ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೈಕಮಾಂಡ್ ಭೇಟಿ ಫಲಪ್ರದವಾಗಿದ್ದು, ಜ. 13 ಅಥವಾ 14ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಬಿಎಸ್‌ವೈ ಅವರು ರವಿವಾರ ದಿಲ್ಲಿಯಲ್ಲಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೆ ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಕುರಿತು ಚರ್ಚಿಸಿರುತ್ತಾರೆ ಎಂದು ತಿಳಿದುಬಂದಿದೆ.
ಸುನಿಲ್ ಕುಮಾರ್‌ಗೆ ಸಚಿವ ಸ್ಥಾನ
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿಯಿರುವ 7 ಸ್ಥಾನಗಳ ಭರ್ತಿಗೆ ವರಿಷ್ಠರು ಹಸಿರು ನಿಶಾನೆ ತೋರಿದ್ದು ಸಚಿವರಾಗುವವರ ಹೆಸರು ಬಿಡುಗಡೆಗೆ ಕ್ಷಣಗಣನೆ ನಡೆಯುತ್ತಿದೆ. ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರ ಹೆಸರೂ ಸಂಭಾವ್ಯ ಪಟ್ಟಿಯಲ್ಲಿದೆ. ಪಕ್ಷ ಸಂಘಟನೆ, ನಾಯಕತ್ವ, ತನ್ನ ಕಾರ್ಯವೈಖರಿ ಮೂಲಕವೇ ಜನಪ್ರಿಯವಾಗಿರುವ ಶಾಸಕ ಸುನಿಲ್ ಕುಮಾರ್ ಅವರಿಗೆ ಈ ಬಾರಿ ಸಚಿವ ಸ್ಥಾನ ದೊರೆಯಲಿದೆ ಎನ್ನಲಾಗುತ್ತಿದೆ. ಉಳಿದಂತೆ ಶಾಸಕರಾದ ಮುನಿರತ್ನ, ಎಂಟಿಬಿ ನಾಗರಾಜ್, ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಹೆಸರು ಚಾಲ್ತಿಯಲ್ಲಿದೆ.






























































