ಕಾರ್ಕಳ : ರಾಮಸಮುದ್ರ ಬಳಿಯ ರೋಟರಿ ಉದ್ಯಾನವನಕ್ಕೆ ಕಾರ್ಕಳ ರೋಟರಿ ಕ್ಲಬ್ ಹೊಸ ಮೆರುಗು ನೀಡಿದೆ. 1996ರಲ್ಲಿ ರೋಟರಿಯ ಅಂದಿನ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅವರ ನೇತೃತ್ವದಲ್ಲಿ ಅಭಿವೃದ್ದಿಪಡಿಸಲಾಗಿದ್ದ ಉದ್ಯಾನವನ ಕಾಲ ಕ್ರಮೇಣ ನಿರ್ವಹಣೆಯಿಲ್ಲದೇ ಪಾಳು ಬಿದ್ದಿತ್ತು. ಹೀಗೆ ಪಾಳು ಬಿದ್ದ ರೋಟರಿ ಉದ್ಯಾನವನವನ್ನು ರೋಟರಿ ಕ್ಲಬ್ ಕಾರ್ಕಳ, ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುನಃ ನವೀಕರಣಗೊಳಿಸಲಾಗಿದೆ. ಮಕ್ಕಳ ಆಟಕ್ಕಾಗಿ ಮಾಡಲಾದ ವಿವಿಧ ಸಲಕರಣೆಗಳ ದುರಸ್ತಿ, ವೇದಿಕೆ ಪುನಃ ನವೀಕರಣ, 2 ಎಕ್ರೆಯಲ್ಲಿ ತುಂಬಿದ್ದ ಪೊದೆ ತೆರವು ಮಾಡಲಾಗಿದೆ.
ಮುಕ್ತ ಅವಕಾಶ
ಮಕ್ಕಳ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳಿಗಾಗಿ ಇಲ್ಲಿನ ಉದ್ಯಾನವನವನ್ನು ರೋಟರಿ ಪಿಡಿಜಿ ಡಾ. ಭರತೇಶ್ ಆದಿರಾಜ್ ಹಾಗೂ ಮಾಜಿ ಅಧ್ಯಕ್ಷ ಹರಿಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉದ್ಯಾನವನ ಪ್ರವೇಶ ಉಚಿತವಾಗಿದ್ದು ಶಿಕ್ಷಕರು, ಮಕ್ಕಳ ಹೆತ್ತವರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಇಲ್ಲಿ ಹಲವಾರು ಔಷಧೀಯ ಗಿಡಗಳಿದ್ದು, ಮುಂದಿನ ದಿನಗಳಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್, ಸುಸಜ್ಜಿತ ವೇದಿಕೆ, ಶೌಚಾಲಯ ನಿರ್ಮಿಸಲಾಗುವುದು.
ರೇಖಾ ಉಪಾಧ್ಯಾಯ
ಅಧ್ಯಕ್ಷರು, ರೋಟರಿ ಕ್ಲಬ್ ಕಾರ್ಕಳ






























































