ಬೆಂಗಳೂರು, ನ.21: ಕೊರೊನ ಪೀಡಿತರಾಗಿ ಅಸುನೀಗಿರುವ ಮೂಡಬಿದಿರೆಯ ಶಿಕ್ಷಕಿ ಪದ್ಮಾಕ್ಷಿ ಅವರಿಗೆ ಸರಕಾರ ಘೋಷಿಸಿರುವ 30 ಲ.ರೂ. ಪರಿಹಾರ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಬೋಜೆ ಗೌಡ ಸರಕಾರವನ್ನು ಒತ್ತಾಯಿಸಿದ್ದಾರೆ.
ವಿದ್ಯಾಗಮದಂಗವಾಗಿ ಕೆಲಸ ನಿರ್ವಹಿಸುತ್ತಿರುವಾಗ ಪದ್ಮಾಕ್ಷಿ ಅವರಿಗೆ ಕೊರೊನ ಸೋಂಕು ತಗಲಿತ್ತು. ಆಸ್ಪತ್ರೆಯಲ್ಲಿ ಹಲವು ದಿನ ಜೀವನ್ಮರಣ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ಪದ್ಮಾಕ್ಷಿಯವರ ಕುಟುಂಬಕ್ಕೆ 30 ಲ.ರೂ. ಪರಿಹಾರ ನೀಡುವುದಾಗಿ ಹೇಳಿತ್ತು. ಈ ಹಣವನ್ನು ತಕ್ಷಣ ಅವರ ಕುಟುಂಬದವರಿಗೆ ಕೊಡಬೇಕು ಹಾಗೂ ಆಸ್ಪತ್ರೆಯ 4.5 ಲ.ರೂ.ಯನ್ನು ಮನೆಯವರಿಗೆ ಪಾವತಿಸಬೇಕೆಂದು ಪದ್ಮಾಕ್ಷಿಯವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಬೋಜೆ ಗೌಡ ಒತ್ತಾಯಿಸಿದರು.
ಕೊರೊನದಿಂದಾಗಿ ಮೃತಪಟ್ಟ ಕೋವಿಡ್ ವಾರಿಯರ್ಸ್ ಗಳಿಗೆ ತಲಾ 30 ಲ.ರೂ. ಪರಿಹಾರ ಕೊಡುವುದಾಗಿ ಸರಕಾರ ಹೇಳಿದೆ. ಆದರೆ ಮೈಸೂರಿನ ಓರ್ವ ವೈದ್ಯರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಈ ಪರಿಹಾರ ಸಿಕ್ಕಿಲ್ಲ ಎಂದಿದ್ದಾರೆ. ಶಿಕ್ಷಕರನ್ನೂ ಕೋವಿಡ್ ವಾರಿಯರ್ಸ್ ಎಂದೇ ಪರಿಗಣಿಸಬೇಕೆಂದು ಬೋಜೆ ಗೌಡ ಆಗ್ರಹಿಸಿದ್ದಾರೆ.
ಕೊರೊನಕ್ಕೆ ಬಲಿಯಾಗಿರುವ ಮೂಡಬಿದಿರೆಯ ಶಿಕ್ಷಕಿಯ ಕುಟುಂಬಕ್ಕೆ ಪರಿಹಾರ ಹಣ ನೀಡಲು ಒತ್ತಾಯ






























































