ಬೆಂಗಳೂರು: ಖಾಸಗಿ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ದೇವಸ್ಥಾನಗಳ ಮೇಲೆ ಮುಜರಾಯಿ ಇಲಾಖೆಯಿಂದ ಕಣ್ಗಾವಲು ಇಡುವ ಯಾವುದೇ ಚಿಂತನೆಯೂ ಇಲ್ಲ. 2015ರಿಂದ ಜಾರಿಯಲ್ಲಿರುವ ನಿಯಮದ ಪ್ರಕಾರ ನೋಂದಣಿಗೆ ನೆನಪೋಲೆಯನ್ನು ಮಾತ್ರ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಖಾಸಗಿ ದೇವಾಲಯಗಳನ್ನೂ ನೋಂದಣಿ ಮಾಡಿಸಬೇಕು ಎಂಬ ನಿಯಮ 2015ರಿಂದಲೂ ಜಾರಿಯಲ್ಲಿದೆ. ಈ ಸಂಬಂಧ ಪ್ರತಿವರ್ಷವೂ ನೆನಪೋಲೆ ಕಳುಹಿಸಲಾಗಿತ್ತು. ಈ ಬಾರಿಯೂ ನೆನಪೋಲೆ ರವಾನೆಯಾಗಿದೆ. ಅದನ್ನೇ ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗಿದೆ,

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿರುವ ದೇವಸ್ಥಾನಗಳ ನೋಂದಣಿಗಾಗಿ ಈ ನಿಯಮ ಜಾರಿಯಲ್ಲಿದೆ. ದೇವಸ್ಥಾನಗಳ ವಿವರ, ಸ್ಥಿರ ಮತ್ತು ಚರ ಆಸ್ತಿಗಳ ಮಾಹಿತಿಯನ್ನು ನೋಂದಣಿ ವೇಳೆ ಸಲ್ಲಿಸಬೇಕೆಂಬುದು ನಿಯಮದಲ್ಲಿದೆ. ಇದು ಕೇವಲ ನೋಂದಣಿಗೆ ಸೀಮಿತವಾದ ನಿಯಮ. ಖಾಸಗಿ ದೇವಾಲಯಗಳ ಮೇಲೆ ಸರ್ಕಾರ ಹಕ್ಕು ಚಲಾಯಿಸುವ ಪ್ರಶ್ನೆಯೇ ಇಲ್ಲ. ಜನರು ಬಯಸಿದರೆ ನೋಂದಣಿಗೆ ಸಂಬಂಧಿಸಿದ ನಿಯಮದ ಬಗ್ಗೆಯೂ ಮರುಪರಿಶೀಲನೆ ನಡೆಸಲು ಸಿದ್ಧ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕ ರೋಗಕ್ಕೂ ಮುನ್ನ 1,500 ಅರ್ಜಿಗಳು ಬಂದಿತ್ತು. ಇಲಾಖೆ ವತಿಯಿಂದಲೇ ಸಾಕಷ್ಟು ವಿವಾಹಗಳನ್ನು ನೇರವೇರಿಸಲಾಗಿದೆ. ಸಾಂಕ್ರಾಮಿಕ ರೋಗದ ಬಳಿಕವೂ ಸಾಕಷ್ಟು ಅರ್ಜಿಗಳು ಬಂದಿವೆ. ಸಾಮೂಹಿಕ ವಿವಾಹ ನಡೆಸಲು ಪ್ರತೀ ತಿಂಗಳೂ 4-5 ಮುಹೂರ್ತಗಳನ್ನು ಅಧಿಕಾರಿಗಳು ಕೇಳಿದ್ದರು. ಮಾರ್ಚ್, ಏಪ್ರಿಲ್ ಮೇ ತಿಂಗಳಿನಲ್ಲಿ 5-6 ಮುಹೂರ್ತಗಳು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.






























































