Wednesday, October 27, 2021
spot_img
Homeಸಂವಾದಬಿಜೆಪಿ ಕಾರ್ಯಕಾರಿಣಿ ತೀರ್ಮಾನಗಳ ಮೇಲೊಂದು ಟಿಪ್ಪಣಿ

ಬಿಜೆಪಿ ಕಾರ್ಯಕಾರಿಣಿ ತೀರ್ಮಾನಗಳ ಮೇಲೊಂದು ಟಿಪ್ಪಣಿ


ಪ್ರಜಾಸತ್ತೆಯಲ್ಲಿ ಒಂದು ರಾಜಕೀಯ ಪಕ್ಷದ ಬೃಹತ್ ಕಾರ್ಯಕಾರಿಣಿ ಸಭೆಯ ತೀರ್ಮಾನ ಆ ಪಕ್ಷದ ಆಡಳಿತಾರೂಢ ಸರ್ಕಾರದ ಮೇಲೆ ಹೇರಿಕೆ ( binding)ಯಾಗುವುದಿಲ್ಲ. ಅದು ಪಕ್ಷದ ನಿಲುವು ಅಥವಾ ಧೋರಣೆ ಎಂಬಷ್ಟಕ್ಕೆ ಸೀಮಿತ. ಸಂಸದೀಯ ಭಾಷೆಯಲ್ಲಿ ಅದನ್ನು extra constitutional caucus ಎಂದು ಕರೆಯುತ್ತಾರೆ. ಆದಾಗ್ಯೂ ಅದೇ ಪಕ್ಷದ ನೇತೃತ್ವದ ಸರ್ಕಾರವಿದ್ದಾಗ ಕೆಲವೊಂದು ಸಲಹೆಗಳನ್ನು ಸ್ವೀಕರಿಸಿ ಅನುಷ್ಠಾನಕ್ಕೆ ತರಲು ಮುಂದಾದರೆ ಅದರಲ್ಲಿ ಅಸಹಜತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಗುರುವಾರ ಮಂಗಳೂರಿನಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯ ತೀರ್ಮಾನದ ಅವಲೋಕನ ಪ್ರಸ್ತುತ. ಎರಡು ಮುಖ್ಯ ನಿರ್ಣಯಗಳೆಂದರೆ, ಲವ್ ಜೆಹಾದ್ ನಿಯಂತ್ರಣಕ್ಕೆ ಕಠಿಣ ಕಾಯಿದೆ ರೂಪಿಸುವುದು ಹಾಗೂ ಗೋಹತ್ಯಾ ನೀಷೆಧ ಕಾನೂನು ಜಾರಿ.ಈ ಎರಡನ್ನು ಹಾಲಿ ಕಾನೂನಿಂದಲೇ ನಿಯಂತ್ರಿಸಲು ಸಾಧ್ಯವಿಲ್ಲವೇ?
ಲವ್ ಜೆಹಾದ್ ಎಂದರೆ ಅದರಲ್ಲಿ ಶೇ. 99%ರಷ್ಟು ವಂಚನೆ (cheating) ನಡೆಯುತ್ತದೆ ಎನ್ನುವುದು ಸಂಶಯಾತೀತವಾಗಿ ಸತ್ಯ.ಚೀಟಿಂಗ್ ಒಂದು ಕ್ರಿಮಿನಲ್ ಅಪರಾಧ. ಭಾರತೀಯ ದಂಡ ಸಂಹಿತೆಯ ಮೂಲಕ ಅದನ್ನು ಹಾಲಿ ಪೋಲಿಸ್ ವ್ಯವಸ್ಥೆಯಿಂದಲೇ ನಿಯಂತ್ರಿಸಬಹುದು.ಆದರೆ ಕಠಿಣ ಕಾಯಿದೆ ರೂಪಿಸುವ ಪ್ರಸ್ತಾಪ ನಮ್ಮ ಪೋಲೀಸ್ ವ್ಯವಸ್ಥೆ ನೀರಿಕ್ಷಿತ ಮಟ್ಟದ ಪರಿಪೂರ್ಣತೆ ಹೊಂದಿಲ್ಲ, ಪರಿಣಾಮವಾಗಿ ಅಗತ್ಯ ದಕ್ಷತೆಯೂ ಇಲ್ಲವೆಂಬುದನ್ನು ಸೂಚಿಸುತ್ತದೆ. ಅನುಷ್ಠಾನ ಪ್ರಾಧಿಕಾರದಲ್ಲಿ ದಕ್ಷತೆ ಇಲ್ಲದಿದ್ದರೆ ಹೊಸ ಕಾಯಿದೆ ರೂಪಿಸುವ ಅಥವಾ ಇದ್ದ ಕಾನೂನನ್ನು ಕಠಿಣಗೊಳಿಸುವುದರಿಂದ ಏನು ಪ್ರಯೋಜನ?
ಗೋಹತ್ಯಾ ನಿಷೇಧ ನಮ್ಮ ಸಂವಿಧಾನದ ನಿರ್ದೇಶಕ ತತ್ವದಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೆಲವು ರಾಜ್ಯಗಳು ಕಾನೂನು ರೂಪಿಸಿದ್ದಾವೆ.ಕೆಲವು ರಾಜ್ಯಗಳು ಕಾನೂನು ರಚಿಸಿ, ವಾಪಾಸು ತೆಗೆದುಕೊಳ್ಳುವ ಕೆಲಸ ಮಾಡುತ್ತಾ ಇದ್ದಾವೆ.ಅವುಗಳಲ್ಲಿ ಕರ್ನಾಟಕ ಒಂದು. ಭಾಜಪ ನೇತೃತ್ವದ ಕರ್ನಾಟಕ ಸರ್ಕಾರ ಈ ಕಾಯಿದೆಗೆ ಮರುಜೀವ ಕೊಡುವುದಾದಲ್ಲಿ “ಗೋಸಂಗೋಪನೆ” ಯೋಜನೆಯೋಂದಿಗೆ ಕಾನೂನು ತರುವುದು ವಿಹಿತ. ಈ ಯೋಜನೆಯಲ್ಲಿ ಹುಲ್ಲುಗಾವಲು ಹಾಗು ಗೋಮಾಳಗಳನ್ನು ರೂಪಿಸುವ ಧ್ವನಿ ಅಡಕವಾಗಿದೆ. ಸರಕಾರ ಇಂಥ ರಚನಾತ್ಮಕ ಕಾರ್ಯಕ್ರಮಗಳಿಂದ ದೇಶಕ್ಕೆ ಮಾದರಿಯಾಗಬಹುದು.
ಇನ್ನು ಈ ಕಾರ್ಯಕಾರಣಿ ಸರಕಾರವನ್ನು ಹೊಗಳುವ ಘೋಷಣೆ ಮಾಡಿದೆ. ತಮ್ಮ ಪಕ್ಷದ ಸರಕಾರವನ್ನು ಹೊಗಳು ವುದು ತಪ್ಪೇನಲ್ಲ.ಆದರೆ ನೆರೆ ಹಾವಳಿ ನಿರ್ವಹಣೆ ಹಾಗೂ ಕೋವಿಡ್-19 ನಿಯಂತ್ರಣ ಯಶಸ್ವಿಯಾಗಿದೆ ಎಂಬ ಹಾಗೆ ಹೇಳಿರುವುದು ಸಮರ್ಥನೀಯವಲ್ಲ. ಆಗಸ್ಟ್‌, ಸೆಪ್ಟೆಂಬರ್ ನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದರೆ ಸರ್ಕಾರದ ಕಾರ್ಯ ವೈಖರಿಯನ್ನು ಪ್ರಶಂಸಿಸುವುದು ಔಚಿತ್ಯ ಪೂರ್ಣವಾಗುತಿತ್ತು.ಈಗ ದೇಶದ ಎಲ್ಲ ಕಡೆ ಕೊರೊನ ಇಳಿಮುಖವಾಗುತ್ತಿರುವುದು ಹಾಗೆಯೇ ಕರ್ನಾಟಕದಲ್ಲಿಯೂ ಕಡಿಮೆ ಆಗಿರುವುದು ಅದರಷ್ಟಕ್ಕೆ ಆಗಿದೆ ಎಂಬ ತೀರ್ಮಾನಕ್ಕೆ ಜನ ಬಂದಿದ್ದಾರೆ.ಅವಶ್ಯಕ ಸೇವೆಯಡಿ ಬರುವ ಇಲಾಖೆಗಳ ಸುಸ್ಥಿತಿ ಕಾಪಾಡುವ ಬಗ್ಗೆ ಯಾವ ಪಕ್ಷವೂ ಗಂಭೀರ ಚಿಂತನೆ ನಡೆಸುವುದಿಲ್ಲ ಎನ್ನುವುದು ಗಮನಾಹ೯. ಇರಲಿ, ಪ್ರಜಾಸತ್ತೆಯಲ್ಲಿ ನಂಬಿಕೆಯುಳ್ಳ ದೊಡ್ಡ ರಾಜಕೀಯ ಪಕ್ಷದ ಕಾರ್ಯಕಾರಿಣಿ “ಭ್ರಷ್ಟಾಚಾರ ರಹಿತವಾದ ಆಡಳಿತ” ನಡೆಸಲು ಸರಕಾರಕ್ಕೆ ಸಲಹೆ ನೀಡುತ್ತೇವೆ ಎಂದು ಘೋಷಿಸಿದ್ದರೆ
ಅದರ ಔಚಿತ್ಯವೇ ಬೇರೆಯಾಗುತಿತ್ತು.
ಬೇಳೂರು ರಾಘವ ಶೆಟ್ಟಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!