ಬೈಂದೂರು : ಶ್ರೀ ಕ್ಷೇತ್ರ ಬೊಳಂಬಳ್ಳಿಯಲ್ಲಿ ಪಂಚಕಲ್ಯಾಣ ಮಹೋತ್ಸವ, ನೂತನ ಶಿಲಾಮಯ ಮಾನಸ್ತಂಭ ಪ್ರತಿಷ್ಠಾಪನೆ

ಬೈಂದೂರು : ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಶ್ರೀ ಕ್ಷೇತ್ರ ಬೊಳಂಬಳ್ಳಿ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಪಂಚಕಲ್ಯಾಣ ಮಹೋತ್ಸವ, ನೂತನ ಶಿಲಾಮಯ ಮಾನಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮ ಏ. 6ರಿಂದ ಏ. 10ರ ವರೆಗೆ ನಡೆಯಲಿದೆ.
12 ವರ್ಷಕ್ಕೊಮ್ಮೆ ಜರಗುವ ಶ್ರೀ ಕ್ಷೇತ್ರ ಬೊಳಂಬಳ್ಳಿ ಶ್ರೀ ಪಾರ್ಶ್ವನಾಥ ಸ್ವಾಮಿ, ಆಳುಪ ರಾಜ ಮನೆತನದ ದೇವಿ ಮಹಾಮಾತೆ ಪದ್ಮಾವತಿ ಅಮ್ಮನವರ ದೇವಸ್ಥಾನ ಬಸದಿಯ ಪಂಚಕಲ್ಯಾಣ ಮಹೋತ್ಸವ, ನೂತನ ಶಿಲಾಮಯ ಮಾನಸ್ತಂಭ ಪ್ರತಿಷ್ಠಾಪನೆ, ಶ್ರೀ ದೇವರ ರಥೋತ್ಸವ ಮಹೋತ್ಸವವು ಮೂಡಬಿದ್ರೆ ಜೈನಮಠ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಹೊಂಬುಜ ಜೈನ ಮಠ ದೇವೇಂದ್ರಕೀರ್ತಿ ಭಟ್ಟಾರಕ ಹಾಗೂ ಸೋಂದೆ ಮಠ ಭಟ್ಟಾಕಳಂಕ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ. ಡಿ .ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಜರಗಲಿರುವುದು.

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
ಪ್ರತಿದಿನ ಬೆಳಗ್ಗಿನಿಂದ ರಾತ್ರಿಯವರೆಗೆ ದೇವಪೂಜಾ ಕಾರ್ಯಗಳು, ಮಹಾಮಾತೆ ಪದ್ಮಾವತಿಯ ಆರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ, ಹಾಗೂ ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮಗಳು, ರಾತ್ರಿ 8 ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ ಜೋಡಾಟ, ನಾಟಕಗಳು, ಮನುಹಂದಾಡಿ ಅವರಿಂದ ಕಾರ್ಯಕ್ರಮಗಳು, ಮಹೇಶ ಹರಪನಹಳ್ಳಿ ಬಳಗದವರಿಂದ ಸಂಗೀತ ರಸಮಂಜರಿ, ಗಂಗೊಳ್ಳಿ ಜೂನಿಯರ್ ಗುರುಕಿರಣ್ ರವರಿಂದ ನೃತ್ಯ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಹೆಗ್ಗಡೆ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ರಾಘವೇಂದ್ರ, ಸಹಕಾರಿ ಧುರೀಣ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಬಸ್ರೂರು ಅಪ್ಪಣ್ಣ ಹೆಗಡೆ, ರಾಜಶೇಖರ್ ಹೆಬ್ಬಾರ್, ಪೃಥ್ವಿರಾಜ್ ಜೈನ್ ಹಾಗೂ ಇನ್ನಿತರರು ಭಾಗವಹಿಸಲಿರುವರು ಎಂದು ದೇವಸ್ಥಾನದ ಧರ್ಮದರ್ಶಿ ಧರ್ಮರಾಜ್ ಜೈನ್, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಆಕಾಶರಾಜ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























































































































































































































error: Content is protected !!
Scroll to Top