1947ರಲ್ಲಿ ಲಡ್ಡು ಕೊಟ್ಟಿದ್ದರು – ಸ್ವಾತಂತ್ರ್ಯದ ನೆನಪು ಮಾಡಿಕೊಂಡ ಭುಜಂಗ ಶೆಟ್ಟಿ

ಅಂದು ಭಾರತೀಯರಲ್ಲಿ ಸಮಾನತೆಯಿತ್ತು

ಕಾರ್ಕಳ : ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ 1947ರಲ್ಲಿ ಬ್ರಿಟೀಷ್‌ ಆಳ್ವಿಕೆಯಿಂದ ಭಾರತ ಸ್ವತಂತ್ರವಾದ ಸಂದರ್ಭದ ಬಗ್ಗೆ 86ರ ಹರೆಯದ ನಿವೃತ್ತ ಶಿಕ್ಷಕ ಸಾಣೂರಿನ ಭುಜಂಗ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ. 1947ರ ಪ್ರಥಮ ಸ್ವಾತಂತ್ರ್ಯ ಸಂಭ್ರಮದ ದಿನದಂದು ಶಾಲೆಯಲ್ಲಿದ್ದ ನಮಗೆಲ್ಲ ಶಿಕ್ಷಕರು ದೊಡ್ಡ ಲಡ್ಡು ನೀಡಿದ್ದರು. ಇಡೀ ದೇಶವೇ ಅಂದು ಸಂಭ್ರಮದಲ್ಲಿತ್ತು. ಕಾರ್ಕಳದಲ್ಲಿದ್ದ ಮಿಷನ್‌ ಶಾಲೆಯಲ್ಲಿ 5 ತರಗತಿಯಲ್ಲಿ ಆವಾಗ ನಾನು ಕಲಿಯುತ್ತಿದೆ. ಬ್ರಿಟೀಷರನ್ನು ನಾನು ನೋಡಿಲ್ಲ. ಅವರ ದಬ್ಬಾಳಿಕೆ ಬಗ್ಗೆ ತಿಳಿದಿತ್ತು ಎಂದು ಭುಜಂಗ ಶೆಟ್ಟಿ ತಿಳಿಸಿದರು. ಅಂದು ಬ್ರಿಟೀಷರ ದಬ್ಬಾಳಿಕೆ ಇತ್ತಾದರೂ ಭಾರತೀಯರಲ್ಲಿ ಸಮಾನತೆಯಿತ್ತು. ಆದರೆ, ಇಂದು ಅದು ಮಾಯವಾಗುತ್ತಿದೆ ಎಂದು ಭುಜಂಗ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
1947ರಲ್ಲಿ ನಮ್ಮ ಶಾಲೆಯಲ್ಲಿ 1ರಿಂದ 7ತರಗತಿವರೆಗೆ ಒಟ್ಟು 452 ವಿದ್ಯಾರ್ಥಿಗಳಿದ್ದರು. ಅಂದು ನಮ್ಮಲ್ಲಿ ಸ್ಲೇಟ್‌, ಕಡ್ಡಿ ಇರಲಿಲ್ಲ. ಮನುಷ್ಯತ್ವ, ಪ್ರೀತಿ, ಪರಸ್ಪರ ಸಹಕಾರ ಮನೋಭಾವ ಅಧಿಕವಾಗಿತ್ತು. ಇಂದು ವಿದ್ಯಾರ್ಥಿಗಳಿಗೆ ಸರಕಾರದಿಂದಲೇ ಸಕಲ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಸಮಾನತೆ, ಸಾಮರಸ್ಯ, ಪ್ರೀತಿ ಕಣ್ಮರೆಯಾಗುತ್ತಿದೆ ಎಂದು ಹೇಳೀ ಭುಜಂಗ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಶಿಕ್ಷಕರ ಬಗ್ಗೆ ಗೌರವ
ನಾವು ವಿದ್ಯಾರ್ಥಿಗಳಾಗಿದ್ದ ಸಂದರ್ಭ ಶಿಕ್ಷಕರನ್ನು ದೇವರಂತೆ ಕಾಣಲಾಗುತ್ತಿತ್ತು. ಅವರ ಬಗ್ಗೆ ಅತೀವ ಗೌರವ ಎಲ್ಲರಿಗಿತ್ತು. ಇಂದು ಶಿಕ್ಷಕರಿಗೆ ಅಂತಹ ಗೌರವವಿಲ್ಲ. ಆ ಕಾಲದ ಎಸ್‌ಎಸ್‌ಎಲ್‌ಸಿಯೆಂದರೆ ಇಂದಿನ ಸ್ನಾತಕೋತ್ತರ ಪದವಿಯಂತ್ತಿತ್ತು. ಅಷ್ಟೊಂದು ಜ್ಞಾನ, ಅನುಭವ ನೀಡುತ್ತಿತ್ತು ಎಂದು ಬಣ್ಣಿಸಿದ ಭುಜಂಗ ಶೆಟ್ಟಿ ಅವರು ವಿದ್ಯಾರ್ಥಿ ದಿಸೆಯಲ್ಲೇ ಜೀವನಕ್ಕಾಗಿ ದುಡಿಯುತ್ತಿದ್ದೆವು. ಮೌಲ್ಯಯುತ, ಬದುಕಿನ ಶಿಕ್ಷಣ ಅಂದು ಎಳವೆಯಲ್ಲೇ ಸಿಗುತ್ತಿತ್ತು ಎಂದು 40 ವರ್ಷ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸಿದ್ದ ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟರು.

ಸಂದರ್ಶನ : ಜ್ಯೋತಿ ರಮೇಶ್‌















































































































































error: Content is protected !!
Scroll to Top