ಕಾರ್ಕಳ : ಬಜಗೋಳಿಯಲ್ಲಿ ಅಂದು ಸ್ವಾತಂತ್ರ್ಯ ದೀವಿಗೆಗೆ ಸೋಮನಾಥ ಗೋಖಲೆ ತೈಲವೆರೆದಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಹಾಗೂ ಕನ್ನಡಿಗರ ಕೊಡುಗೆ ದೊಡ್ಡ ಪ್ರಮಾಣದಲ್ಲಿತ್ತು. ಸ್ವಾತಂತ್ರ್ಯ ನಂತರದಲ್ಲೂ ದೇಶದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಮಹತ್ವದ್ದಾಗಿದೆ. ಇದು ಅಮೃತ ಭಾರತಿಯ ಕೀರ್ತಿಯನ್ನು ನಭದೆತ್ತರಕ್ಕೆ ಎತ್ತಿ ಹಿಡಿದಿದೆ ಎಂದು ಸಾಹಿತಿ ಮುನಿರಾಜ ರೆಂಜಾಳ ಹೇಳಿದರು.
ಅವರು ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ವಲಯ, ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಸಹಯೋಗದಲ್ಲಿ ಬಜಗೋಳಿ ಗಣಪತಿ ಕಟ್ಟೆಯಲ್ಲಿ ಜರುಗಿದ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಭಾರತವು ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಶಕ್ತಿಶಾಲಿ ರಾಷ್ಟ್ರ ವಾಗಿ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೆಚ್ಚೆದೆಯ ಕಲಿಗಳ ಬಲಿದಾನವೂ ಆಗಿದೆ. ಪ್ರಮುಖ ಹೋರಾಟಗಾರಿಗೆ ಸಾಥ್ ನೀಡಿದ ಅದೆಷ್ಟೋ ಹೋರಾಟಗಾರರು ಹೆಸರಿಲ್ಲದೇ ಉಸಿರನ್ನು ಭರತಮಾತೆಯ ಪದತಲಕ್ಕೆ ಅರ್ಪಿಸಿ ಅಪ್ರತಿಮ ದೇಶಭಕ್ತರೆನಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಭಾಷಣ, ದೇಶ ಭಕ್ತಿ ಗೀತಾ ಗಾಯನ, ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಸ್ಥಳಗಳ ಎಪ್ಪತ್ತೈದು ಕೃತಿಗಳನ್ನು ಪ್ರದರ್ಶಿಸಲಾಯಿತು.

ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಜಿ. ನಾಯಕ್, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಂ.ಎನ್. ಗುರುದತ್ತ, ಕರ್ನಾಟಕ ರಾಜ್ಯ ಸ್ಟೋನ್ ಆಂಡ್ ಕ್ರಶರ್ ಓನರ್ ಅಸೋಶಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಸಂಘಟಕ ಗಿರೀಶ್ ರಾವ್ ಬಜಗೋಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜ ತಾವರಗಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯಾಯ, ಕಸಾಪ ಸದಸ್ಯ ಶಿವಸುಬ್ರಹ್ಮಣ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಕಸಾಪ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು ನಿರೂಪಿಸಿ, ಕಾಲೇಜು ಪ್ರಾಂಶುಪಾಲ ಎಲ್. ಲಕ್ಮೀ ನಾರಾಯಣ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ಸಾಗಿತು. ಸೇಕ್ರೆಟ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುತ್ತಾ ಸ್ವಾತಂತ್ರ್ಯ ಸೇನಾನಿಗಳಿಗೆ ಜಯಕಾರ ಮೊಳಗಿಸುತ್ತ ಹೆಜ್ಜೆ ಹಾಕಿದರು.







































