಕ್ಷಯ ರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್‌ ಅವರನ್ನು (9743785410) ಸಂಪರ್ಕಿಸಬಹುದಾಗಿದೆ.









































































































error: Content is protected !!
Scroll to Top